ಬಾನು ಮುಷ್ತಾಕ ಅವರ ‘ ಎದೆಯ ಹಣತೆ ‘ಯಲ್ಲಿದಮನಿತ ಮಹಿಳೆಯರ ಸಂಕಟದ ದನಿ -ಗೊರವರ


ಸಂಜೆವಾಣಿ ವಾರ್ತೆ
ಬಳ್ಳಾರಿ ಸೆ,21:
ಬಂಡಾಯ ಚಳವಳಿಯ ಪ್ರಮುಖ ಲೇಖಕಿಯಾಗಿರುವ ಬಾನು ಮುಷ್ತಾಕ ಅವರ ಸಾಹಿತ್ಯದಲ್ಲಿ
ದಮನಿತ ಮಹಿಳೆಯರ ಸಂಕಟದ ದನಿ ಆರ್ದ್ರವಾಗಿ ತೆರೆದುಕೊಂಡಿದೆ ಎಂದು ಲೇಖಕ ಡಾ.ಟಿ.ಎಸ್ ಗೊರವರ ನುಡಿದರು.
ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ವಿಭಾಗದಿಂದ ಆಯೋಜಿಸಿದ್ದ ಬೂಕರ್ ಪ್ರಶಸ್ತಿ ಪುರಸ್ಕೃತರಾದ  ಬಾನು ಮುಷ್ತಾಕ ಅವರ ಕಥಾಸಂಕಲನ  ‘ಎದೆಯ ಹಣತೆ -ಕೆಲವು ಗ್ರಹಿಕೆಗಳು ‘ ಎನ್ನುವ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಲೇಖಕಿ ಮಹಿಳೆಯರ ಸ್ಥಿತಿಗತಿ,ಆಂತರ್ಯವನ್ನು  ಬೇರೆ ಬೇರೆ ಪಾತ್ರ, ಪರಿಸರ,ಸನ್ನಿವೇಶಗಳ ಮೂಲಕ ರೂಪಕ ನಿಷ್ಕವಾಗಿ  ನೋಡಿದ್ದಾರೆ. ಸುಡುವ ಸತ್ಯಗಳನ್ನು ಕಲಾತ್ಮಕವಾಗಿ ಕಥೆಗಳಲ್ಲಿ ಕಟ್ಟಿಕೊಟ್ಟಿರುವ ಅವರು ಪುರುಷ ಸಮಾಜದ ಕಟ್ಟುಪಾಡುಗಳಿಗೆ ಸೂಕ್ಷ್ಮವಾಗಿ ಪ್ರತಿರೋಧ ಒಡ್ಡಿದ್ದಾರೆ ಎಂದು ವಿಶ್ಲೇಷಿಸಿದರು.
ಅವರ ಶಕ್ತಿ ಮತ್ತು ಸಾಮರ್ಥ್ಯ ಕಲ್ಪನೆಗೆ ಎಡೆ ಮಾಡಿಕೊಡದೆ ವಾಸ್ತವದ ಕಟು ಸಂಗತಿಗಳನ್ನು ಮುನ್ನೆಲೆಗೆ ತಂದಿರುವುದು ಕಥೆಗಳ ಹೆಚ್ಚುಗಾರಿಕೆಯಾಗಿದೆ. ಬಾನು ಬೂಕರ್ ಮೂಲಕ ಕನ್ನಡ ನಾಡಿಗೆ ಕೀರ್ತಿ ತಂದಿದ್ದಾರೆ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಜಿ.ಪ್ರಹ್ಲಾದ ಚೌದ್ರಿ ವಹಿಸಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥರಾದ ದಸ್ತಗೀರಸಾಬ್ ದಿನ್ನಿ ಇಂತಹ ಕಾರ್ಯಕ್ರಮಗಳು  ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ, ಪುಸ್ತಕ ಪ್ರೀತಿ, ಹೊಸ ಆಲೋಚನಾ ಕ್ರಮವನ್ನು ವಿಸ್ತರಿಸಲು ಸಹಕಾರಿಯಾಗುತ್ತವೆ ಎಂದರು.
ವೇದಿಕೆಯ ಮೇಲೆ ಸಹಾಯಕ ಪ್ರಾಧ್ಯಾಪಕರಾದ ಪ್ರವೀಣ್ ಕುಮಾರ್ ಇದ್ದರು. ಈ ಸಂದರ್ಭದಲ್ಲಿ ವೈದ್ಯರಾದ ಡಾ.ಪರಸಪ್ಪ ಬಂಡಾರಕಲ್ಲಿ, ಡಾ.ದಿವ್ಯಾ ಎನ್, ಡಾ.ಸುಮಾ ಗುಡಿ, ಲೇಖಕರಾದ ಮಲ್ಲಿಕಾರ್ಜುನ ಸ್ವಾಮಿ, ಡಾ. ಶಿವಲಿಂಗಪ್ಪ ಹಂದಿಹಾಳು, ವೀರೇಂದ್ರ ರಾವಿಹಾಳ, ಆಶಾರೆಡ್ಡಿ ಉಪಸ್ಥಿತರಿದ್ದರು.