ಬೆನ್ನು ನೋವು ಉಪಶಮನಕ್ಕೆ ಎಂಟು ಜೀವಂತ ಕಪ್ಪೆ ನುಂಗಿದ ಅಜ್ಜಿ

ಬೀಜಿಂಗ್,ಅ.10-ಚೀನಾದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 82 ವರ್ಷದ ವೃದ್ಧಮಹಿಳೆಯೊಬ್ಬರು ಎಂಟು ಜೀವಂತ ಕಪ್ಪೆಗಳನ್ನು ನುಂಗಿದ್ದಾರೆ. ಮಹಿಳೆ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾಗ ಈ ರಹಸ್ಯ ಬಹಿರಂಗವಾಗಿದೆ. ಬೆನ್ನು ನೋವು ನಿವಾರಿಸಲು ತಾನು ಎಂಟು ಜೀವಂತ ಕಪ್ಪೆಗಳನ್ನು ನುಂಗಿದ್ದಾಗಿ ಮಹಿಳೆ ಹೇಳಿಕೊಂಡಿದ್ದಾಳೆ. ವೈದ್ಯರು ಸಹ ಆಕೆಯ ಹೇಳಿಕೆಯಿಂದ ಆಶ್ಚರ್ಯಚಕಿತರಾಗಿದ್ದಾರೆ. ವರದಿ ಪ್ರಕಾರ, ಜೀವಂತ ಕಪ್ಪೆಗಳನ್ನು ತಿನ್ನುವುದರಿಂದ ಬೆನ್ನು ನೋವು ಗುಣವಾಗುತ್ತದೆ ಎಂದು ಆ ಮಹಿಳೆ ಎಲ್ಲಿಂದಲೋ ಮಾಹಿತಿ ಪಡೆದು ಆಕೆ ತನ್ನ ಕುಟುಂಬದ ಸದಸ್ಯರೊಬ್ಬರಿಗೆ ಜೀವಂತ ಕಪ್ಪೆಗಳನ್ನು ತರಲು ಕೇಳಿಕೊಂಡಿದ್ದಾಳೆ.ಆದರೆ, ಕಪ್ಪೆ ಏಕೆ ಬೇಕು ಎನ್ನುವ ಸಂಗತಿ ಬಾಯಿ ಬಿಟ್ಟಿಲ್ಲ.ಕುಟುಂಬ ಸದಸ್ಯರು ಕಪ್ಪೆಗಳನ್ನು ಸಂಗ್ರಹಿಸಿ ಅವಳಿಗೆ ಕೊಟ್ಟಿದ್ದಾರೆ. ಕಪ್ಪೆಗಳು ಚಿಕ್ಕದಾಗಿರಲಿಲ್ಲ; ಅವು ಒಂದು ಅಂಗೈ ಗಾತ್ರದಷ್ಟಿದ್ದವು. ಒಂದು ದಿನ, ಮಹಿಳೆ ಮೂರು ಕಪ್ಪೆಗಳನ್ನು ನುಗ್ಗಿದ್ದು ಮರುದಿನ, ಅವಳು ಇನ್ನೂ ಐದು ಕಪ್ಪೆಗಳನ್ನು ನುಂಗಿದ್ದಾಳೆ. ಇದರ ನಂತರ, ಅವಳಿಗೆ ತೀವ್ರವಾದ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಮಹಿಳೆಯ ಮಗ ವೈದ್ಯರಿಗೆ, ನನ್ನ ತಾಯಿ ಎಂಟು ಜೀವಂತ ಕಪ್ಪೆಗಳನ್ನು ನುಂಗಿದ್ದಾಳೆ. ಈಗ ಅವಳು ತುಂಬಾ ನೋವಿನಿಂದ ಬಳಲುತ್ತಿದ್ದಾಳೆ, ಅವಳು ನಡೆಯಲು ಸಹ ಆಗುತ್ತಿಲ್ಲ ಎಂದು ಹೇಳಿದ್ದಾನೆ.


ಆ ವೃದ್ಧ ಮಹಿಳೆಯನ್ನು ಹ್ಯಾಂಗ್‍ಝೌನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಜೀರ್ಣಾಂಗ ವ್ಯವಸ್ಥೆಯು ಕೆಲಸ ಮಾಡುವುದನ್ನು ನಿಲ್ಲಿಸಿದೆ ಎಂದು ವೈದ್ಯರು ಪತ್ತೆಹಚ್ಚಿದ್ದಾರೆ. ಆಕೆಯಲ್ಲಿ ಪರಾವಲಂಬಿ ಜೀವಿಗಳಿವೆ ಎಂದು ಅವರು ಪತ್ತೆ ಆಕೆಯಲ್ಲಿ ಆಕ್ಸಿಫಿಲ್ ಕೋಶಗಳು ಅಭಿವೃದ್ಧಿಗೊಂಡಿವೆ
ಮಹಿಳೆಯ ಹೊಟ್ಟೆಯಲ್ಲಿ ಸ್ಪಾರ್ಗನಮ್ ಎಂಬ ಒಂದು ರೀತಿಯ ಪರಾವಲಂಬಿ ಹುಳು ಇದೆ ಎಂದು ವೈದ್ಯರು ಹೇಳಿದ್ದಾರೆ. ನಂತರ ಚಿಕಿತ್ಸೆ ನೀಡಿದ್ದಾರೆ.ಚಿಕಿತ್ಸೆಯ ನಂತರ ವೃದ್ದೆ ಚೇತರಿಸಿಕೊಂಡಿದ್ದಾರೆ. ಅವರನ್ನು ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿ ಇರಿಸಿಕೊಂಡು ಮತ್ತು ನಂತರ ಬಿಡುಗಡೆ ಮಾಡಲಾಗಿದೆ. ಇದೀಗ ಅಜ್ಜಿ ಕುಟುಂಬಸ್ಥರ ಆರೈಕೆಯಲ್ಲಿದ್ದಾರೆ.