ಬೆಂಗಳೂರು,ಅ.೧೩- ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೈದ್ಯೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕನನ್ನು ಚಾಲಕ ಹಾಗೂ ಪ್ರಯಾಣಿಕರು ಹಿಡಿದು ಸಂಜಯನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾಮುಕ ಫಿರೋಜ್ ಖಾನ್ ನನ್ನು ಬಂಧಿಸಿರುವ ಸಂಜಯನಗರ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಕೆಎ -೦೪-ಎಫ್ -೧೫೪೩ ಕೆ ಎಸ್ ಆರ್ಟಿಸಿ ಬಸ್ ನಲ್ಲಿ ವೈದ್ಯೆಯ ಪಕ್ಕದಲ್ಲಿ ಸೀಟು ಖಾಲಿಯಿದ್ದು,ಅದನ್ನು ಕಂಡ ಆರೋಪಿ ಫಿರೋಝ್ ಖಾನ್ ಬಂದು ಕುಳಿತಿದ್ದ. ನಂತರ ಖಾಸಗಿ ಭಾಗಕ್ಕೆ ಸ್ಪರ್ಶಿಸಿ ಕಾಮುಕತೆ ಮೆರೆದಿದ್ದ. ವೈದ್ಯೆ ಎಷ್ಟೇ ಪ್ರತಿರೋಧ ತೋರಿದರೂ ಮತ್ತೆ ಮತ್ತೆ ಕಿರಿಕುಳ ಕೊಡುತ್ತಿದ್ದ. ಅವನ ಕಾಟದಿಂದ ಬೇಸತ್ತ ಮಹಿಳೆ ತನ್ನ ಸಹೋದರನಿಗೆ ಮತ್ತು ಬಸ್ ಡ್ರೈವರ್ ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ವೈದ್ಯೆಯ ಸಹೋದರ ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟ ಕಾಮುಕನನ್ನು ಪ್ರಯಾಣಿಕರು ಮತ್ತು ಕಂಡಕ್ಟರ್ ಸೇರಿ ಹಿಡಿದಿದ್ದು, ಸಂಜಯ್ ನಗರದ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯ ವಿರುದ್ಧ ಕಿರುಕುಳಕ್ಕೊಳಗಾದ ವೈದ್ಯೆ ದೂರು ನೀಡಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಬಾಲಕಿಗೆ ಲೈಂಗಿಕ ಕಿರುಕುಳ ಬಂಧನಕ್ಕೆ ಹೆದರಿ ವೃದ್ಧ ಆತ್ಮಹತ್ಯೆ
ಬೆಂಗಳೂರು,ಅ.೧೩-ನಾಲ್ಕನೇ ತರಗತಿ ಓದುತ್ತಿದ್ದ ೯ ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ವೃದ್ಧನೋರ್ವ ಪೊಲೀಸರ ಬಂಧನಕ್ಕೆ ಭಯ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಂಗೇರಿಯ ಗಣಕಲ್ ನಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಂಬರೀಶ್ (೬೫) ಆತ್ಮಹತ್ಯೆ ಮಾಡಿಕೊಂಡವರು, ೯ ವರ್ಷದ ಬಾಲಕಿಗೆ ಒಂದು ವಾರದ ಹಿಂದೆ ಲೈಂಗಿಕ ಕಿರುಕುಳ ನೀಡಿದ್ದರು. ಇದನ್ನು ತಿಳಿದ ಬಾಲಕಿಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿರುವ ಸುದ್ಧಿ ತಿಳಿದು ಭಯ ಬಿದ್ದು ಶೌಚಾಲಯ ಸ್ವಚ್ಛಗೊಳಿಸುವ ಹಾರ್ಪಿಕ್ ಕುಡಿದು ಅಸ್ವಸ್ಥಗೊಂಡಿದ್ದರು. ಕೂಡಲೇ ಆತನನ್ನು ಬಿಜಿಎಸ್ ಆಸ್ಪತ್ರೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ. ಈತನ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.



























