Home ಜಿಲ್ಲೆ ಮೈಸೂರು ಬೆಳಕಿನೊಳಗಣ ಮಹಾಬೆಳಕು ಶಿವಕುಮಾರ ಶ್ರೀ

ಬೆಳಕಿನೊಳಗಣ ಮಹಾಬೆಳಕು ಶಿವಕುಮಾರ ಶ್ರೀ

ಸಂಜೆವಾಣಿ ನ್ಯೂಸ್
ಮೈಸೂರು: ಏ.03:-
ಹುಟ್ಟು ಆಕಸ್ಮಿಕ ಸಾವು ನಿಶ್ಚಿತ. ಸಹಜ ಹುಟ್ಟು ಸಾವಿನ ನಡುವೆ ಮನುಷ್ಯ ಹೇಗೆ ಅಮರತ್ವ ಸಾಧಿಸಬಹುದು ಎನ್ನುವುದಕ್ಕೆ ಶಿವಕುಮಾರ ಶ್ರೀಗಳ ಜೀವನವೇ ಜೀವಂತ ಸಾಕ್ಷಿ. ಅವರು ಬೆಳನೊಳಗಣ ಮಹಾಬೆಳಕು ಎಂದು ಅಖಿಲ ಭಾರತ ವೀರಶೈವ ಮೈಸೂರು ಜಿಲ್ಲಾ ಘಟಕದ ನಿರ್ದೇಶಕ ಕಲ್ಮಳ್ಳಿ ನಟರಾಜು ತಿಳಿಸಿದರು.


ನಂಜನಗೂಡು ವಿದ್ಯಾ ನಗರದ ಸಿದ್ದಗಂಗಾ ಭಕ್ತ ಬಳಗದ ವತಿಯಿಂದ ನಂಜನಗೂಡಿನ ವಿಶ್ವ ಗುರು ಬಸವೇಶ್ವರ ವೃತ್ತದಲ್ಲಿ ಆಯೋಜಿಸಿದ್ದ ಶಿವಕುಮಾರ ಶ್ರೀಗಳ 119ನೇ ಜಯಂತೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ವೀರಾಪುರದ ಶಿವಣ್ಣ ಮುಂದೊಂದು ದಿನ ಜಾತಿ, ಧರ್ಮ, ಲಿಂಗ ಭೇದವೆಣಿಸದೆ ತನ್ನೊಡಲಿಗೆ ಬಂದ ಲಕ್ಷಾಂತರ ಜನರಿಗೆ ತಾಯಿ ಮಡಿಲಾಗುತ್ತಾರೆ ಎಂದು ಯಾರೂ ಎಣಿಸಿರಲಿಲ್ಲ. ಅನ್ನ, ಆಶ್ರಯ, ಅರಿವು ನೀಡಿ ಶರಣ ವಾಣಿಯಂತೆ ಎಲ್ಲ ನನ್ನವರೆನ್ನುವ ತಾಯಿ ಮಮತೆ ಪ್ರೀತಿ ಕರುಣೆ ತೋರಿ, ಅನಾಥೋ ದೈವ ರಕ್ಷಕ ಎನ್ನುವ ಭಾರತೀಯ ಸಂಸ್ಕೃತಿಯ ಶ್ರೇಷ್ಠ ಮೌಲ್ಯವನ್ನು ಜಗತ್ತಿಗೆ ಸಾರಿದ ಭವ್ಯ, ದಿವ್ಯ, ಶ್ರೇಷ್ಠ ಸಂತನಾಗಿದ್ದಾರೆ ಎಂದರು.


ಕ್ರೈಸ್ತ ಧರ್ಮದ ಸುಪ್ರಸಿದ್ದ ನುಡಿ ಅರಿವಿನ ದಾರಿ ಕಾಣದೆ ಜನ ಸಾಮಾನ್ಯರು ಬಳಲುತ್ತಿರುವಾಗ ಅರಿತು ಜನ್ಮ ತೋರುವ ಮಹಾತ್ಮರು ಜನಿಸುತ್ತಾರೆ. ಮಾನವ ಇತಿಹಾಸ ಓದಿದಾಗ ಒಬ್ಬ ಬುದ್ಧ, ಒಬ್ಬ ಏಸುಕ್ರಿಸ್ತ, ಒಬ್ಬ ಮಹಮದ್ ಪೈಗಂಬರ್ ಕನ್ಫ್ಯೂಷಿಯಸ್ ಸಾಕ್ರೆಟಿಸ್, ಪ್ಲೇಟೊ, ಅರಿಸ್ಟಾಟಲ್, ಸರ್ವಜ್ಞ, ಕನಕದಾಸ, ಬಸವಣ್ಣ, ಅಂಬೇಡ್ಕರ್, ಮಹಾತ್ಮ ಗಾಂಧೀ, ಕಬೀರ್ ಸಂತ ತುಕಾರಾಂ ಇವರೆಲ್ಲರ ಬದುಕು ಅವರ ಆದರ್ಶಗಳು ಬದುಕಿದ್ದ ಅವಧಿ ಕ್ಷಣಿಕವಾದರೂ ಮನುಕುಲದ ಇತಿಹಾಸದಲ್ಲಿ ಎಂದೆಂದಿಗೂ ಜೀವಂತ. ಬದುಕಿನ ಪ್ರತಿ ಕ್ಷಣವೂ ಇನ್ನೊಬ್ಬರ ಬದುಕಿನ ಉದ್ದಾರಕ್ಕೆ ಮುಡಿಪಾಗಿಟ್ಟಿದ್ದರು ಎಂದು ಹೇಳಿದರು.


ಶರಣರ ಕಾಯಕ ದಾಸೋಹ ತತ್ವಗಳು ಕೇವಲ ನುಡಿಯಾಗದೆ ನಡೆಯಲ್ಲಿ ಅವುಗಳಿಗೆ ಪ್ರತಿ ದಿನ ಪ್ರತಿ ಕ್ಷಣ ತನ್ನನ್ನು ತಾನು ಒಡ್ಡಿಕೊಂಡ ಪ್ರಯೋಗಶೀಲ ಸಂತ. ಜಗದ ಬೆಳಕಿನೊಳಗಣ ಮಹಾ ಬೆಳಕು. ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ತಾವು ಶ್ರೀಗಳವರ ಸೇವಾ ಸಾಧನೆ ನೋಡಿ ಉತ್ತರದಲ್ಲಿ ಗಂಗೆ ಹೇಗೆ ಪವಿತ್ರಳೋ ಹಾಗೆಯೇ ದಕ್ಷಿಣದಲ್ಲಿ ಸಿದ್ದ ಗಂಗೆ ಎನ್ನುವ ಮಾತು ಸ್ಥಳದ ಮತ್ತು ಪೂಜ್ಯರ ಪಾವಿತ್ರತೆ ತೋರಿಸುತ್ತದೆ ಎಂದಿದ್ದರು.


ತಮ್ಮ ಇಳಿವಯಸ್ಸಿನಲ್ಲೂ ಮೈಗೂಡಿಸಿಕೊಂಡ ಯಾವುದೇ ಕಾರ್ಯವನ್ನು ಬಿಡದೆ ಕೊನೆ ಉಸಿರಿನ ತನಕ ಪಾಲಿಸಿ, ಶ್ರೀ ಸಾಮಾನ್ಯರ ಬಾಯಲ್ಲಿ ದೇವರು ಎನ್ನಿಸಿಕೊಂಡ ಮಹಾ ಚೈತನ್ಯ ಕಣ್ಣಿಗೆ ಕಂಡ ನಿಜ ಶರಣ. ಆತ್ಮ ಸ್ವರೂಪಿ ದೀನ ದಲಿತ, ಅಸಾಯಕರ, ನಿರ್ಗತಿಕರ ಸೇವೆಯಲ್ಲೇ ತನ್ನ ಬದುಕನ್ನು ಕಂಡ ಜಗದ ಪುರುಷ ಎಂದರು.


ಎಲ್ಲರ ಮನೆ ಮನಸ್ಸುಗಳು ಇಂದು ಸ್ಮರಿಸಿ ವಿನೀತ ಭಾವದಿಂದ ದಾಸೋಹ ಸೇವೆ ಸಲ್ಲಿಸುತ್ತಿರುವುದನ್ನು ನೋಡಿದರೆ ಧರ್ಮಗಳು ಕೇವಲ ಜಾತಿಗೆ ಸೀಮಿತವಾಗದೆ ಮನುಕುಲಕ್ಕೆ ಒಳಿತು ಮಾಡುವುದೇ ಮಾನವ ಧರ್ಮ. ಸತ್ತ ನಂತರದ ಸ್ವರ್ಗದ ಕಲ್ಪನೆಗಿಂತ ಬದುಕಿದ್ದಾಗ ಸನ್ಮಾರ್ಗದ ಹಾದಿಯಲ್ಲಿ ನಡೆದಾಗ ತಾವಿರುವಲ್ಲಿಯೇ ಸ್ವರ್ಗ ಕಾಣಬಹುದು ಎನ್ನುವುದಕ್ಕೆ ಜಗತ್ತಿನ ಮೂಲೆ ಮೂಲೆಗಳಿಂದ ನಿತ್ಯವೂ ಜಾತಿ ಮತ ಪಂಥಗಳಿಲ್ಲದೆ ಪ್ರತಿನಿತ್ಯ ಕ್ಷೇತ್ರ ಮತ್ತು ಪೂಜ್ಯರ ಗದ್ದುಗೆ ದರ್ಶನಕ್ಕೆ ಬರುತ್ತಿರುವುದೆ ಸಾಕ್ಷಿ. ನಾವು ಇರುವಲ್ಲಿಯೇ ನೊಂದವರಿಗೆ, ಅಸಾಯಕರಿಗೆ, ದೀನರಿಗೆ ಕಿಂಚಿತ್ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸೇವೆ ಸಲ್ಲಿಸಿದರೆ ನಮ್ಮ ಜೀವನ ಸಾರ್ಥಕ. ಅದೇ ಪೂಜ್ಯರಿಗೆ ನಾವು ಸಲ್ಲಿಸುವ ನಿಜವಾದ ಪೂಜೆ ಎಂದರು.
ಬಳಿಕ ಸಾವಿರಾರು ಜನರಿಗೆ ಪ್ರಸಾದ ವಿತರಿಸಲಾಯಿತು.


ಕಾರ್ಯಕ್ರಮದಲ್ಲಿ ಸಂಚಾಲಕ ಸುರೇಶ್ ಕುರುಬರಹುಂಡಿ, ಮುಳ್ಳೂರು ಪ್ರಕಾಶ್, ನಾಗರಾಜು, ಶಿವಲಿಂಗಸ್ವಾಮಿ, ತಾಲೂಕು ಪ್ರತಿ ಧ್ವನಿ ವೇದಿಕೆ ಅಧ್ಯಕ್ಷ ಕೀರ್ತಿ ಚಂದ್ರವಾಡಿ, ಶಿಕ್ಷಕ ಮನೀಶ್ ಹೊರೆಯಾಲ, ಈಶ್ವರ್, ಹೊರೆಯಾಲ ಮಹೇಶ್, ಬಿಳುಗಲಿ ಶಿವಕುಮಾರ್, ಬದನವಾಳು ಪುಟ್ಟಬುದ್ದಿ, ಬಸವ, ಯೋಗೀಶ್, ಚೆನ್ನಪ್ಪ, ಪ್ರಭುಸ್ವಾಮಿ, ರಾಜೇಂದ್ರ, ರಾಜಶೇಖರ್, ವೈರಾಗ್ಯ ನಿಧಿ ಅಕ್ಕಮಹಾದೇವಿ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಸುಮಾವತಿ, ಮೈಸೂರು ಜಿಲ್ಲಾ ಜಗನ್ಮಾತೆ ಅಕ್ಕಾ ಮಹಾದೇವಿ ಮಹಿಳಾ ಸಹಕಾರ ಸಂಘದ ನಿರ್ದೇಶಕಿ ಗೀತಾ ಕಲ್ಮಳ್ಳಿ ನಟರಾಜು, ಕುಮಾರ್ ಯಾಕನೂರ್, ಮೊಬ್ಬಳ್ಳಿ ಗುರುಸಿದ್ದಪ್ಪ ಸೇರಿದಂತೆ ಇತರರು ಇದ್ದರು.