ಬಿಜೆಪಿ ಕಾರ್‍ಯಕರ್ತ ವೆಂಕಟೇಶ್ ಆತ್ಮಹತ್ಯೆ

ಬೆಂಗಳೂರು,ನ.೧೩- ಹಣಕಾಸು ವ್ಯವಹಾರದಲ್ಲಿ ನಷ್ಟ ಉಂಟಾಗಿ ಮನನೊಂದಿದ್ದ ಬಿಜೆಪಿ ಕಾರ್ಯಕರ್ತ ವೆಂಕಟೇಶ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೈಯಾಲಿಕಾವಲ್‌ನಲ್ಲಿ ನಡೆದಿದೆ.


ಮಲ್ಲೇಶ್ವರದ ಬಿಜೆಪಿ ಮಂಡಲದ ಕಾರ್ಯಕರ್ತನಾಗಿದ್ದ ವೆಂಕಟೇಶ್(೪೫) ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಹಾಗೂ ಸಂಸದ ಪಿ.ಸಿ.ಮೋಹನ್ ಅವರಿಗೂ ಆಪ್ತನಾಗಿದ್ದ ಹಲವು ವರ್ಷಗಳಿಂದ ಬಿಜೆಪಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು.


ವೈಯಾಲಿಕಾವಲ್‌ನ ವಿನಾಯಕ ವೃತ್ತದ ಬಳಿ ವೆಂಕಿ ಟೂರ್ಸ್ ಅಂಡ್ ಟ್ರಾವೆಲ್ಸ್ ನಡೆಸುತ್ತಿದ್ದ ವೆಂಕಟೇಶ್ ನಿನ್ನೆ ಸಂಜೆ ಟ್ರಾವೆಲ್ಸ್ ಕಚೇರಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಸದ್ಯ ಮೃತದೇಹವನ್ನ ಬೌರಿಂಗ್ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಇಂದು ಮಧ್ಯಾಹ್ನ ಅಶ್ವಥ್ ನಾರಾಯಣ್ ಅವರು ದರ್ಶನ ಮಾಡಲಿದ್ದಾರೆ.


ವೆಂಕಟೇಶ್ ಕಳೆದೆರಡು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಶವ ಪತ್ತೆಯಾಗಿದೆ ಅಂತ ಹೇಳಲಾಗ್ತಿದೆ. ಹಣಕಾಸು ನಷ್ಟದಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆಪ್ತ ಮೂಲಗಳು ಪೊಲೀಸರಿಗೆ ತಿಳಿಸಿವೆ.


ಚೀಟಿಯಿಂದ ಮೋಸ:


ವೆಂಕಟೇಶ್ ಅವರು ಚೀಟಿ ವ್ಯವಹಾರ ನಡೆಸುತ್ತಿದ್ದರು.ಅವರಿಗೆ ೭ ಜನ ಚೀಟಿ ಹಣ ಕಟ್ಟದೇ ಮೋಸ ಮಾಡಿದ್ದರು. ಇದೇ ಸಮಯದಲ್ಲಿ ಚೀಟಿ ಕಟ್ಟಿದ್ದ ಇನ್ನುಳಿದ ನಾಲ್ವರು ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರು.


ಇದರಿಂದ ಮಾನಸಿಕ ಹಿಂಸೆ ಅನುಭವಿಸುತ್ತಿದ್ದ ವೆಂಕಟೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.ಸಾಯುವ ಮುನ್ನ ವಿಡಿಯೋ ಮಾಡಿಟ್ಟು, ಹಣಕಾಸು ನಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ. ಜೊತೆಗೆ ಜೀವನದಲ್ಲಿ ಏನಾದರೂ ಆಗಿ ಚೀಟಿ ಏಜೆಂಟ್ ಆಗಬೇಡಿ ಎಂದು ಅಲವತ್ತುಕೊಂಡಿದ್ದು,ಪ್ರಮುಖ ಮುಖಂಡರು ಪರಿಚಸ್ಥರಾಗಿದ್ದರೂ ಯಾರೂ ನೆರವಿಗೆ ಬರಲಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.


ವೆಂಕಟೇಶ್ ಅವರ ಇಬ್ಬರು ತಂಗಿಯರು ಬಿಜೆಪಿ ಮಹಿಳಾ ಮೋರ್ಚಾದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ,ವೈಯಾಲಿಕಾವಲ್ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.