
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ನೀಡಿರುವ ವರದಿ ಬಗ್ಗೆ ಬೆಳ್ತಂಗಡಿ ನ್ಯಾಯಾಲಯದಲ್ಲಿ ಫೆ. ೪ರಂದು ವಿಚಾರಣೆ ನಡೆದು ಧರ್ಮಸ್ಥಳ ಪರ ವಕೀಲರು ತಾವು ಪ್ರಕರಣದಲ್ಲಿ ಸಂತ್ರಸ್ತರಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಲು ತಮಗೂ ಅವಕಾಶ ನೀಡಬೇಕು ಎಂದು ವಾದ ಮಂಡಿಸಿದರು. ವಿಚಾರಣೆ ಆಲಿಸಿದ ನ್ಯಾಯಾಲಯ ಪ್ರಕರಣದ ಮುಂದಿನ ವಿಚಾರಣೆಯನ್ನು ಫೆ.೧೩ಕ್ಕೆ ಮುಂದೂಡಿದೆ.
ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ವರದಿ ಸಲ್ಲಿಕೆಯಾದ ಬೆನ್ನಲ್ಲೇ ಶ್ರೀಕ್ಷೇತ್ರ ಧರ್ಮಸ್ಥಳ ಪರವಾಗಿ ನ್ಯಾಯವಾದಿಗಳು ಅರ್ಜಿ ಸಲ್ಲಿಸಿ ಪ್ರಕರಣದಲ್ಲಿ ಧರ್ಮಸ್ಥಳದವರು ಸಂತ್ರಸ್ತರಾಗಿದ್ದು, ತಮಗೂ ಪ್ರಕರಣದಲ್ಲಿ ಭಾಗಿಯಾಗಲು ಅವಕಾಶ ನೀಡಬೇಕು ಎಂದು ಕೇಳಿಕೊಂಡಿದ್ದರು.ಇದೇ ವಿಚಾರದಲ್ಲಿ ಇಂದು ನ್ಯಾಯಾಲಯದಲ್ಲಿ ವಾದ ಪ್ರತಿವಾದ ನಡೆಯಿತು. ಧರ್ಮಸ್ಥಳ ಪರವಾಗಿ ಹೈಕೋರ್ಟ್ ಹಿರಿಯ ನ್ಯಾಯವಾದಿ ಸಿ.ವಿ. ನಾಗೇಶ್ ಅವರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನ್ಯಾಯಾಧೀಶರ ಮುಂದೆ ವಾದ ಮಂಡಿಸಿದರು.
ಎಸ್‌ಐಟಿ ಪರ ವಕೀಲರು ಧರ್ಮಸ್ಥಳದವರನ್ನು ಪ್ರಕರಣದಲ್ಲಿ ಭಾಗಿಯಾಗಲು ಅವಕಾಶ ಕೇಳಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಕೆ ಮಾಡಿರುವುದಾಗಿ ತಿಳಿದುಬಂದಿದೆ.ಫೆ.೧೩ಕ್ಕೆ ವಿಚಾರಣೆ ಮುಂದಕ್ಕೆ; ಈಗಾಗಲೇ ಮಹೇಶ್ ಶೆಟ್ಟಿ ಹಾಗೂ ಇತರರ ಪರವಾಗಿ ಹಾಜರಾಗುತ್ತಿರುವ ನ್ಯಾಯವಾದಿಗಳು ಧರ್ಮಸ್ಥಳದವರನ್ನು ಈ ಪ್ರಕರಣದಲ್ಲಿ ಕಕ್ಷಿದಾರರಾಗಿಸುವುದಕ್ಕೆ ಈಗಾಗಲೇ ಆಕ್ಷೇಪಣೆ ಸಲ್ಲಿಸಿದ್ದಾರೆ. ನ್ಯಾಯಾಲಯ ವಿಚಾರಣೆಯನ್ನು ಫೆ.೧೩ಕ್ಕೆ ಮುಂದೂಡಿದ್ದು, ಅಂದು ಮಹೇಶ್ ಶೆಟ್ಟಿ ಪರ ವಕೀಲರು ತಮ್ಮ ವಾದ ಮಂಡಿಸಲಿದ್ದಾರೆ. ಎಸ್‌ಐಟಿ ಪರ ವಕೀಲರೂ ಆಕ್ಷೇಪಣೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಅವರೂ ಮುಂದೆ ಈ ಬಗ್ಗೆ ವಾದ ಮಂಡಿಸಲಿದ್ದಾರೆ.ನ್ಯಾಯಾಲಯಕ್ಕೆ ಹಾಜರಾದ ಚಿನ್ನಯ್ಯ:ಸಾಕ್ಷಿ ದೂರುದಾರನಾಗಿ ಬಂದು ಜೈಲು ಸೇರಿ ಇದೀಗ ಜಾಮೀನಿನ ಮೇಲೆ ಹೊರ ಬಂದಿರುವ ಚಿನ್ನಯ್ಯ ಹಾಗೂ ಆತನ ಪತ್ನಿ ಗುರುವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಧರ್ಮಸ್ಥಳದವರು ಸಲ್ಲಿಸಿರುವ ಅರ್ಜಿಯಂತೆ ಅವರನ್ನು ಪ್ರಕರಣದಲ್ಲಿ ಭಾಗಿಗಳಾಗಲು ಅವಕಾಶ ನೀಡುವುದಕ್ಕೆ ತಮ್ಮ ಆಕ್ಷೇಪಣೆ ಇಲ್ಲ ಎಂದು ನ್ಯಾಯಾಲಯದ ಮುಂದೆ ಚಿನ್ನಯ್ಯ ನ ಪರ ವಕೀಲರು ತಿಳಿಸಿರುವುದಾಗಿ ತಿಳಿದುಬಂದಿದೆ.




























