
ಸಂಜೆವಾಣಿ ವಾರ್ತೆ
ಬಳ್ಳಾರಿ, ಜ.31: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ (FPAI) ಬಳ್ಳಾರಿ ಶಾಖೆ ಹಾಗೂ ಬಳ್ಳಾರಿ ಶಾಖ ವಿದ್ಯುತ್ ಸ್ಥಾವರ (BTPS), ಕುಡತಿನಿ ಇವರ ಸಹಯೋಗದಲ್ಲಿ ಗರ್ಭಕಂಠ ಕ್ಯಾನ್ಸರ್ ಕುರಿತು ಜಾಗೃತಿ ಕಾರ್ಯಕ್ರಮವನ್ನು ಬಿಟಿಪಿಎಸ್ ಸಭಾಂಗಣದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಬಿಟಿಪಿಎಸ್ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಕೆ. ಗಂಗಾಧರ ನಾಯಕ್ ಅವರು ಉದ್ಘಾಟಿಸಿದರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು ಸಮಯಕ್ಕೆ ಸರಿಯಾದ ತಪಾಸಣೆ, ಮುನ್ನೆಚ್ಚರಿಕೆ ಹಾಗೂ ಜಾಗೃತಿ ಅತ್ಯಂತ ಅಗತ್ಯವೆಂದು ತಿಳಿಸಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಡಾ.ಪ್ರಣಿತಾ ಅಜಯ್ ಸ್ತ್ರೀ ರೋಗ ತಜ್ಞರು ಸದಸ್ಯರು FPAI , ಗರ್ಭಕಂಠ ಕ್ಯಾನ್ಸರ್ನ ಕಾರಣಗಳು, ಲಕ್ಷಣಗಳು, ತಡೆಗಟ್ಟುವ ವಿಧಾನಗಳು, ತಪಾಸಣೆಯ ಮಹತ್ವ ಹಾಗೂ ಲಸಿಕೆ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಪ್ರಸ್ತಾವಿಕ ಭಾಷಣವನ್ನು ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಬಳ್ಳಾರಿ ಶಾಖೆಯ ಶಾಖಾ ವ್ಯವಸ್ಥಾಪಕರಾದ ಶ್ರೀಮತಿ ಎಸ್. ವಿಜಯಲಕ್ಷ್ಮಿ ಅವರು ಮಾಡಿದರು. ಹಾಗೂ ಅವರು ಮಹಿಳೆಯರ ಆರೋಗ್ಯ ರಕ್ಷಣೆ, ಲೈಂಗಿಕ ಹಾಗೂ ಪ್ರಜನನ ಆರೋಗ್ಯ ಸೇವೆಗಳ ಮಹತ್ವ ಮತ್ತು ಕ್ಯಾನ್ಸರ್ ತಡೆಗಟ್ಟುವಲ್ಲಿ FPAI ಸಂಸ್ಥೆಯ ಪಾತ್ರವನ್ನು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಬಿಟಿಪಿಎಸ್ನ ಸಿಬ್ಬಂದಿ ಹಾಗೂ ಉದ್ಯೋಗಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದು, ಗರ್ಭಕಂಠ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮವು ಮಹಿಳೆಯರ ಆರೋಗ್ಯ ರಕ್ಷಣೆಯ ಸಂದೇಶದೊಂದಿಗೆ ಸಮಾಪ್ತಿಯಾಯಿತು.

























