
ಸಂಜೆವಾಣಿ ನ್ಯೂಸ್
ಮೈಸೂರು: ಫೆ.22:- ದೆಹಲಿಯಲ್ಲಿ ನಡೆದ ಎಐ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ಮಾಡಿದ್ದಲ್ಲದೆ ಅಶ್ಲೀಲವಾಗಿ ವರ್ತಿಸಿರುವುದನ್ನು ಖಂಡಿಸಿ ಬಿಜೆಪಿ ಯವ ಮೋರ್ಚಾ ಹಾಗೂ ಮೈಸೂರು ನಗರ ಮತ್ತು ಗ್ರಾಮಾಂತರ ಘಟಕದ ವತಿಯಿಂದ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಲಾಯಿತು.
ನಗರದ ಮೆಟ್ರೋಪೋಲ್ ವೃತ್ತದಲ್ಲಿ ಪ್ರತಿಭಟಿಸಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ತೆರಳುತ್ತಿದ್ದ ವೇಲೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದು, ಬಂಧಿಸಿ ವಾಹನದಲ್ಲಿ ಕರೆದೊಯ್ದು ಸಿಆರ್ ಮೈದಾನದಲ್ಲಿ ಬಿಡುಗಡೆಗೊಳಿಸಿದರು.
ವಿಶ್ವಮಟ್ಟದಲ್ಲಿ ಭಾರತದ ಪ್ರತಿಷ್ಠೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಎಐ ಶೃಂಗಸಭೆಯಂತಹ ದೊಡ್ಡ, ಜಾಗತಿಕ ವೇದಿಕೆಯಲ್ಲಿ, ಪ್ರತಿಭಟನೆ ಸೋಗಿನಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷ ತನ್ನ ಹತಾಶೆ, ಅಸಹನೆಯನ್ನು, ಕೆಟ್ಟ ರೀತಿಯಲ್ಲಿ ಬೀದಿಗೆ ತಂದಿದೆ. ಅರೆಬೆತ್ತಲೆ ಪ್ರತಿಭಟನೆ ನಡೆಸುವ ಮೂಲಕ ಜಾಗತಿಕವಾಗಿ ದೇಶದ ಹಿರಿಮೆಗೆ ಮಸಿ ಬಳಿಯುವ ನೀಚ ಮಟ್ಟಕ್ಕೆ ಇಳಿದಿದೆ ಎಂದು ಕಿಡಿ ಕಾರಿದರು.
ಈ ವೇಳೆ ಮಾತನಾಡಿದ ಯುವ ಮೋರ್ಚಾ ನಗರ ಅಧ್ಯಕ್ಷ ರಾಕೇಶ್ ಗೌಡ, ವಿದೇಶಿ ಗಣ್ಯರ ಮುಂದೆ ಅಸಭ್ಯ ಪ್ರದರ್ಶನದ ಮೂಲಕ ದೇಶದ ಘನತೆಗೆ ಕುಂದುಂಟು ಮಾಡುವ ಯೂತ್ ಕಾಂಗ್ರೆಸ್ಸಿನ ಅಸಭ್ಯ ನಡೆ ಖಂಡನೀಯ. ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವಂತೆ, ಎಲ್ಲ ಕಡೆ ಕುಸಿಯುತ್ತಿರುವ ತನ್ನ ನೆಲೆಯಿಂದ ತಲೆ ಕೆಟ್ಟು, ದೇಶಕ್ಕಿಂತ ಸ್ವಾರ್ಥವೇ ಲೇಸು ಎನ್ನುವ ದುಸ್ಥಿತಿ ಕಾಂಗ್ರೆಸ್ಸಿಗೆ ಬಂದಿದೆ. ದೇಶದ ಜನತೆ ಕಾಂಗ್ರೆಸ್ ಪಕ್ಷದ ಈ ಅಸಹ್ಯ ವರ್ತನೆಯನ್ನು ಎಂದಿಗೂ ಕ್ಷಮಿಸರು. ಅಧಿಕಾರ ಲಾಲಸೆ, ಅಸಹನೆಗಳಿಂದ ದೇಶದ ಘನತೆಗೆ ಮಸಿ ಬಳಿಯುವ ಕಾಂಗ್ರೆಸ್ಸಿನ ಇಂತಹ ಅಸಭ್ಯ ಕುತಂತ್ರಗಳಿಗೆ ಧಿಕ್ಕಾರ. ಇಡೀ ದೇಶ ಕಾಂಗ್ರೆಸ್ ವರ್ತನೆ ಖಂಡಿಸುತ್ತಿದೆ ಎಂದರು.
ಯುವ ಮೋರ್ಚಾ ಗ್ರಾಮಾಂತರ ಅಧ್ಯಕ್ಷ ಅರ್ಜುನ್ ಪಾರ್ಥ, ಪ್ರಧಾನ ಕಾರ್ಯದರ್ಶಿಗಳಾದ ಡಿ.ಲೋಹಿತ್, ಆರ್.ಸಚಿನ್, ನಗರ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ.ರಘು, ಸೋಮಸುಂದರ್, ರುದ್ರಮೂರ್ತಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಸದಾನಂದ, ರಾಜ್ಯ ಕಾರ್ಯಕಾರಣಿ ಸದಸ್ಯ ಗಿರಿಧರ್, ನಗರ ಉಪಾಧ್ಯಕ್ಷ ಅರುಣ್ ಕುಮಾರ್ ಗೌಡ, ಶ್ರೀಕಂಠ ಮೂರ್ತಿ, ಮಂಡಲ ಅಧ್ಯಕ್ಷರುಗಳಾದ ಫೈಟಿ ರವಿ, ಸ್ಮಾರ್ಟ್ ಮಂಜು, ವೇಲು, ಸಂತೋಷ್, ಗ್ರಾಮಾಂತರ ಪ್ರಧಾನ ಕಾರ್ಯದರ್ಶಿಗಳಾದ ಪರೀಕ್ಷಿತ ರಾಜೆ ಅರಸ್, ಜೋಗಿ ಮಂಜು, ಕೃಷ್ಣಮೂರ್ತಿ, ಪದಾಧಿಕಾರಿಗಳಾದ ಉಮೇಶ್, ಪುನೀತ್, ಮನು, ಚೇತನ್, ಕಿರಣ್ ನಾಯ್ಡು, ನವೀನ್ ಶೆಟ್ಟಿ, ಧನರಾಜ್, ನಿಶಾಂತ್, ಅರ್ಜುನ್, ಮೋಹನ್, ನವೀನ್ ರಾಜ್, ಕಾರ್ತಿಕ್ ಪರಿಯಪ್ಪ, ನಾಣಿಗೌಡ, ಸೇರಿದಂತೆ ಹಲವರು ಭಾಗವಹಿಸಿದ್ದರು.






























