Home ಜಿಲ್ಲೆ  ಬಾಪೂಜಿನಗರದ ಬನ್ನಿಮಹಂಕಾಳಿ ದೇವಸ್ಥಾನದಲ್ಲಿ ಶರನ್ನವರಾತ್ರಿ 

 ಬಾಪೂಜಿನಗರದ ಬನ್ನಿಮಹಂಕಾಳಿ ದೇವಸ್ಥಾನದಲ್ಲಿ ಶರನ್ನವರಾತ್ರಿ 

(ಸಂಜೆವಾಣಿ ವಾರ್ತೆ)

ಬಳ್ಳಾರಿ, ಅ.9; ನಗರದ 7ನೇ ವಾರ್ಡ್ ಬಾಪೂಜಿ ನಗರದ ಆರ್.ಕೆ.ಮಿಲ್ ರಸ್ತೆಯಲ್ಲಿನ  ಬನ್ನಿ ಮಹಂಕಾಳಿ ದೇವಸ್ಥಾನದಲ್ಲಿ ದಸರಾ ‘ಶರನ್ನವರಾತ್ರಿ’ ಅಂಗವಾಗಿ ವಿಶೇಷ ಪೂಜೆ, ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ

ಸತತ ಐದನೇ ವರ್ಷವೂ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ದಸರಾ ಶರನ್ನವರಾತ್ರಿ ನಿಮಿತ್ತ ಒಂಭತ್ತು ದಿನಗಳ ಕಾಲ ಬನ್ನಿ ಮಹಂಕಾಳಿ ದೇವಿಗೆ ಪ್ರತಿದಿನ ಒಂದೊಂದು ವಿಧದ ಮುಖವಾಡವನ್ನಿಟ್ಟು, ವಿಶೇಷ ಹೂವಿನ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ನವರಾತ್ರಿಯ ಐದನೇ ದಿನವಾದ ಅ.15 ರಂದು ಗುರುವಾರ ಅದ್ಧೂರಿ ಕುಂಭೋತ್ಸವ ನಡೆಯಲಿದೆ. ನಗರದ ಸಣ್ಣ ಮಾರುಕಟ್ಟೆ ಬಳಿಯ ಸುಂಕಲಮ್ಮ ದೇವಸ್ಥಾನದಿಂದ ಕುಂಭ ಮೆರವಣಿಗೆ ನಡೆಯಲಿದೆ. ಜೊತೆಗೆ 11 ದಿನಗಳ ಕಾಲ ಪ್ರತಿದಿನ ಮಧ್ಯಾಹ್ನ ಸಾವಿರಾರು ಜನರಿಗೆ ತರಹೇವಾರಿ ಅನ್ನದಾಸೋಹ ಕಾರ್ಯಕ್ರಮವೂ ನಡೆಯಲಿದೆ ಎಂದು ದೇವಸ್ಥಾನ ಭಕ್ತಮಂಡಳಿಯ ರವಿಕುಮಾರ್  ತಿಳಿಸಿದ್ದಾರೆ.

ದಸರಾ ಶರನ್ನವರಾತ್ರಿಯ ಒಂಭತ್ತು ದಿನಗಳೂ ಪ್ರತಿದಿನ ಬೆಳಗಿನ ಜಾವವೇ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ.

ಶರನ್ನವರಾತ್ರಿ ನಿಮಿತ್ತ ದೇವಸ್ಥಾನಕ್ಕೆ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ಬಾಪೂಜಿ ನಗರ ರಸ್ತೆಯುದ್ದಕ್ಕೂ ವಿದ್ಯುತ್ ದೀಪಗಳನ್ನು ಅಳವಡಿಸಿದ್ದು, ಶರನ್ನವರಾತ್ರಿ ಆರಂಭಕ್ಕೂ ಮುನ್ನವೇ ದೇವಸ್ಥಾನದ ಆವರಣದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.