ಬೆಳೆವಿಮೆ ತಾರತಮ್ಯ ಸರಿಪಡಿಸಲು ಆಶೋಕ್ ರೈ ಆಗ್ರಹ: ಸ್ಪೀಕರ್ ನೇತೃತ್ವದಲ್ಲಿ ಸಭೆಗೆ ಸರ್ಕಾರದ ನಿರ್ಧಾರ

ಪುತ್ತೂರು: ಪ್ರಾಕೃತಿಕ ವಿಕೋಪಗಳಿಂದ ೨೦೨೪ ಅವಧಿಯಲ್ಲಿ ಬೆಳೆಹಾನಿಗೆ ನೀಡಲಾದ ಬೆಳೆ ವಿಮಾ ಪರಿಹಾರ ಅತ್ಯಂತ ಕಡಿಮೆಯಾಗಿರುವುದನ್ನು ಶಾಸಕ ಅಶೋಕ್ ರೈ ಅವರು ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ನೇತೃತ್ವದಲ್ಲಿ ತೋಟಗಾರಿಕಾ ಸಚಿವರು, ವಿಮಾ ಕಂಪೆನಿ ಹಾಗೂ ಅವಿಭಜಿತ ದಕ ಜಿಲ್ಲೆಯ ಶಾಸಕರ ಸಭೆ ನಡೆಸಲು ತೀರ್ಮಾನ ಕೈಗೊಂಡಿದೆ.
ಬುಧವಾರ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಅಶೋಕ್ ರೈ ಅವರು ಈಗಾಗಲೇ ವಿತರಿಸಿದ ಪರಿಹಾರ ಮೊತ್ತ ಸಮರ್ಪಕವಾಗಿಲ್ಲ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಂಬ ಸಂಸ್ಥೆಯು ಟೆಲಿಮೆಟ್ರಿಕ್ ಮಾಪನ ಅಳವಡಿಸಿ ಹವಾಮಾನ ಆಧಾರಿತ ಬೆಳೆ ವಿಮಾ ಸಮೀಕ್ಷೆಯನ್ನು ನಡೆಸಿದೆ. ಈ ಸಮೀಕ್ಷೆ ಆಧಾರವಾಗಿಟ್ಟುಕೊಂಡು ಬೆಳೆ ವಿಮೆ ಪರಿಹಾರವನ್ನು ಪಾವತಿ ಮಾಡಲಾಗುತ್ತದೆ. ಕಳೆದ ಬಾರಿಗಿಂತ ಈ ಬಾರಿ ಎರಡು ತಿಂಗಳ ತಡವಾಗಿ ವಿಮಾ ಮೊತ್ತವನ್ನು ನೀಡಲಾಗಿದೆ. ಆದರೆ ಪಾವತಿಯಾಗಿರುವ ಮೊತ್ತ ಕಟ್ಟಿದ ಪ್ರೀಮಿಯಂ ಕಂತಿಗಿಂತಲೂ ಕಡಿಮೆಯಾಗಿದೆ. ಇದು ಅತ್ಯಂತ ಗಂಭೀರವಾದ ವಿಚಾರವಾಗಿದೆ. ಇಷ್ಟೊಂದು ಕಡಿಮೆ ಮೊತ್ತವನ್ನು ವಿಮಾ ಕಂಪೆನಿ ಪಾವತಿ ಮಾಡಿರುವುದು ದುರದೃಷ್ಟಕರವಾಗಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಸರಿಯಾಗಿ ಪಾವತಿ ಮಾಡಬೇಕು ಎಂದು ಆಗ್ರಹಿಸಿದರು.
ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಕೃಷಿಕರು ಸಂಕಷ್ಟದಲ್ಲಿದ್ದಾರೆ. ಒಂದು ಕಡೆ ವಿಪರೀತ ಮಳೆ ಇನ್ನೊಂದೆಡೆ ಹಳದಿರೋಗ ಮತ್ತು ಎಲೆ ಚುಕ್ಕಿ ರೋಗದಿಂದ ಬೆಳೆದ ಅಡಿಕೆ ಸಂಪೂರ್ಣ ನಾಶವಾಗಿದೆ. ಬೆಳೆ ವಿಮೆಯಾದರೂ ಸಿಗುತ್ತದಲ್ಲ ಎಂಬ ಧೈರ್ಯದಿಂದ ಇದ್ದ ಕೃಷಿಕರು ಈಗ ಚಿಂತಾಕ್ರಾಸ್ತರಾಗಿದ್ದಾರೆ. ಬೆಳೆ ವಿಮೆ ಸಿಗುತ್ತದೆ ಎಂದು ಸಾಲ ಮಾಡಿ ತಮ್ಮ ಕೃಷಿಯನ್ನು ಉಳಿಸುವ ಕೆಲಸವನ್ನು ಮಾಡಿದ್ದಾರೆ. ಇತ್ತ ಬೆಳೆದ ಅಡಿಕೆಯೂ ಇಲ್ಲ, ಬೆಳೆ ವಿಮೆಯೂ ಇಲ್ಲ ಎಂಬಂತಾಗಿದೆ. ಕೃಷಿಕರು ಏನು ಮಾಡಬೇಕು ಎಂದು ದಿಕ್ಕೇ ತೋಚದಂತಾಗಿದೆ ಎಂದು ಅವರು ಹೇಳಿದರು.
ಊರಿಗೆ ಹೋಗುವುದು ಹೇಗೆ…!
ಅಡಿಕೆ ಬೆಳೆಗಾರರ ಪರವಾಗಿ ಸದನದಲ್ಲಿ ಗಟ್ಟಿದ್ವನಿಯಲ್ಲಿ ಮಾತನಾಡಿದ ಶಾಸಕ ಅಶೋಕ್ ರೈ ಅವರು ಹವಾಮಾನ ಆಧರಿತ ಬೆಳೆ ವಿಮಾ ಪರಿಹಾರ ಮೊತ್ತದಲ್ಲಿ ಲೋಪವಾಗಿದೆ. ಇದರಿಂದ ಕೃಷಿಕರಿಗೆ ಆತಂಕ ಉಂಟಾಗಿದೆ. ಸರ್ಕಾರ ಇದಕ್ಕೆ ಸೂಕ್ತ ರೀತಿಯಲ್ಲಿ ಪರಿಹಾರವನ್ನು ಒದಗಿಸಬೇಕು. ಯಾವ ಆಧಾರದಲ್ಲಿ ಈ ರೀತಿ ಪರಿಹಾರ ವಿಮಾ ಮೊತ್ತವನ್ನು ಪಾವತಿ ಮಾಡಿದ್ದಾರೆ ಎಂಬುದನ್ನು ಪರಿಶೀಲನೆ ಮಾಡಬೇಕು. ದ ಕ ಮತ್ತು ಉಡುಪಿ ಜಿಲ್ಲೆಯ ಜನ ಅಡಿಕೆ, ಕಾಳುಮೆಣಸು ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಈ ಬಾರಿಯ ಮಳೆಗೆ ಎಲ್ಲವೂ ನಾಶವಾಗಿದೆ. ವಿಮಾ ಮೊತ್ತವೂ ಸರಿಯಾಗಿ ಪಾವತಿಯಾಗದೇ ಇದ್ದಲ್ಲಿ ಅಧಿವೇಶನ ಮುಗಿದು ನಾವು ಹೇಗೆ ಊರಿಗೆ ಹೋಗುವುದು. ಅಲ್ಲಿ ಜನ ನಮ್ಮನ್ನು ಪ್ರಶ್ನಿಸುತ್ತಾರೆ. ಅವರ ಪ್ರಶ್ನೆಗೆ ಹೇಗೆ ಉತ್ತರ ಕೊಡಲಿ ಎಂದು ಪ್ರಶ್ನಿಸಿದರು.
—ಕೋಟ್–
ಕಂಪೆನಿಯ ತಾರತಮ್ಯ
೨೦೨೩ ರಲ್ಲಿ ೩೨೮೪ ಮಿ ಮೀ ಮಳೆ ಬಿದ್ದಿದೆ. ಆ ವರ್ಷದಲ್ಲಿ ೨.೫ ಎಕ್ರೆ ಜಾಗವಿರುವ ರೈತರು ೬೪೦೦ ಪ್ರೀಮಿಯಂ ಪಾವತಿಸಿದ್ದಾರೆ. ಅವರಿಗೆ ರೂ ೬೫೪೦೦ ವಿಮೆ ಸಿಕ್ಕಿದೆ, ೨೦೨೪ ರಲ್ಲಿ ೬೮೦೦ ಪ್ರೀಮಿಯಂ ಪಾವತಿ ಮಾಡಿದ್ದಾರೆ. ಆದರೆ ೪೫೦೦ ರೂ ವಿಮೆ ಸಿಕ್ಕಿದೆ. ೧ ಎಕ್ರೆಗೆ ೩೫೦೦ ಪ್ರೀಮಿಯಂ ಪಾವತಿ ಮಾಡಿದ್ದಾರೆ. ೨೪೦೦೦ ರೂ ವಿಮೆ ಸಿಕ್ಕಿದೆ. ಈ ರೀತಿಯ ತಾರತಮ್ಯ ಟಾಟಾ ಎಎಜಿ ಕಂಪೆನಿ ಮಾಡಿದೆ. ಪ್ರೀಮಿಯಂ ಕಟ್ಟಿದಕ್ಕಿಂತ ಕಡಿಮೆ ವಿಮಾ ಮೊತ್ತ ಕೆಲವರಿಗೆ ಬಂದಿದೆ- ಅಶೋಕ್ ರೈ