
ಪುತ್ತೂರು: ಪುತ್ತೂರಿನ ಇತಿಹಾಸದ ನೂತನ ಮೈಲಿಗಲ್ಲು ಈ ಬೃಹತ್ ರಾಷ್ಟ್ರಧ್ವಜ ಸ್ತಂಭ. ದೇಶಪ್ರೇಮವನ್ನು ಪ್ರೇರೇಪಿಸುವ ಚಿಂತನೆಯೊಂದಿಗೆ ಇದೀಗ ರಾಷ್ಟ್ರಧ್ವಜ ಸ್ತಂಭದ ಕನಸು ನನಸಾಗುತ್ತಿದೆ. ಪುತ್ತೂರಿನ ಸಮಗ್ರ ಬೆಳವಣಿಗೆಯಲ್ಲಿ ಇದು ಬೆಂಚ್ ಮಾರ್ಕ್ ಆಗಿ ಮೂಡಿಬರಲಿದೆ. ೧ ಕೋಟಿ ವೆಚ್ಚದಲ್ಲಿ ರಾಜ್ಯದ ೩ನೇ ಅತೀ ದೊಡ್ಡ ರಾಷ್ಟ್ರಧ್ವಜ ಸ್ತಂಭದ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಶನಿವಾರ ಪುತ್ತೂರು ನಗರದ ನೆಲ್ಲಿಕಟ್ಟೆಯಲ್ಲಿ ನೂತನ ರಾಷ್ಟ್ರಧ್ವಜ ಸ್ತಂಭ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಶಾಸಕರ ಅನುದಾನ ರೂ.೨೫ ಲಕ್ಷ, ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದಿಂದ ರೂ.೩೫ ಲಕ್ಷ ಹಾಗೂ ನಗರಸಭೆಯ ರೂ.೪೦ ಲಕ್ಷ ಸೇರಿಸಿಕೊಂಡು ಈ ಸ್ತಂಭ ನಿರ್ಮಾಣವಾಗಲಿದೆ. ಮಹಾಲಿಂಗೇಶ್ವರ ದೇವಳದ ದೇವರಮಾರುಗದ್ದೆಯ ಕೊನೆಯ ಭಾಗದಲ್ಲಿರುವ ನೆಲ್ಲಿಕಟ್ಟೆ ಪಾರ್ಕಿನಲ್ಲಿ ನಿರ್ಮಾಣವಾಗಲಿರುವ ಈ ಸ್ತಂಭ ಪುತ್ತೂರಿನ ಜನತೆಯ ಹೆಮ್ಮೆಯ ಪ್ರತೀಕವಾಗಲಿದೆ. ದಕ ಜಿಲ್ಲೆಯ ಯಾವ ತಾಲೂಕಿನಲ್ಲಿಯೂ ಇಂತಹದ್ದೊಂದು ಸ್ತಂಭ ಇಲ್ಲ. ಇದನ್ನು ನೋಡಿದರೆ ರೋಮಾಂಚನ ಉಂಟುಮಾಡುವ ರೀತಿಯಲ್ಲಿ ರಾಷ್ಟ್ರಧ್ವಜ ಸ್ತಂಭ ಮುಂದಿನ ಗಣರಾಜ್ಯೋತ್ಸವ ಮೊದಲು ನಾಡಿಗೆ ಅರ್ಪಣೆಯಾಗಲಿದೆ. ಈ ಒದು ಸ್ತಂಭಕ್ಕೆ ರೂ.೪೦ ಸಾವಿರ ವೆಚ್ಚವಾಗಲಿದೆ. ವರ್ಷದಲ್ಲಿ ೩ ಬಾರಿ ಬದಲಾವಣೆ ಮಾಡಬೇಕಾಗುತ್ತದೆ. ಮುಂದೆ ಈ ರಾಷ್ಟ್ರಧ್ವಜಸ್ತಂಭದ ನಿರ್ವಹಣೆ ನಗರಸಭೆ ಮಾಡಲಿದೆ ಎಂದರು.
ಪುತ್ತೂರು ನಗರಯೋಜನಾ ಪ್ರಾಧಿಕಾರದಲ್ಲಿ ಕಳೆದ ಕೆಲವು ವರ್ಷಗಳಿಂದ ೮ ಕೋಟಿ ಹಣ ಬಳಕೆಯಾಗದೆ ಉಳಿದಿತ್ತು. ಬೊಳುವಾರಿನಲ್ಲಿ ವೃತ್ತ, ದರ್ಬೆಯಲ್ಲಿ ಕ್ಲಾಕ್ ಟವರ್, ಅರುಣಾ ಚಿತ್ರಮಂದಿರ ಬಳಿ ಅಭಿವೃದ್ಧಿ, ಮಯೂರ ಚಿತ್ರಮಂದಿರ ಬಳಿ ರಸ್ತೆ ವಿಸ್ತರಣೆ, ರೂ.೨-೭೩ ಕೋಟಿಯಲ್ಲಿ ಪುತ್ತೂರು ದೇವಳದ ಕೆರೆ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲಾಗಿದೆ. ಪುತ್ತೂರಿನ ಪ್ರಮುಖ ಸಮಸ್ಯೆಯಾದ ಡ್ರೈನೇಜ್ ವ್ಯವಸ್ಥೆ ಹಾಗೂ ಬೀರಮಲೆ ಅಭಿವೃದ್ಧಿ ಕಾರ್ಯ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.
ಪುಡಾ ಅಧ್ಯಕ್ಷ ಅಮಳ ರಾಮಚಂದ್ರ ಅವರು ಮಾತನಾಡಿ, ಬೃಹತ್ ರಾಷ್ಟ್ರಧ್ವಜದ ಶಾಸಕರ ಕನಸು ಇದೀಗ ನನಸಾಗುತಿದೆ. ಬೆಳಗಾವಿ ಹಾಗೂ ಹಂಪಿಯ ರಾಷ್ಟ್ರಧ್ವಜ ಸ್ತಂಭಗಳನ್ನು ಹೊರತುಪಡಿಸಿದರೆ ಇದು ರಾಜ್ಯ ಮತ್ತೊಂದು ಬೃಹತ್ ಸ್ತಂಭವಾಗಿದೆ. ಇದು ಪುತ್ತೂರಿಗೆ ದೊಡ್ಡ ಕೊಡುಗೆಯಾಗಿದೆ ಎಂದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಭೂ ನ್ಯಾಯ ಮಂಡಳಿ ಮಾಜಿ ಸದಸ್ಯ ಕೃಷ್ಣಪ್ರಸಾದ್ ಆಳ್ವ, ನಗರಸಭಾ ಎಂಜಿನಿಯರ್ ಕೃಷ್ಣಮೂರ್ತಿ ರೆಡ್ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಮುಖರಾದ ಪಂಜಿಗುಡ್ಡೆ ಈಶ್ವರ ಭಟ್, ಡಾ. ರಾಜಾರಾಂ ಕೆ.ಬಿ., ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಜಯಂತಿ ಬಲ್ನಾಡು, ಸೂತ್ರಬೆಟ್ಟು ಜಗನ್ನಾಥ ರೈ, ಪ್ರಸಾದ್ ಕೌಶಲ್ ಶೆಟ್ಟಿ, ವಲೇರಿಯನ್ ಡಯಾಸ್, ಝೇವಿಯರ್ ಡಿಸೋಜ, ವಾಸುದೇವ ಆಚಾರ್ಯ, ನಳಿನಿ ಪಿ. ಶೆಟ್ಟಿ, ಮುರಳೀಧರ ರೈ ಮಠಂತಬೆಟ್ಟು, ಯೂಸುಫ್, ಶಿವರಾಮ ಆಳ್ವ, ಪ್ರಸನ್ನ ಶೆಟ್ಟಿ, ಅಬೂಬಕ್ಕರ್ ಆರ್ಲಪದವು, ಜೋಕಿಂ ಡಿಸೋಜ, ಚಂದ್ರಹಾಸ ಶೆಟ್ಟಿ, ಚಂದ್ರಪ್ರಭಾ ಗೌಡ ಮತ್ತಿತರರು ಭಾಗವಹಿಸಿದ್ದರು. ಪುಡಾ ಸದಸ್ಯರಾದ ಲ್ಯಾನ್ಸಿ ಮಸ್ಕರೇನಸ್ ಸ್ವಾಗತಿಸಿ, ಅನ್ವರ್ ಖಾಸಿಂ ವಂದಿಸಿದರು. ಸದಸ್ಯ ನಿಹಾಲ್ ಪಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
—ಬಾಕ್ಸ್ —
ಬೃಹತ್ ರಾಷ್ಟ್ರಧ್ವಜ ಸ್ತಂಭದ ವಿನ್ಯಾಸ’
*೮೦ ಮೀ. ಎತ್ತರ- ೨೬೪ ಫೀಟ್‌ನ ಧ್ವಜಸ್ತಂಭ
*೬೦ ಫೀಟ್-೪೦ ಫೀಟ್‌ನ ರಾಷ್ಟ್ರಧ್ವಜ ಅಳವಡಿಕೆ,
*೧೨೭೦ ಎಂ.ಎಂ. ತಳಪಾಯ
*ವಿದ್ಯುತ್ ಚಾಲಿತ ಮೋಟಾರ್ ವ್ಯವಸ್ಥೆ
*ಸಿಗ್ನಲ್ ಲೈಟ್, ಫೋಕಸ್ ಲೈಟ್ ಅಳವಡಿಕೆ

























