ಬಿಜೆಪಿ- ಜೆಡಿಎಸ್‌ಗೆ ಯೂಟರ್ನ್ ಹೊಸದೇನಲ್ಲ: ಸುರೇಶ್ ಕಿಡಿ


ಬೆಂಗಳೂರು, ಜೂ. ೯- ಆರ್‌ಸಿಬಿ ಮೆರವಣಿಗೆಗೆ ಒತ್ತಾಯ ಮಾಡಿ ಈಗ ಬಿಜೆಪಿ-ಜೆಡಿಎಸ್ ಯೂಟರ್ನ್ ಹೊಡೆಯುತ್ತಿದ್ದಾರೆ. ಇದು ಇವರಿಗೆ ಹೊಸದೇನಲ್ಲ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಸಿಬಿ ಕಪ್ ಗೆದ್ದ ನಂತರ ಎರಡು ಪಕ್ಷಗಳು ಮೆರವಣಿಗೆಗೆ ಒತ್ತಾಯ ಮಾಡಿ ಕ್ರೀಡಾಭಿಮಾನಿಗಳಿಗೆ ಅವಮಾನ ಮಾಡುತ್ತಿದ್ದೀರಿ, ನಿಮಗೆ ಮೆರವಣಿಗೆ ಮಾಡಲು ಆಗುವುದಿಲ್ಲವೇ ಎಂದು ಪ್ರಶ್ನೆ ಮಾಡಿದ್ದರು. ಈಗ ಯೂಟರ್ನ್ ಹೊಡೆಯುತ್ತಿದ್ದಾರೆ ಎಂದು ಹರಿಹಾಯ್ದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿಯವರು ಯೂಟರ್ನ್ ಹೊಡೆಯುತ್ತಲೇ ಇದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲೂ ಘೋರ ದುರಂತಗಳು ಆಗಿವೆ. ಬೇಕಾದರೆ ಪಟ್ಟಿ ನೀಡುತ್ತೇವೆ. ನೈತಿಕತೆ ಇದ್ದರೆ ಬಿಜೆಪಿ ನಾಯಕರು ಮೊದಲು ರಾಜೀನಾಮೆ ನೀಡಲಿ ಎಂದು ಅವರು ಹೇಳಿದರು.
ಮುಂಬೈ ದಾಳಿಯಾದಾಗ ಪ್ರಧಾನಿ ಆಗಿದ್ದ ಡಾ. ಮನಮೋಹನ್‌ಸಿಂಗ್ ಅವರು ರಾಜೀನಾಮೆ ನೀಡಿದ್ದರಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಈ ಘಟನೆ ನಂತರ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ವಿಲಾಸ್‌ರಾವ್ ದೇಶಮುಖ್ ಅವರು ರಾಜೀನಾಮೆ ನೀಡಿದ್ದರು. ಇದನ್ನು ಕುಮಾರಸ್ವಾಮಿ ಮರೆತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕೇಂದ್ರ ಸಚಿವ ಕುಮಾರಸ್ವಾಮಿಯವರಿಗೆ ಡಿ.ಕೆ. ಶಿವಕುಮಾರ್‌ರವರನ್ನು ನೆನಪಿಸಿಕೊಳ್ಳದೇ ಇದ್ದರೆ ಊಟ, ನಿದ್ದೆ ಏನೂ ಆಗುವುದಿಲ್ಲ. ಮೊದಲು ಆರೋಗ್ಯದ ಕಡೆ ಗಮನ ಕೊಡಲಿ, ರಾಷ್ಟ್ರದ ಜನರ ಸೇವೆ ಮಾಡಲಿ ಎಂದು ಹೇಳಿದರು.
ನನ್ನ ಆರೋಗ್ಯವನ್ನು ದೇವರು ನೋಡಿಕೊಳ್ಳುತ್ತಾನೆ ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲರ ಆರೋಗ್ಯವನ್ನು ದೇವರೇ ನೋಡಿಕೊಳ್ಳುವುದು. ಅವರು ಖುಷಿಯಾಗಿದ್ದರೆ ನಮಗೆ ಸಂತೋಷ ಎಂದರು.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್‌ಐಎಗೆ ವಹಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ತನಿಖೆ ನಡೆಸಲು ನಮ್ಮ ಪೊಲೀಸರು ಸಮರ್ಥರಿದ್ದಾರೆ. ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರ ಇದ್ದಾಗ ಹಲವು ಪ್ರಕರಣಗಳನ್ನು ಸಿಬಿಐಗೆ ನೀಡಲಾಗಿತ್ತು. ಇದರ ಫಲಿತಾಂಶ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕರಾವಳಿ ಭಾಗದಲ್ಲಿ ವಿಷ ಬೀಜ ಬಿತ್ತುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇದು ಸರಿಯಲ್ಲ ಎಂದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೈಕಮಾಂಡ್ ಬುಲಾವ್ ಮೇರೆಗೆ ದೆಹಲಿಗೆ ತೆರಳಿದ್ದಾರೆ ಎಂಬ ವರದಿಗಳು ಸತ್ಯಕ್ಕೆ ದೂರವಾದದ್ದು. ಬೆಂಗಳೂರಿನ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ರವರು ದೆಹಲಿಯಲ್ಲಿರುವ ಹೊಸ ತಂತ್ರಜ್ಞಾನ ವೀಕ್ಷಿಸಲು ಅಧಿಕಾರಿಗಳ ಜತೆ ಅಲ್ಲಿಗೆ ತೆರಳಿದ್ದಾರೆ ಅಷ್ಟೇ. ಹೈಕಮಾಂಡ್ ಬುಲಾವ್ ಮೇರೆಗೆ ದೆಹಲಿಗೆ ಹೋಗಿದ್ದಾರೆ ಎಂಬುದು ಸುಳ್ಳು. ಶಿವಕುಮಾರ್ ರವರು ದೆಹಲಿಗೆ ಹೋದಾಗ ಹೈಕಮಾಂಡ್ ಭೇಟಿ ಮಾಡುತ್ತಾರೆ. ಅದು ಸಾಮಾನ್ಯ ವಿಚಾರ ಎಂದರು.
ನಾಮ ನಿರ್ದೇಶಿತ ಸದಸ್ಯರ ಪಟ್ಟಿಯನ್ನು ಎಐಸಿಸಿ ತಡೆ ಹಿಡಿದಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಅವರು ಹೇಳಿದರು.
ತುಮಕೂರನ್ನು ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರಿಸಬೇಕು ಎಂಬ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ರವರ ಹೇಳಿಕೆಯನ್ನು ನಾನು ಸ್ವಾಗತ ಮಾಡುತ್ತೇನೆ. ಆದರೆ ಈ ಕುರಿತು ಅಂತಿಮವಾಗಿ ಸರ್ಕಾರ ತೀರ್ಮಾನ ಮಾಡುತ್ತದೆ ಎಂದು ಅವರು ಹೇಳಿದರು.