
ಮಂಗಳೂರು, ಜೂ.೨:ಬೀದಿಬದಿ ವ್ಯಾಪಾರಿಗಳ ಆರ್ಥಿಕ ಸ್ವಾವಲಂಬನೆಗಾಗಿ ಜಾರಿಯಲ್ಲಿರುವ ಪಿಎಂ ಸ್ವನಿಧಿ ಸಾಲ ಯೋಜನೆಯನ್ನು ಜಾರಿಗೊಳಿಸಬೇಕಾದ ರಾಷ್ಟ್ರೀಕೃತ ಬ್ಯಾಂಕುಗಳು ಬೀದಿಬದಿ ವ್ಯಾಪಾರಿಗಳಿಗೆ ಸಮರ್ಪಕವಾಗಿ ಸಾಲ ಮಂಜೂರು ಮಾಡದೆ, ಅನಗತ್ಯ ದಾಖಲೆಗಳನ್ನು ಕೇಳಿ ಸಾಲ ನಿರಾಕರಣೆ ಮಾಡುತ್ತಿದೆ. ಇದರ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ದ.ಕ.ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಕೆಲವು ಬ್ಯಾಂಕುಗಳು ಸಿಬಿಲ್ ಸ್ಕೋರ್ ನೋಡಿ ಸಾಲ ನೀಡದೆ ವಂಚಿಸುತ್ತಿದೆ. ಇನ್ನು ಕೆಲವು ಬ್ಯಾಂಗಳು ಎಲ್ಲಾ ದಾಖಲೆಗಳನ್ನು ಒದಗಿಸಿದರೂ ಸಾಲ ಮಂಜೂರು ಮಾಡಲು ಮೀನಮೇಷ ಎಣಿಸುತ್ತಿದೆ. ಇದರಿಂದಾಗಿ ಸಾಲದ ಅವಶ್ಯಕತೆ ಇರುವ ಬಡ ಬೀದಿ ವ್ಯಾಪಾರಿಗಳಿಗೆ ಅನ್ಯಾಯ ಆಗುತ್ತಿದೆ ಎಂದು ಸಂಘ ಆರೋಪಿಸಿದೆ.
ಬೀದಿಬದಿ ವ್ಯಾಪಾರಿಗಳಿಗೆ ಮೊದಲ ಹಂತದಲ್ಲಿ ೧೫,೦೦೦ ರೂ.ಸಾಲ ಪಡೆದು ಮರುಪಾವತಿ ಮಾಡಿದ ಬೀದಿ ವ್ಯಾಪಾರಿಗಳು ಎರಡನೇ ಮತ್ತು ಮೂರನೇ ಹಂತದ ಸಾಲ ಪಡೆಯಲು ಅರ್ಹರಿದ್ದರೂ ವಿನಾ ಕಾರಣ ಬಡವರ ಹಕ್ಕಿನ ಸಾಲವನ್ನು ರಾಷ್ಟ್ರೀಕೃತ ಬ್ಯಾಂಕುಗಳು ನಿರಾಕರಿಸುತ್ತಿದೆ. ಬೀದಿ ವ್ಯಾಪಾರಿಗಳನ್ನು ಆರ್ಥಿಕವಾಗಿ ಸ್ವಾವಲಂಬಿ ಮಾಡುವ ಸರಕಾರದ ಯೋಜನೆಗಳನ್ನು ರಾಷ್ಟ್ರೀಕೃತ ಬ್ಯಾಂಕುಗಳು ವಿಫಲಗೊಳಿಸುತ್ತಿದೆ ಎಂದು ದೂರಿದೆ.
ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು)ದ ಗೌರವಾಧ್ಯಕ್ಷ ಬಿ.ಕೆ. ಇಮ್ಮಿಯಾಝ್, ಅಧ್ಯಕ್ಷ ಮುಝಫರ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್.ಎಸ್. ಉಪಾಧ್ಯಕ್ಷ ಎಂ.ಎನ್. ಶಿವಪ್ಪ ಕೋಶಾಧಿಕಾರಿ ಹಂಝ ಮುಹಮ್ಮದ್ ಮತ್ತು ಅಶ್ರಫ್ ನಿಯೋಗದಲ್ಲಿದ್ದರು.





























