ಬಸ್ ಪಲ್ಟಿ: ೧೮ ಮಂದಿಗೆ ಗಾಯ

ಶಿವಮೊಗ್ಗ,ಅ,೨೦: ಪ್ರವಾಸಿಗರ ಬಸ್ ವೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ಬಿದ್ದ ಪರಿಣಾಮ, ಸುಮಾರು ೧೮ ಜನರು ಗಾಯಗೊಂಡ ಘಟನೆ ಜಿಲ್ಲೆಯ ಸಾಗರದ ಕಾರ್ಗಲ್ ಬಳಿಯ ಆಡುಕಟ್ಟೆಯ ಜೋಗಿನ ಮಠದ ಬಳಿ ನಡೆದಿದೆ.


ರತ್ನಮ್ಮ (೫೦) ,ಗಮ್ಯ ಶ್ರೀ (೧೧) ಸುಶೀಲಾ (೪೫), ನಾರಾಯಣಪ್ಪ (೭೨), ಸುಮಿತ್ ಕುಮಾರ್ (೩೮), ಸುಬ್ಬಲಕ್ಷ್ಮಿ(೨೯), ರೋಹಿತ್ ( ೨೦), ನವೀನ (೧೨), ಸಾವಿತ್ರಿ (೩೬), ವಿದ್ಯಾ ರಾಣಿ (೩೪), ಜ್ಯೋತಿ (೩೨), ಪುಷ್ಪಾವತಿ (೪೮), ಲಕ್ಷ್ಮಿ (೫೦), ಗಂಗಮ್ಮ (೬೫), ಮದನ್ (೧೪), ಗೌತಮ್ (೩೦), ಶಕುಂತಲಾ (೩೪) ಗಾಯಗೊಂಡವರೆಂದು ಗುರುತಿಸಲಾಗಿದೆ.ಗಾಯಾಳುಗಳನ್ನು ಸ್ಥಳೀಯರ ನೆರವಿನೊಂದಿಗೆ ಕಾರ್ಗಲ್ ಠಾಣೆ ಪೊಲೀಸರು ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ನಡೆದ ಸ್ಥಳವು ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ್ದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಹೇಗಾಯ್ತು?: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ೪೫ ಜನರಿದ್ದ ಪ್ರವಾಸಿಗರ ತಂಡವು, ಖಾಸಗಿ ಬಸ್ ನಲ್ಲಿ ಪ್ರವಾಸಕ್ಕೆ ಆಗಮಿಸಿತ್ತು. ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ ನಂತರ, ವಡನಬೈಲ್‌ನ ಬಳೆ ಪದ್ಮಾವತಿ ಅಮ್ಮನವರ ದೇವಾಲಯಕ್ಕೆ ತೆರಳುತ್ತಿದ್ದರು.ಈ ವೇಳೆ ಬಸ್ ಬ್ರೇಕ್ ಫೇಲ್ ಆಗಿ ಪಲ್ಟಿಯಾಗಿ ಬಿದ್ದಿದೆ ಎಂದು ತಿಳಿದುಬಂದಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಗಾಯಾಳುಗಳ ನೆರವಿಗೆ ಧಾವಿಸಿ ಆಸ್ಪತ್ರೆಗೆ ಸೇರಿಸಲು ನೆರವಾಗಿದ್ದಾರೆ.