ಸಂಜೆವಾಣಿ ವಾರ್ತೆ
ಸಂಡೂರು: ಅ:1: ಬಳ್ಳಾರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳು ಆಗಿವೆ, ಇತ್ತೀಚೆಗೆ ಮನುಷ್ಯ ಕ್ರೂರಿಯಾಗಿ ಬದುಕುತ್ತಿದ್ದಾನೆ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತ ಜಕಣಾಚಾರಿ ತಿಳಿಸಿದರು.
ಅವರು ತಾಲ್ಲೂಕಿನ ಚೋರನೂರು ಹೋಬಳಿಯಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಸಂಡೂರು, ಬಳ್ಳಾರಿ ಜಿಲ್ಲೆ, ಆರೋಗ್ಯ ಇಲಾಖೆ, ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯ ವಾಣಿ ಮತ್ತು ಗ್ರಾಮ ಪಂಚಾಯತಿ, ವಿವಿಧ ಭಾಗೀದಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಬಾಲ್ಯ ವಿವಾಹ ತಡೆ ಜಾಗೃತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ ಬಳ್ಳಾರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳುಪತ್ತೆಯಾಗಿದ್ದು ತಡೆಯಲು ಜಾಗೃತಿ ಮಾಡುತ್ತಿದ್ದೇವೆ ಅದರೂ ಮೂಢನಂಬಿಕೆ ಹೆಚ್ಚುತ್ತಿದೆ, ಮಕ್ಕಳ ಹಕ್ಕುಗಳ ಬಗ್ಗೆ, ಬಾಲ್ಯ ವಿವಾಹ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿ, ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು, ಜೊತೆಗೆ ಶಿಕ್ಷಣ ಇದ್ದರೆ ಮಾತ್ರ ಇಂತಹ ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ, ಬಾಲ ಕಾರ್ಮಿಕರು ಆಗದಂತೆ ತಡೆಗಟ್ಟಬಹುದು ಎಂದು ಹೇಳಿದರು.
ಸ್ಥಳೀಯ ಮುಖಂಡರಾದ ವೆಂಕಟೇಶ್ ಅವರು ಮಾತನಾಡ್ತಿ ಬೇಗ ಮದುವೆ ಆಗಿ ಮಕ್ಕಳಾದರೆ ಮಕ್ಕಳು ಸಹ ಅಂಗ ವೈಫಲ್ಯದಿಂದ ಕುಬ್ಜರಾಗಿ ಹುಟ್ಟುತ್ತಾರೆ , ಮಕ್ಕಳಿಗೆ ಜಾಗೃತಿ ಮೂಡಿಸಲು ಈ ಬಾರಿ ಸ್ವತಂತ್ರ ದಿನಾಚರಣೆಯ ಪ್ರಯುಕ್ತ ಶಾಲಾಕಾಲೇಜುಗಳಲ್ಲಿ ಬಾಲ್ಯವಿವಾಹದಿಂದ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಭಾಷಣ ಕಾರ್ಯಕ್ರಮವನ್ನು ಏರ್ಪಡಿಸುತ್ತೇವೆ ಎಂದು ಹೇಳಿದರು.
ವೈದ್ಯ ಅಧಿಕಾರಿಗಳಾದ ಡಾ|| ಅಕ್ಷಯ್ ಶಿವಪುರ ಇವರು ಮಕ್ಕಳೊಂದಿಗೆ ಸಂವಾದ ಮಾಡಿ, ಬಾಲ್ಯ ವಿವಾಹ, ಬಾಲ್ಯ ಗರ್ಭಿಣಿಯರ ಬಗ್ಗೆ, ಬಾಲ ಕಾರ್ಮಿಕರ ಬಗ್ಗೆ ಆಗುವ ದುಷ್ಪರಿಣಾಮಗಳನ್ನು ಮಾರ್ಮಿಕವಾಗಿ ತಿಸಿದರು. ಜಿಲ್ಲಾ ಮಕ್ಕಳ ಸಹಾಯವಾಣಿ, ಪೋಲಿಸ್‍ವಾಣಿ ಬಗ್ಗೆ ಜಿಲ್ಲಾ ಮಕ್ಕಳ ಸಹಾಯ ಅಧಿಕಾರಿಗಳಾದ ಆನಂದಪ್ಪ, ಹೊನ್ನುರಪ್ಪ, ಚನ್ನಬಸಪ್ಪ ಅವರು ಕಾನೂನು ಬಗ್ಗೆ ಅರಿವು ಮೂಡಿಸುತ್ತಾ ಮಕ್ಕಳ ಸಹಾಯವಾಣಿಯಾದ 1098, ಪೋಲಿಸ್ ಸಹಾಯವಾಣಿ 112, ಸಂಖ್ಯೆಗಳ ಬಳಕೆ ಬಗ್ಗೆ ವಿವರಿಸಿದರು. ಹಾಗೂ ಬಾಲ್ಯ ವಿವಾಹ ತಡೆಗಟ್ಟಲು ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.
ಎಸ್‍ಡಿಎಂಸಿ ಅಧ್ಯಕ್ಷರಾದ ಕರಿಬಸಪ್ಪ, ಪರಮೇಶ್ವರಪ್ಪ, ಶಿಕ್ಷಣ ಸಂಯೋಜಕರಾದ ಪಾಲಾಕ್ಷಪ್ಪ, ನೋಡಲ್ ಅಧಿಕಾರಿಗಳಾದ ಮಂಜುನಾಥ್ ಆದಿಮನೆ, ಪದವಿಪೂರ್ವ ಕಾಲೇಜು ಪ್ರಾಚಾರ್ಯರಾದ ಬಸವರಾಜ್, ಗ್ರಾ.ಪಂ, ಅಭಿವೃದ್ಧಿ ಅಧಿಕಾರಿಗಳಾದ ಕರಿಬಸವರಾಜ್, ಶಿಶು ಯೋಜನಾ ಅಧಿಕಾರಿಗಳಾದ ಶಾರದ ಶಿಂಧೆ, ಸಿಆರ್‍ಪಿ ರಮೇಶ್, ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಜನಪದ ಕಲಾವಿದ ಲೋಕೇಶ್ ಅವರು ವಿವಿಧ ಜಾಗೃತಿ ಗೀತೆಗಳನ್ನು ಹಾಡಿದರು, ರಮೇಶ್ ಅವರು ನಿರೂಪಿಸಿದರು. ಪ್ರೌಢಶಾಲಾ ಮುಖ್ಯ ಗುರುಗಳಾದ ಮಧು ಅವರು ವಂದಿಸಿದರು.


































