
ಪುತ್ತೂರು: ರೈತರಿಗೆ ಬೆಳೆವಿಮೆಯ ವಿಚಾರದಲ್ಲಿ ಟರ್ಮ್ ಶೀಟ್ ಬದಲಾಯಿಸಿರುವುದು ಕಾಂಗ್ರೇಸ್ ಅಲ್ಲ. ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಸ್ತಿತ್ವಕ್ಕೆ ಬರುವ ಮೊದಲೇ ಟರ್ಮ್ ಶೀಟ್ ಬದಲಾವಣೆಯಾಗಿತ್ತು. ಈ ವಿಚಾರದಲ್ಲಿ ಬಿಜೆಪಿ ಅಪ್ಪಟ ಸುಳ್ಳು ಹೇಳುತ್ತಿದೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಹೇಳಿದರು.
ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ೨೦೨೩ರಲ್ಲಿ ಕಾಂಗ್ರೇಸ್ ನೇತೃತ್ವದ ಸರ್ಕಾರ ಬರುವ ಮೊದಲೇ ಟರ್ಮ್ ಶೀಟ್ ಬದಲಾವಣೆಯಾಗಿತ್ತು. ಆದರೆ ಬಿಜೆಪಿ ಮುಖಂಡರು ಕಾಂಗ್ರೇಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಹಂಗಾಮಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಥಾವರ್ಚಂದ್ ಗೆಹ್ಲೂಟ್ ರಾಜ್ಯಪಾಲರಾಗಿದ್ದ ಸಂದರ್ಭ ಈ ಬೆಳವಣಿಗೆ ನಡೆದಿತ್ತು. ಇದನ್ನು ಮುಚ್ಚಿಡುವ ಬಿಜೆಪಿಗರು ಈಗ ಕಾಂಗ್ರೇಸ್ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
೨೦೧೬ರಲ್ಲಿ ಮೋದಿ ಸರಕಾರ ವಿಮೆ ಯೋಜನೆ ಜಾರಿಗೆ ತಂದಾಗ ರಾಜ್ಯದಲ್ಲಿ ಇದನ್ನು ಸ್ವೀಕರಿಸಿದ್ದು ಅಂದಿನ ಸಿದ್ದರಾಮಯ್ಯರ ಕಾಂಗ್ರೆಸ್ ಸರಕಾರ. ಬಿಜೆಪಿ ಅ ಕಾರದಲ್ಲಿರುವ ಗುಜರಾತ್ ಸೇರಿದಂತೆ ಅನೇಕ ರಾಜ್ಯ ಸರಕಾರಗಳು ಸ್ವೀಕರಿಸಿರಲಿಲ್ಲ. ಯೋಜನೆಯಲ್ಲಿ ಕೇಂದ್ರದ ಪಾಲು ಶೇ.೧೦ ಮತ್ತು ರೈತರ ಪಾಲು ಶೇ. ೫ ಶಾಶ್ವತ. ಆದರೆ ರಾಜ್ಯಗಳ ಪಾಲನ್ನು ಮಾತ್ರ ಕಾಲಕ್ಕೆ ಸರಿಯಾಗಿ ಏರಿಸಬೇಕೆಂಬ ನಿಯಮವನ್ನು ಕೇಂದ್ರ ಸರಕಾರ ರೂಪಿಸಿದೆ.
ಟರ್ಮ್ ಶೀಟ್ ಬದಲಾವಣೆಯಿಂದ ಸಮಸ್ಯೆಯಾಗಿದೆ ಎನ್ನುತ್ತಾರೆ ಬಿಜೆಪಿಗರು. ಮೋದಿ ಸರಕಾರ ರೂಪಿಸಿದ ಕಾನೂನಿನಲ್ಲೇ ಟರ್ಮ್ ಶೀಟ್ ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ. ತಾಕತ್ತಿದ್ದರೆ ಬಿಜೆಪಿಗರು ಮೋದಿ ಸರಕಾರದ ಮೇಲೆ ಒತ್ತಡ ತಂದು ಮಾರ್ಗಸೂಚಿಯನ್ನೇ ಬದಲಾಯಿಸಲಿ. ವಿಮಾ ಕಂಪನಿಗಳು ಮೋಸ ಮಾಡುತ್ತಿವೆ ಎಂಬ ಆರೋಪವಿದ್ದರೆ ವಿಮಾ ನಿಯಂತ್ರಣ ಪ್ರಾಧಿಕಾರದ ಮೂಲಕ ಕೇಂದ್ರ ಸರಕಾರವೇ ತನಿಖೆಗೆ ಆದೇಶಿಸಲು ಅವಕಾಶವಿದೆ. ಅದನ್ನು ಮಾಡಲಿ ಎಂದು ಅವರು ಸವಾಲು ಹಾಕಿದರು.
ವಿಮಾಕಂಪೆನಿ ಸಾಕಲು ತಂದ ಮೋದಿ ಯೋಜನೆ..!
ಹವಾಮಾನ ಆಧರಿತ ಬೆಳೆ ವಿಮೆ ಎಂಬುದು ಒಂದು ನಿಗೂಢ ಯೋಜನೆ. ಇದು ಯಾರಿಗೂ ಪೂರ್ತಿ ಅರ್ಥವಾಗಿಲ್ಲ. ರೈತರು, ಕೇಂದ್ರ, ರಾಜ್ಯ ಸರ್ಕಾರ ಸೇರಿ ಶೇ.೩೫ ಹಣವನ್ನು ಪಾವತಿ ಮಾಡಿದ ಮೇಲೆ ಅಷ್ಟೇ ಮೊತ್ತದ ಹಣ ವಿಮಾ ಪರಿಹಾರ ರೂಪದಲ್ಲಿ ಸಿಗುತ್ತದೆ ಎಂದಾರೆ ಈ ವಿಮಾ ಯೋಜನೆಯ ಅಗತ್ಯವೇನು? ಸರಕಾರಗಳೇ ಪಾಲು ಸೇರಿಸಿ ರೈತರಿಗೆ ನೇರವಾಗಿ ಕೊಡಬಹುದಲ್ಲವೇ? ವಿಮಾ ಕಂಪನಿಗಳೆಂಬ ಮಧ್ಯಸ್ಥಿಕೆದಾರರ ಅಗತ್ಯವೇನು? ಹಾಗಾದರೆ ಖಾಸಗಿ ವಿಮಾ ಕಂಪನಿಗಳನ್ನು ಸಾಕಲು ಮೋದಿ ಸರ್ಕಾರ ಜಾರಿಗೆ ತಂದ ಯೋಜನೆಯೇ ಇದು ಎಂದವರು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಅಬ್ದುಲ್ ರಹಿಮಾನ್ ಆಜಾದ್, ಕಮಲೇಶ್ ಸರ್ವೆ ದೋಳ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ರಾಮ ಮೇನಾಲ ಉಪಸ್ಥಿತರಿದ್ದರು.
—ಬಾಕ್ಸ್ ಐಟಂ–
ಪೂಂಜಾ ಏನು ಹುಟ್ಟಿಸಿದ್ದಾರೆ..!
ತಾನು ಹುಟ್ಟಿಸಿದ್ದಕ್ಕೆ ತಾನೇ ಅಪ್ಪ ಎನ್ನುತ್ತಿದ್ದಾರೆ ಪುತ್ತೂರು ಶಾಸಕರು ಎಂದು ಬೆಳ್ತಂಗಡಿ ಶಾಸಕರು ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ? ಪುತ್ತೂರಿನ ಶಾಸಕರು ಮೆಡಿಕಲ್ ಕಾಲೇಜು, ತಾಲೂಕು ಕ್ರೀಡಾಂಗಣ, ಆರ್ಟಿಒ ಟ್ರ್ಯಾಕ್, ಶ್ರಮಿಕ ಶಾಲೆ, ಅಂಬೇಡ್ಕರ್ ವಸತಿ ಶಾಲೆ, ತಾಪಂ ಕಟ್ಟಡ, ದೇವಳದ ಜಾಗ ಮರು ಸ್ವಾಧೀನದಂಥ ಅನೇಕ ಯೋಜನೆಗಳನ್ನು ಹುಟ್ಟಿಸಿದ್ದಾರೆ. ಹರೀಶ್ ಪೂಂಜರು ಕಳೆದ ೩ ವರ್ಷದಲ್ಲಿ ಯಾವ ಯೋಜನೆ ಹುಟ್ಟಿಸಿದ್ದಾರೆಂದು ಅವರೇ ಹೇಳಲಿ ನೋಡೋಣ.–ಅಮಳ ರಾಮಚಂದ್ರ, ಕೆಪಿಸಿಸಿ ವಕ್ತಾರ.
























