
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.27-ಪ್ರಸ್ತುತ ಜಗತ್ತಿಗೆ ಹಾಗೂ ಯುದ್ಧದ ಉನ್ಮಾದದಲ್ಲಿ ಇರುವ ದೇಶಗಳಿಗೆ ಬುದ್ಧನ ಚಿಂತನೆಗಳು ಅತ್ಯಂತ ಅಗತ್ಯವಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬೌದ್ಧ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಶಾಖೆ ವತಿಯಿಂದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 70ನೇ ಧಮ್ಮ ದೀಕ್ಷಾ ಮಹೋತ್ಸವ ಮತ್ತು ವರ್ಷಮಾಸ ಆಚರಣೆಯ ಅಂಗವಾಗಿ ಶನಿವಾರ ಆಯೋಜಿಸಿದ್ದ ಮನೆ ಮನೆಗೆ ಧಮ್ಮದೀಪ ಕಾರ್ಯಕ್ರಮ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿಸಿದರು.
ಬೌದ್ಧ ಧರ್ಮದಲ್ಲಿ ವರ್ಷವಾಸ ಆಚರಣೆ ಭಿಕ್ಕುಗಳಿಗೆ ಅತ್ಯಂತ ಮಹತ್ವವಾಗಿದೆ. ಬಿಕ್ಕುಗಳು ತಮ್ಮ ಪರ್ಯಾಟನೆಯನ್ನು ಮುಗಿಸಿ ಮಳೆಗಾಲದ ಮೂರು ತಿಂಗಳು ಧಮ್ಮದ ಅಧ್ಯಯನದಲ್ಲಿ ಮತ್ತು ಪ್ರವಚನಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಬೌದ್ಧ ಧರ್ಮದ ಚಿಂತನೆಯ ಸಾರವನ್ನು ಹರಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವವಾಗಿದೆ. ಅ.24, 25 ರಂದು ಜಿಲ್ಲೆಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನಕ್ಕೆ ಇದು ಪೂರಕವಾಗಿದೆ ಎಂದು ಹೇಳಿದರು.
ಬೌದ್ಧ ಧರ್ಮಕ್ಕೆ ತನ್ನದೇ ಆದ ಆಂತರಿಕ ಶಕ್ತಿಯಿದೆ. ಅದರಲ್ಲಿದ್ದ ಕರುಣೆ, ಸಮಾನತೆ ಮತ್ತು ಅಹಿಂಸೆಯ ಗುಣಗಳೇ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದ್ದವು. ಬೌದ್ಧ ಭಿಕ್ಷುಗಳು ಎಲ್ಲೇ ಹೋದರೂ ಜನರು ಸ್ವಪ್ರೇರಣೆಯಿಂದ ಅವರ ಹಿಂದೆ ಸಾಗುತ್ತಿದ್ದರು. ಭಾರತದ ನೆಲವನ್ನು ಅಗೆದಷ್ಟು ನಮಗೆ ಸಿಗುವುದು ಬುದ್ಧನ ಚಿಂತನೆಗಳು ಮತ್ತು ಬೌದ್ಧ ಪರಂಪರೆಯ ಕುರುಹುಗಳೇ ಹೊರತು ಬೇರೇನಲ್ಲ ಎಂದು ತಿಳಿಸಿದರು.
ಭಾರತೀಯ ಬೌದ್ಧ ಮಹಾಸಭಾ ರಾಜ್ಯಾಧ್ಯಕ್ಷ ಹಾಗೂ ನಿವೃತ್ತ ಪೆÇಲೀಸ್ ಅಧಿಕಾರಿ ಸಿದ್ದರಾಜು ಮಾತನಾಡಿ, ಮೌಢ್ಯ ಮತ್ತು ಕಂದಾಚಾರಗಳನ್ನು ಹರಡುವ ವೈದಿಕ ಧರ್ಮದ ಆಚರಣೆಗಳಿಂದ ಶೋಷಿತ ಸಮುದಾಯಗಳು ಇನ್ನಾದರೂ ದೂರ ಉಳಿಯಬೇಕಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಗಳಾದವರು ಅವರು ಕೊಟ್ಟ ಸಂವಿಧಾನ ಮತ್ತು ಮೀಸಲಾತಿಗಷ್ಟೇ ಸೀಮಿತವಾಗದೇ, ಅವರು ನೀಡಿದ ಧಮ್ಮವನ್ನು ಅಪ್ಪಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಜೇತವನ ಬುದ್ಧ ವಿಹಾರದ ಮನೋರಖ್ಖಿತ ಭಂತೇಜಿ, ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಆರ್.ಬಸವರಾಜು, ಉಪಾಧ್ಯಕ್ಷ ಸಿ.ಎನ್.ಉಮೇಶ್ ಕುದರ್, ಮಹಿಳಾ ಘಟಕದ ಅಧ್ಯಕ್ಷೆ ನಾಗಶಿಲ್ಪ ಉಮೇಶ್ ಕುದರ್, ಸಾಹಿತಿ ಮಂಜು ಕೋಡಿಉಗನೆ, ಮಹದೇವಯ್ಯ, ಕೃಷ್ಣಯ್ಯ, ವಕೀಲ ರಾಜಣ್ಣ, ರಮಾಬಾಯಿ ಫೌಂಡೇಷನ್ ಅಧ್ಯಕ್ಷರಾದ ಪುಷ್ಪ ಮರಿಸ್ವಾಮಿ, ಶಿಕ್ಷಕ ನಂಜುಂಡಸ್ವಾಮಿ, ಸಿದ್ದರಾಜು ಹಾಗೂ ಇತರರು ಹಾಜರಿದ್ದರು.


























