ಬೃಹತ್ ಹಿಂದು ರಾಷ್ಟ್ರ ಕಟ್ಟುವ ಪಣ ತೊಡೋಣ

ಪಡು ಬದಿನಡಿಯಲ್ಲಿ ನಡೆದ ಹಿಂದೂ ಸಂಗಮದಲ್ಲಿ ಡಾ.ಅರಣ್ ಉಳ್ಳಾಲ್ ಕರೆ
ಮಂಗಳೂರು: ನಮ್ಮ ಸಮಾಜದೊಳಗೆ ಏಕತೆಯನ್ನು ಸ್ಥಾಪಿಸುವ ಮೂಲಕ ಬೃಹತ್ ಹಿಂದು ರಾಷ್ಟ್ರವನ್ನು ಕಟ್ಟುವ ಪಣ ತೊಡೋಣ. ಜಾತಿ-ಜಾತಿಗಳ ನಡುವಿನ ಭಿನ್ನಾಭಿಪ್ರಾಯ, ಬಡವ-ಶ್ರೀಮಂತರ ನಡುವಿನ ಬಾಂಧವ್ಯ, ಮೇಲು-ಕೀಳೆಂಬ ಭಾವ ಇವೆಲ್ಲವೂ ಸರಿಪಡಿಸುವ ಮೂಲಕ ಏಕತೆಯನ್ನು ಸಾರುವ ಕೆಲಸ ಮಾಡೋಣ ಎಂದು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ತೊಕ್ಕೊಟ್ಟು ಇದರ ವಿಭಾಗ ಮುಖ್ಯಸ್ಥ ಡಾ. ಅರುಣ್ ಉಳ್ಳಾಲ್ ಕರೆ ನೀಡಿದರು.
ಅವರು ಪೆರ್ಮಂಕಿ ಮಂಡಲ ಹಿಂದೂ ಆಯೋಜನಾ ಸಮಿತಿ ವತಿಯಿಂದ ನೀರುಮಾರ್ಗ ಸಮೀಪದ ಪಡು ಬದಿನಡಿಯಲ್ಲಿ ಭಾನುವಾರ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವು ನಮ್ಮ ಸಮಾಜದೊಳಗಿರುವ ಕೆಲವೊಂದು ಆಚಾರ-ವಿಚಾರಗಳನ್ನು ಅಳವಡಿಸುವ ಮುಖೇನ ಹಿಂದು ಸಮಾಜದ ಬದಲಾವಣೆಗೆ ಶ್ರಮಿಸೋಣ. ಮಕ್ಕಳಿಗೆ ನಮ್ಮ ಸಂಸ್ಕೃತಿ, ಹಿರಿಯರಿಗೆ ಗೌರವ, ನಮ್ಮ ಇತಿಹಾಸ ಬಗ್ಗೆ ತಿಳಿಸುವ ಮುಖೇನ ಮಕ್ಕಳನ್ನು ಬಾಲ್ಯದಿಂದಲೇ ಅವರನ್ನು ಗಟ್ಟಿಪಡಿಸೋಣ ಎಂದರು.
ಇಸ್ಕಾನ್‌ನ ಕೃಷ್ಣಪ್ರಸಾದ್ ಪ್ರಭುಜೀ ಮಾತನಾಡಿ, ನಾವು ನಮ್ಮ ಧರ್ಮವನ್ನು ರಕ್ಷಕಿಸಿದರೆ ಧರ್ಮವೇ ನಮ್ಮ ರಕ್ಷಿಸುತ್ತದೆ ಎಂದು ಶ್ರೀಕೃಷ್ಣ ಪರಮಾತ್ಮನ ವಾಕ್ಯದಂತೆ ನಾವು ಧರ್ಮರಕ್ಷಕರಾದಾಗ ಮಾತ್ರ ಹಿಂದೂ ಸಮಾಜ ಏಳಿಗೆ ಸಾಧ್ಯ ಎಂದರು.
ಇಂದು ನಮ್ಮ ಸಮಾಜ ಹಾದಿತಪ್ಪುತ್ತಿದೆ. ಕೊಲೆ ಸುಲಿಗೆ, ದರೋಡೆ, ಅತ್ಯಾಚಾರದಂತಹ ದುಷ್ಕೃತ್ಯಗಳು ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ಸಮಾಜವನ್ನು ಸುಸ್ಥಿತಿಗೆ ತರುವ ಪ್ರಯತ್ನವನ್ನು ಮಾಡಬೇಕಾಗಿದೆ ಎಂದು ಹೇಳಿದರು.
ಸತೀಶ್ ಶೆಟ್ಟಿ ಮೂಡುಜಪ್ಪು ಗುತ್ತು ಅವರ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಇದೇ ಸಂದರ್ಭ ಸಮಾಜದ ಹಿರಿಯರಾದ ಸೇಸಪ್ಪ ಪೂಜಾರಿ ಮಡಿವಾಳಕೋಡಿ, ರಘು ಅಡಪ, ರಾಧಾಕೃಷ್ಣ ರಾಮರಬೈಲು, ವಿಶ್ವಾನಾಥ ಮಡಿವಾಳ ಇವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಗುರುಪುರ ಹಿಂದೂ ಸಂಗಮ ಆಯೋಜನಾ ಸಮಿತಿಯ ಅಧ್ಯಕ್ಷ ಚಂದ್ಪಹಾಸ ನಾರಳ, ವಾಮಂಜೂರು ಅಮೃತೇಶ್ವರ ದೇವಸ್ಥಾನದ ಅರ್ಚಕರಾದ ಸತ್ಯನಾರಾಯಣ ಭಟ್, ಬದಿನಡಿ ದೈವಸ್ಥಾನದ ಅರ್ಚಕರಾದ ಅಂತ ಯಾನೆ ಕೇಶವ ಪೂಜಾರಿ, ಜ್ಯೋತಿಷ್ಯರಾದ ಹರಿಪ್ರಸಾದ್ ಪಂಡಿತ್, ಮಹಾಬಲ ಕುಲಾಲ್, ರಾಜಾರಾಮ್ ಕೋಟ್ಯಾನ್ ಮಲ್ಲೂರು, ರಮೇಶ್ ಆಚಾರ್ಯ, ಸುಮಕರ ಗಾಣಿಗ, ಹರೀಶ್ ಮಡಿವಾಳ, ಪವಿತ್ರ ನೀರುಮಾರ್ಗ, ಶಾಂತಿಗುರಿ ದೈವಸ್ಥಾನದ ಆಡಳಿತ ಮೊಕ್ತೇಸರಾದ ದೇವದಾಸ ಗುರಿಕಾರ, ಮಮಕರ ಗುರಿಕಾರ ಉಪಸ್ಥಿತರಿದ್ದರು. ರಾಜೀವ್ ಶೆಟ್ಟಿ ಸಲ್ಲಾಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೀರ್ತಿರಾಜ್ ಕರಂದಾಡಿ ವೈಯಕ್ತಿಕ ಗೀತೆ ಹಾಡಿದರು. ಕಮಲಾಕ್ಷ ತಲ್ಲಿಮಾರ್ ಧನ್ಯವಾದವಿತ್ತರು. ಕಿರಣ್ ಕುಮಾರ್ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು.
ಶೋಭಾಯಾತ್ರೆ, ಮೆರವಣಿಗೆ
ಕಾರ್ಯಕ್ರಮಕ್ಕೂ ಮೊದಲು ಪಡುಪೋಸ್ಟ್ ಆಫೀಸಿನ ಶ್ರೀ ವಿಘ್ನೇಶ್ವರ ಸಭಾಭವನದಲ್ಲಿ ಮೆರವಣಿಗೆಗೆ ಚಾಲನೆ ದೊರೆಯಿತು. ಗೋಮಾತೆಗೆ ಪೂಜೆಗೈದು ಭಾರತ ಮಾತೆಯ ಭಾವಚಿತ್ರದೊಂದಿಗೆ ಶೋಭಾಯಾತ್ರೆ ಸಾಗಿ ಬಂತು. ವಿವಿಧ ಭಜನಾ ತಂಡಗಳು, ವೇಷಭೂಷಣಗಳು ಮೆರವಣಿಗೆಯ ಕಳೆ ಹೆಚ್ಚಿಸಿದವು.