ಬಳ್ಳಾರಿ ಜಿಲ್ಲಾ ವಾಣಿಜ್ಯ ಸಂಸ್ಥೆಯಿಂದ ಸಾಧಕರಿಗೆ ಸನ್ಮಾನ

(ಸಂಜೆವಾಣಿ ವಾರ್ತೆ)

ಬಳ್ಳಾರಿ, ಡಿ. 28: ದೆಹಲಿಯ ಎಫ್ಐಸಿಸಿಐನ ಸುಸ್ಥಿರ ಕೃಷಿ – 2025ರ ಪ್ರಶಸ್ತಿಪುರಸ್ಕೃತ ಮಾತೃಭೂಮಿ ಸ್ಪೈಸಿ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕ ಬ್ರಹ್ಮಯ್ಯನಾಯ್ಡು ತಮ್ಮಿನೇನಿ ಮತ್ತು ಸಹ ಸಂಸ್ಥಾಪಕ ಶಿವನಗೌಡ ಅವರನ್ನು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ನಿನ್ನೆ ಸನ್ಮಾನಿಸಿ ಗೌರವಿಸಿದೆ.

ಸಂಸ್ಥೆಯ ಅಧ್ಯಕ್ಷ ಅವ್ವಾರು ಮಂಜುನಾಥ್, ಎಫ್ಐಸಿಸಿಐ ಗುರುತಿಸಿ – ಬಹುಮಾನ ನೀಡಿರುವುದರಿಂದ ಭವಿಷ್ಯದಲ್ಲಿ ಸುಸ್ಥಿರ ಕೃಷಿ, ಪರಿಸರ ಸ್ನೇಹಿ, ಆರೋಗ್ಯಕರ ಕೃಷಿ ಮತ್ತು ಸಾವಯವ ಕೃಷಿ ನಡೆಸಲು ಪ್ರೋತ್ಸಾಹ ನೀಡಿದಂತಾಗಿದೆಂದರು.

ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು, ಕೃಷಿಯಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಖ್ಯಾತಿಯನ್ನು ಸಾಧಿಸಿದೆ. ಈ ಹಿನ್ನಲೆಯಲ್ಲಿ ಸಾವಯವ ಕೃಷಿಯಲ್ಲೂ  ಜಿಲ್ಲೆಯು ಎಫ್ಐಸಿಸಿಐನಿಂದ ಬಹುಮಾನ ಪಡೆದಿರುವುದು ಶ್ಲಾಘನೀಯ ಎಂದರು.

ಸನ್ಮಾನಿತ ಬ್ರಹ್ಮಯ್ಯನಾಯ್ಡು ತಮ್ಮಿನೇನಿ ಮತ್ತು ಶಿವನಗೌಡ ಅವರು, ಕೃಷಿಯಲ್ಲಿ ಸಾಧನೆಗೆ ಸಾಕಷ್ಟು ಅವಕಾಶಗಳಿವೆ. ಸಾಧನೆ ಮಾಡುವ ಉತ್ಸಾಹಿಗಳಿಗೆ ಸೂಕ್ತ ಮಾರ್ಗದರ್ಶನ – ಪ್ರೋತ್ಸಾಹ ಈ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಸಿಗಲಿದೆ.  ಕ್ರಿಯಾಶೀಲರು – ಸೃಜನಶೀಲರಿಗೆ ಕೃಷಿ ಕ್ಷೇತ್ರ ಸಾಧನೆಗೆ ಪೂರಕವಾಗಿದೆ ಎಂದರು.

ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಎಸ್. ದೊಡ್ಡನಗೌಡ, ಉಪಾಧ್ಯಕ್ಷರುಗಳಾದ ಸೊಂತ ಗಿರಿಧರ್, ಪಿ. ಪಾಲಣ್ಣ, ಜಂಟಿ ಕಾರ್ಯದರ್ಶಿ ವಿ. ರಾಮಚಂದ್ರ, ಖಜಾಂಚಿ ನಾಗಳ್ಳಿ ರಮೇಶ್, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಉಪ ಸಮಿತಿಗಳ ಚೇರ್ಮನ್ ಗಳು, ವಿಶೇಷ ಆಹ್ವಾನಿತರು, ವಿಶೇಷ ಸಮನ್ವಯ ಸಮಿತಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.