ಬೆಲ್ಲ ಹರಾಜಿಗೆ ವಿಳಂಬವಾಗಿ ಬರುವ ವತರ್Àಕರು, ರೈತರ ಗೋಳಾಟ

ಸಂಜೆವಾಣಿ ವಾರ್ತೆ
ಚಾಮರಾಜನಗರ, ನ.07-
ಜಿಲ್ಲಾ ಕೇಂದ್ರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರತಿ ಬುಧವಾರ ಹಾಗೂ ಶನಿವಾರ ಬೆಲ್ಲ ಮಾರಾಟ ಮಾಡಲು ಬರುವ ರೈತರು ವರ್ತಕರಿಗೆ ಕಾದು ಸುಸ್ತಾಗಿದ್ದು ಮನಸೋ ಇಚ್ಚೆಯಂತೆ ವರ್ತಕರು ಹರಾಜಿನಲ್ಲಿ ಭಾಗವಹಿಸುತ್ತಿರುವುದು ಎಪಿಎಂಸಿ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ.


ಚಾಮರಾಜನಗರ ಎಪಿಎಂಸಿ ಒಂದು ಕಾಲದಲ್ಲಿ ಬೆಲ್ಲದ ಮಾರುಕಟ್ಟೆಗೆ ಪ್ರಸಿದ್ದಿಯನ್ನು ಪಡೆದುಕೊಂಡಿತ್ತು. ತಮಿಳುನಾಡು, ಮಂಡ್ಯ, ಮೈಸೂರು ಹಾಗೂ ಬೆಂಗಳೂರು ಭಾಗದಲ್ಲಿಯು ವರ್ತಕರು ಆಗಮಿಸಿ, ಚಾ.ನಗರ ಎಪಿಎಂಸಿಯಲ್ಲಿ ಬೆಲ್ಲ ಖರೀದಿ ಮಾಡುತ್ತಿದ್ದರು. ಸುಮಾರು ಒಂದೇ ವಾರದದಲ್ಲಿ ಎರಡು ದಿನ ನಡೆಯುವ ಬೆಲ್ಲದ ಸಂತೆಯಲ್ಲಿ ಮಾರುಕಟ್ಟೆ ಪ್ರಾಂಗಣ ಹಾಗೂ ಗೋದಾಮುಗಳು ತುಂಬ ಹೋಗುತ್ತಿತ್ತು. ಕನಿಷ್ಟ 15 ರಿಂದ 20 ಲಕ್ಷ ಕ್ಕೂ ಹೆಚ್ಚು ಬೆಲ್ಲ ಮಾರಾಟವಾಗುತ್ತಿತ್ತು.


ಇತ್ತೀಚಿನ ದಿನಗಳಲ್ಲಿ ಎಪಿಎಂಸಿ ಆಡಳಿತ ದೋರಣೆ ಮತ್ತು ಸೂಕ್ತ ಮೂಲ ಸೌಲಭ್ಯಗಳು ಕೊರೆತೆಯಿಂದ ಬೆಲ್ಲದ ಅವಕ ಕಡಿಮೆಯಾಗುತ್ತಿದೆ. 2 ಲಕ್ಷ ಬೆಲ್ಲ ಬರುವುದೇ ಕಷ್ಟವಾಗುತ್ತಿದೆ. ಬೆರಳಣಿಕೆಯಷ್ಟು ರೈತರು ಮಾತ್ರ ಬೆಲ್ಲ ಮಾರಾಟ ಮಾಡಲು ಬರುತ್ತಿದ್ದಾರೆ. ಈ ಬೆಲ್ಲವನ್ನೇ ಖರೀದಿ ಮಾಡಲು ವರ್ತಕರು ಬರುತ್ತಿಲ್ಲ. ತಮಗೆ ಇಷ್ಟ ಬಂದಂತೆ ಅಂದರೆ 12 ಗಂಟೆಯವರೆಗೆ ವರ್ತಕರು ಬರುತ್ತಾರೆ. ಅವರು ಬಂದ ನಂತರೇ ಹರಾಜು ಆರಂಭವಾಗುತ್ತಿದೆ. ಬೆಳಗ್ಗೆ 7 ಗಂಟೆಗೆ ಬೆಲ್ಲ ತುಂಬಿಕೊಂಡು ಬರುವ ರೈತರು ಕಾದು ಬಸವಳಿದು ಮಧ್ಯಾಹ್ನದ ನಂತರ ತಮ್ಮ ಬೆಲ್ಲವನ್ನು ಕಡಿಮೆ ದರದಲ್ಲಿ ಮಾರಾಟ ಮಾಡಿ ಇಡೀ ದಿನ ಜಮೀನಿನ ಕೆಲಸ ಕಾರ್ಯಗಳನ್ನು ಬದಿಗೊತ್ತು ಕಾಯುವಂತೆ ಆಗಿದೆ. ಇದು ಪ್ರತಿ ಬುಧವಾರ ಹಾಗೂ ಶನಿವಾರ ನಡೆಯವ ವ್ಯಥೆಯಾಗಿದೆ ಎಂದು ರೈತರಾದ ಉಮ್ಮತ್ತೂರು ಮಹದೇವಸ್ವಾಮಿ ತಮ್ಮ ಅಳಲು ತೊಡಿಕೊಂಡರು.


ಎಪಿಎಂಸಿ ಆಡಳಿತ ವೈಫಲ್ಯ : ಈ ಬಗ್ಗೆ ಸಂತೆಗೆ ಬೆಲ್ಲ ಮಾರಾಟ ಮಾಡಲು ಬರುವ ರೈತರು ಕಳೆದ 6 ತಿಂಗಳ ಹಿಂದೆಯೆ ಎಪಿಎಂಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ. ವರ್ತಕರ ವಿಳಂಬ ಧೋರಣೆಯಿಂದ ನಮ್ಮ ಬೆಲ್ಲಕ್ಕೆ ಸ್ಪರ್ಧಾತ್ಮಕ ಬೆಲೆ ದೊರೆಯುತ್ತಿಲ್ಲ. ನಮ್ಮ ಜಿಲ್ಲೆಯ ತೆರಣಾಂಭಿ, ಬೇಗೂರು ಇತರೇ ಎಪಿಎಂಗಳಲ್ಲಿ ನಿಗಧಿತ ಅವಧಿಯಲ್ಲಿಯೇ ಅಂದರೆ 9 ಗಂಟೆಯ ಒಳಗೆ ಹರಾಜು ಪ್ರಕ್ರಿಯೆ ಪೂರ್ಣಗೊಂಡು ರೈತರು ಹಣ ಪಡೆದುಕೊಂಡು ಬೆಳಗ್ಗೆ 10 ಗಂಟೆಯೊಳಗೆ ಮನೆ ಹಾಗೂ ಜಮೀನುಗಳಿಗೆ ಹೋಗುತ್ತಾರೆ. ಒಳ್ಳೆಯ ದರವು ಸಹ ದೊರೆಯುತ್ತದೆ. ನಮ್ಮ ಜಿಲ್ಲಾ ಕೇಂದ್ರದಲ್ಲಿಯೇ ರೈತ ವಿರೋಧಿ ಧೋರಣೆಯನ್ನು ಎಪಿಎಂಸಿ ಅನುಸರಿಸುತ್ತಿದೆ ಎಂದು ರೈತರು ದೂರಿದರು.


ಆದರೆ, ಚಾ.ನಗರ ಎಪಿಎಂಸಿಗೆ ಬರುವ ವರ್ತಕರು ಎಲ್ಲ ದರ ಏರುಪೇರು ತಿಳಿದುಕೊಂಡು ಕಾಟಾಚಾರಕ್ಕೆ ಎಂಬಂತೆ 12 ಗಂಟೆಗೆ ಹರಾಜು ಮಾಡಲು ಬರುತ್ತಾರೆ. ಅವರು ಕೂಗಿದ್ದ ದರ. ಇದರಿಂದ ರೈತರಿಗೆ ಬಹಳ ತೊಂದರೆಯಾಗಿದೆ. ಹೀಗಾಗಿ ಎಪಿಎಂಸಿ ಅಧ್ಯಕ್ಷ ತಕ್ಷಣ ಸ್ಪಂದಿಸಿ, ಬೆಳಗ್ಗೆ 9 ಗಂಟೆಯೊಳಗೆ ಬೆಲ್ಲ ಹರಾಜು ಪ್ರಕ್ರಿಯೆ ನಡೆಸಲು ಮುಂದಾಗಬೇಕು. ಇಲ್ಲದಿದ್ದರೆ, ಮುಂದಿನ ಶನಿವಾರ ಇಲ್ಲದೇ ಬುಧವಾರದ ಹರಾಜಿನಲ್ಲಿ ಭಾಗವಹಿಸದೇ ಎಪಿಎಂಸಿ ವಿರುದ್ದ ಪ್ರತಿಭಟನೆ ಮಾಡಬೇಕೆಂದು ರೈತರು ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಎಪಿಎಂಸಿ ಕಾರ್ಯದರ್ಶಿ ಜಗದೀಶ್ ಅವರು ಪ್ರತಿಕ್ರಿಯೆ ನೀಡಿ, ಬೆಲ್ಲದ ಹರಾಜು ವಿಳಂಬವಾಗುತ್ತಿರುವುದು ನಮ್ಮ ಗಮನಕ್ಕೂ ಬಂದಿದೆ. ವರ್ತಕರು ಹಾಗೂ ರೈತರು ಸಭೆ ಕರೆದು ಸೂಕ್ತ ಸಮಯವನ್ನು ನಿಗಧಿ ಮಾಡುವುದಾಗಿ ತಿಳಿಸಿದ್ದಾರೆ.