
ಸಂಜೆವಾಣಿ ನ್ಯೂಸ್
ಮೈಸೂರು: ಫೆ.19:- ಇವನಾರವ ಇವನಾರವ ಎಂದೆನಿಸದಿರಯ್ಯಾ ಎಂದ ಬಸವಣ್ಣ, ಮನೆಗೆ ಕನ್ನ ಹಾಕಲು ಬಂದ ಕಳ್ಳನಲ್ಲೂ ಕೂಡಲ ಸಂಗಮ ದೇವನ್ನನ್ನು ಕಂಡಿದ್ದರು.ತನ್ಮೂಲಕ ನುಡಿ-ನಡೆ ಏಕಗೊಳಿಸಿದ್ದರು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕದ ಅಧ್ಯಕ್ಷ ಜಯಪ್ಪ ಹೊನ್ನಾಳಿ ಹೇಳಿದರು.
ನಗರದ ಕೇಂದ್ರ ಕಾರಾಗೃಹದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು ನಗರ ಘಟಕ, ಮೈಸೂರು ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ನಡೆದ ವಚನ ಸಾಹಿತ್ಯದ ಮೂಲಕ ಬಂಧಿಗಳ ಮನಃಪರಿವರ್ತನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಜಗತ್ತಿಗೆ ಅತ್ಯಂತ ಶ್ರೇಷ್ಠ ಮಹಾಕಾವ್ಯವಾದ ರಾಮಾಯಣ ಕೊಟ್ಟ ವಾಲ್ಮೀಕಿ ಕೂಡಾ ಸಂದರ್ಭವಶಾತ್ ಒಬ್ಬ ದರೋಡೆಕೋರನಾಗಿದ್ದ. ಮಹರ್ಷಿ ನಾರದರ ಮೌಲ್ಯಯುತ ನೀತಿಯುಕ್ತ ಮಾತುಗಳಿಂದ ಒಂದು ಅಮೃತ ಗಳಿಗೆಯಲ್ಲಿ ಬದಲಾಗಿ, ಮಹರ್ಷಿಯಾಗಿ ಮಹಾಕವಿಯೇ ಆಗಿ ಕಾಲಾತೀತರಾಗಿದ್ದಾರೆ. ಹೀಗಾಗಿ ಬಂಧಿಗಳು ಕೂಡಾ ಆತ್ಮಾವಲೋಕನ ಮಾಡಿಕೊಂಡು ಬದಲಾಗಿ, ಸದಾ ಸರ್ವದಾ ಸಕಾರಾತ್ಮಕ ಚಿಂತಕರಾಗಿ, ಆಗ ತಮಗೆ ಖಂಡಿತವಾಗಿ ಸಾಧನೆ ಸಾಧ್ಯವಿದೆ ಎಂದರು.
ಎಲ್ಲಾ ಕಡೆಗೂ ಗೆಲ್ಲಲೇ ಬೇಕೆಂದು ಹೊರಡಬೇಡಿ, ಬಹಳಷ್ಟು ಕಡೆಗೆ ಸೋತಾಗ ಸಿಗುವ ಆನಂದ, ಗೆದ್ದಾಗ ಸಿಗುವ ಆನಂದಕ್ಕಿಂತ ಹೆಚ್ಚಿನದಾಗಿರುತ್ತದೆ. ಪಕ್ಕದವರಲ್ಲಿ ಪರಮಾತ್ಮನ ಕಾಣಿ, ಪ್ರಪಂಚವೇ ಪರಮಾತ್ಮನಿಂದ ತುಂಬಿರುವಂತೆ ಮೂಡುತ್ತದೆ. ಸಿದ್ಧಾರ್ಥ ಬುದ್ಧನಾದದ್ದು ಹೊರಗಿನಿಂದ ಏನನ್ನೋ ಪಡೆದಿದ್ದರಿಂದಲ್ಲ. ಒಳಗಿನ ಅಹಂ, ದ್ವೇಷ, ಅಸೂಯೆ, ಹೊಟ್ಟೆಕಿಚ್ಚು, ಮದ, ಮತ್ಸರ, ಸೇಡು, ದುರಾಸೆಗಳ ಬಿಟ್ಟಿದ್ದರಿಂದ, ತಾವೂ ಅವನ್ನು ತೊರೆದು, ಕ್ಷಮೆ ಅತ್ಯಂತ ಸುಂದರವಾದ ದೈವ ಗುಣವೆಂಬುದನ್ನು ಸದಾ ನೆನಪಲ್ಲಿರಿಸಿಕೊಂಡು ಬದುಕನ್ನು ಬಂಗಾರವಾಗಿಸಿಕೊಳ್ಳಿ ಎಂದರು.
ಸಾಹಿತಿ ಡಾ.ಎಚ್.ಟಿ. ಶೈಲಜಾ ಮಾತನಾಡಿ, ಕಾಯಕವೇ ಕೈಲಾಸ ಎಂಬುದನ್ನು ಮರೆಯದಿರಿ, ಪ್ರಾಮಾಣಿಕವಾದ ಬದುಕನ್ನು ಕಟ್ಟಿಕೊಳ್ಳಿ, ಶರಣರು ಎಲ್ಲರಲ್ಲೂ ದೇವರ ಕಂಡರು, ದೇಹವನ್ನೇ ದೇವಾಲಯ ಮಾಡಿಕೊಂಡರು, ಕನ್ನಡದಲ್ಲೇ ದೇವರೊಂದಿಗೆ ವಚನಾನುಸಂಧಾನ ಮಾಡಿ, ಕಲ್ಯಾಣ ಕಟ್ಟಲು ಪ್ರಯತ್ನಿಸಿ ಶ್ಲಾಘನೀಯ ಕಾರ್ಯ ಮಾಡಿದರು, ಬಸವಣ್ಣನವರಂತೂ ಸಾಂಸ್ಕೃತಿಕ ನಾಯಕರಾಗಿ ಹೊರಹೊಮ್ಮಿ, ವಿಶ್ವ ವ್ಯಕ್ತಿತ್ವದಿಂದ ಕಂಗೊಳಿಸಿದರು, ಅವರನ್ನೇ ತಾವೂ ಮಾದರಿ ಮಾಡಿಕೊಂಡು, ಸಮಷ್ಟಿ ಹಿತ ಬಯಸುತ್ತ, ಹೊಸ ಬದುಕು, ಬಾಳುಗಳ ಕಟ್ಟಿಕೊಳ್ಳಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕದಳಿ ವೇದಿಕೆಯ ಅಧ್ಯಕ್ಷೆ ಶೋಭಾರಾಣಿ ಜೈಪ್ರಕಾಶ್ ಮಾತನಾಡಿ, ಶರಣರ ವಚನಗಳನ್ನು ಓದಿ ಅರ್ಥೈಸಿಕೊಳ್ಳಿ, ಪ್ರತಿಯೊಂದು ವಚನವೂ ತಮ್ಮಜೀವನವನ್ನು ಎತ್ತರಿಸುತ್ತವೆ ಹಾಗೂ ತಮ್ಮನ್ನು ಮಾನವೀಯವಾಗಿ ಬೆಳೆಸುತ್ತಾ ಹೋಗುತ್ತವೆ, ಆಗ ತಮ್ಮ ಬದುಕು ಮತ್ತು ಬಾಳುಗಳೆರಡೂ ಹಸನಾಗಿ, ಇತರರಿಗೆ ಮಾದರಿಯಾಗುತ್ತವೆ ಎಂದರು.
ರಂಗಭೂಮಿ ಕಲಾವಿದೆ ಶ್ರುತಿ ಹರೀಶ್, ಮಂಗಳಾ ಮುದ್ದುಮಾದಪ್ಪ, ಶೈಲಾ ಸ್ವಾಮಿ,ಪದ್ಮಾ ನಿರಂಜನ್ , ಕದಳಿ ವೇದಿಕೆಯ ಮಾಜಿ ಅಧ್ಯಕ್ಷೆ ಕಲ್ಯಾಣಿ ನಟರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.






























