ಸಂಜೆವಾಣಿ ನ್ಯೂಸ್
ಮೈಸೂರು: ಸೆ.25:- ಬೃಂದಾವನದಲ್ಲಿ ಬೆಣ್ಣೆ ಕದ್ದು ಮೆಲ್ಲುತ್ತಿರುವ ಬಾಲ ಕೃಷ್ಣ…ಪಕ್ಕದಲ್ಲೇ ಧ್ಯಾನಸ್ಥರಾಗಿರುವ ಋಷಿಮುನಿಗಳು…ಕಳ್ಳ ಕೃಷ್ಣನ ಲೀಲೆ ನೋಡುತ್ತಾ ನಿಂತಿರುವ ಸೀತಾ ರಾಮರು, ದೇವಾನ್ ದೇವತೆಗಳು…
ಇದು ಶ್ರೀರಾಂಪುರದ ಕಂದಾಯ ಬಡಾವಣೆ ನಿವಾಸಿ ಸವಿತಾ ಅವರು ತಮ್ಮ ಮನೆಯಲ್ಲಿ ಸೃಷ್ಟಿಸಿರುವ ಬೊಂಬೆಗಳ ಲೋಕ. ದಸರಾ ಎಂದರೆ ಕೇವಲ ಕಲೆ, ಸಂಸ್ಕೃತಿ ಬಿಂಬಿಸುವ ಜಂಬೂಸವಾರಿ ಮಾತ್ರವಲ್ಲ, ಬೊಂಬೆಗಳ ಹಬ್ಬವೂ ಹೌದು. ಮೈಸೂರು ಮಾತ್ರವಲ್ಲದೆ ರಾಜ್ಯದೆಲ್ಲೆಡೆ ನವರಾತ್ರಿಯಲ್ಲಿ ಮನೆ ಮನೆಗಳಲ್ಲಿ ಬೊಂಬೆಗಳನ್ನು ಪ್ರತಿಷ್ಠಾಪಿಸಿ ನಾಡಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಅಂತೆಯೇ ಸವಿತಾ ಅವರು ತಮ್ಮ ಮನೆಯಲ್ಲಿ ಬೊಂಬೆಗಳ ಲೋಕವನ್ನೇ ಸೃಷ್ಟಿಸಿದ್ದಾರೆ. ವಿಭಿನ್ನ ಹಾಗೂ ವಿಶಿಷ್ಟ ಬೊಂಬೆಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಮತ್ತೆ ಮತ್ತೆ ನೋಡಬೇಕು ಅನ್ನಿಸುವಷ್ಟು ಸುಂದರವಾಗಿವೆ.
20 ವರ್ಷದಿಂದ ಬೊಂಬೆಗಳ ಪ್ರತಿಷ್ಠಾಪನೆ: ನಗರದ ವಿಜಯವಿಠಲ ಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿರುವ ಸವಿತಾ ಅವರಿಗೆ ಸಂಪ್ರದಾಯ, ಸಂಸ್ಕೃತಿಯ ಆಚರಣೆಗಳಲ್ಲಿ ಅಪಾರ ಪ್ರೀತಿ. ಹೀಗಾಗಿಯೇ ಕಳೆದ 20 ವರ್ಷಗಳಿಂದ ನವರಾತ್ರಿ ಸಂದರ್ಭದಲ್ಲಿ ಬೊಂಬೆ ಕೂರಿಸುತ್ತಿದ್ದಾರೆ. ಕೆಲ ಬೊಂಬೆಗಳಿಂದ ಆರಂಭವಾದ ಇವರ ಬೊಂಬೆ ಪ್ರೀತಿ ಇಂದು 500ಕ್ಕೂ ಹೆಚ್ಚು ಬೊಂಬೆಗಳಿಗೆ ಏರಿಕೆಯಾಗಿದೆ. ನಗರ ಸೇರಿದಂತೆ ಬೇರೆ ಕಡೆ ಬೊಂಬೆ ಪ್ರದರ್ಶನಕ್ಕೆ ಹೋದ ಸಂದರ್ಭದಲ್ಲಿ ಯಾವುದಾದರೊಂದು ಬೊಂಬೆ ತರುತ್ತಾರೆ. ಸ್ನೇಹಿತರು ಇವರ ಬೊಂಬೆಗಳ ಪ್ರೀತಿ ನೋಡಿ ಅವರೂ ಸಹ ಹಲವು ಬೊಂಬೆಗಳನ್ನು ತಂದು ಕೊಟ್ಟಿದ್ದಾರೆ. ಇದರಿಂದಾಗಿ ಇವರ ಬೊಂಬೆಗಳ ಸಾಲಿಗೆ ಪ್ರತಿವರ್ಷವೂ ಹೊಸ ಹೊಸ ಬೊಂಬೆಗಳು ಸೇರ್ಪಡೆಯಾಗುತ್ತಲೇ ಇದ್ದು, ಈ ಬಾರಿ ಪುರಿ ಜಗನ್ನಾಥನ ಸೇರ್ಪಡೆಯಾಗಿದೆ.
ಬೃಂದಾವನ ಮಾದರಿ: ಸವಿತಾ ಅವರು ಪ್ರತಿ ವರ್ಷವೂ ಒಂದಲ್ಲಾ ಒಂದು ವಿಭಿನ್ನ ಥೀಮ್‍ನಡಿ ಬೊಂಬೆಗಳನ್ನು ಪ್ರತಿಷ್ಠಾಪಿಸುತ್ತಾರೆ. ಈ ಬಾರಿ ಬೃಂದಾವನ ಥೀಮ್‍ನಡಿಯಲ್ಲಿ ಬೊಂಬೆಗಳ ಪ್ರತಿಷ್ಠಾಪನೆ ಮಾಡಿದ್ದು, ಬಾಲ ಕೃಷ್ಣನ ಲೀಲೆಯನ್ನು ಕಟ್ಟಿಕೊಟ್ಟಿದ್ದಾರೆ. ತಾಯಿ ಯಶೋಧರ ಗೋವುಗಳನ್ನು ನೋಡಿಕೊಳ್ಳುತ್ತಿದ್ದರೆ, ಬಾಲ ಕೃಷ್ಣ ಮೊಸರು ಗಡಿಗೆಯಲ್ಲಿ ಅಮ್ಮ ಇಟ್ಟಿರುವ ಬೆಣ್ಣೆಯನ್ನು ಕದ್ದು ತಿನ್ನುತ್ತಿದ್ದಾರೆ. ಸೈನಿಕರು ಕುದುರೆಗಳನ್ನೇರಿ ಬೃಂದಾವನದ ಕಾವಲು ಕಾಯುತ್ತಿದ್ದಾರೆ. ಈ ದೃಶ್ಯ ನೋಡುಗರನ್ನು ಆಕರ್ಷಿಸುತ್ತದೆ.



























