Home ಜಿಲ್ಲೆ ಮಂಗಳೂರು ಬೀರಮಲೆ ಪೂರ್ಣಾಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್- ಅಶೋಕ್ ರೈ

ಬೀರಮಲೆ ಪೂರ್ಣಾಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್- ಅಶೋಕ್ ರೈ

ಪುತ್ತೂರು: ಬೀರಮಲೆ ಬೆಟ್ಟದ ಅಭಿವೃದ್ಧಿಗೆ ಸಂಬಂಧಿಸಿದಂತೆ ಈಗಾಗಲೇ ರೂ. ೨ ಕೋಟಿ ಅನುದಾನ ನೀಡಿದ್ದು, ೧ ಕೋಟಿಯ ಕೆಲಸ ಆಗಿರುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ ೨ ಕೋಟಿ ಅನುದಾನ ನೀಡುತ್ತೇನೆ. ಬೀರಮಲೆ ಬೆಟ್ಟದ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಯೋಜನೆಯನ್ನು ತಕ್ಷಣ ತಯಾರು ಮಾಡಿ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಬೀರಮಲೆ ಬೆಟ್ಟ ಅಭಿವೃದ್ಧಿ ಯೋಜನೆ ಪುತ್ತೂರು ಇವರ ಆಶ್ರಯದಲ್ಲಿ ಬೀರಮಲೆ ಬೆಟ್ಟದಲ್ಲಿ ಜರಗಿದ ಗಾಳಿಪಟ ಸ್ಪರ್ಧೆ, ಫುಡ್ ಕೋರ್ಟ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡ ಬೀರಮಲೆ ಉತ್ಸವ -೨೦೨೬ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ ಬೀರಮಲೆ ಬೆಟ್ಟ ಅಭಿವೃದ್ಧಿ ಯೋಜನೆಯ ಅಧ್ಯಕ್ಷ ಎ. ಜಗಜೀವನ್ ದಾಸ್ ರೈ ಮಾತನಾಡಿ, ಪುತ್ತೂರಿನ ಎತ್ತರವಾದ ಪ್ರಕೃತಿ ರಮಣೀಯ ತಾಣವಾಗಿದೆ. ಬೀರಮಲೆ ಬೆಟ್ಟ ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ಸೂರ್ಯನ ಪ್ರಕಾಶವನ್ನು ಇಲ್ಲಿ ಕಾಣ ಬಹುದಾಗಿದೆ. ತಹಶೀಲ್ದಾರ್ ಕೋಚಣ್ಣ ರೈ ಅವರು ಬೀರಮಲೆ ಹಿಲ್ ಡೆವಲಪ್ಟೆಂಟ್ ಪ್ರಾಜೆಕ್ಟ್ ಅಡಿಯಲ್ಲಿ ಬೀರಮಲೆ ಬೆಟ್ಟದಲ್ಲಿ ಮಾಡಿದ ರಸ್ತೆ, ಪಾರ್ಕ್, ಡಿಜಿಟಲ್ ಲೈಟ್ಸ್, ಗಿಡಮರಗಳು ಅಭಿವೃದ್ಧಿ ಹೊಂದುತ್ತಾ ಬಂದಿದೆ ಎಂದರು. ಶಾಸಕ ಅಶೋಕ್ ರೈ ಅವರು ಬೀರಮಲೆ ಬೆಟ್ಟದ ಅಭಿವೃದ್ಧಿಗೆ ತನ್ನನ್ನು ತಾನು ತೊಡಗಿಸಿಕೊಂಡಿದ್ದು ಕೇವಲ ಆಶ್ವಾಸನೆ ನೀಡುವುದು ಮಾತ್ರವಲ್ಲ ನೀಡಿದ ಆಶ್ವಾಸನೆಯ ಫಾಲೋ ಅಪ್ ಮಾಡುತ್ತಾರೆ. ಶಾಸಕರ ಅನುದಾನದಲ್ಲಿ ಡಿಜಿಟಲ್ ಟ್ರೀ, ಕಲರ್‌ಫುಲ್ ಲೈಟ್‌ಗಳು ಹೀಗೆ ಹಲವು ಅಭಿವೃದ್ಧಿ ಕಾರ್ಯಗಳು ಆಗಿದ್ದು ಮುಂದಿನ ದಿನಗಳಲ್ಲಿ ಬೀರಮಲೆ ಬೆಟ್ಟ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿ ಆಗಬೇಕಿದೆ. ಬೀರಮಲೆ ಬೆಟ್ಟ ಪ್ರವಾಸೋದ್ಯಮ ತಾಣವಾಗಿ ಪರಿವರ್ತನೆ ಹೊಂದುವುದು ನಮ್ಮ ಆದ್ಯತೆಯಾಗಿದೆ ಎಂದರು.
ಪುತ್ತೂರು ಡಿವೈಎಸ್‌ಪಿ ಪ್ರಮೋದ್ ಕುಮಾರ್, ಪುತ್ತೂರು ಎಸಿಎಫ್ ಸುಬ್ಬಯ್ಯ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಸುಭಾಷ್ ರೈ ಬೆಳ್ಳಿಪ್ಪಾಡಿ, ಬೀರಮಲೆ ಬೆಟ್ಟ ಅಭಿವೃದ್ಧಿ ಯೋಜನೆಯ ಉಪಾಧ್ಯಕ್ಷೆ ಡಾ. ಸತ್ಯವತಿ ಆಳ್ವ ಕಾರ್ಯದರ್ಶಿ ನಿತಿನ್ ಪಕ್ಕಳ, ಕಾರ್ಯಕಾರಿ ಸಮಿತಿ ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವ, ಶಿವರಾಮ ಆಳ್ವ, ಕೇಶವ ನಾಯಕ್, ಜೈರಾಜ್ ಭಂಡಾರಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಪ್ರೊ. ಝೇವಿಯರ್ ಡಿಸೋಜಾ ವಂದಿಸಿ, ಕಾರ್ಯಕ್ರಮ ನಿರ್ವಹಿಸಿದರು.