
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.28: ರಾಷ್ಟ್ರೀಯ ಹೆದ್ದಾರಿ ಯೋಜನೆಯಡಿ ಆಂದ್ರ ಪ್ರದೇಶದ ಗುತ್ತಿ ಮತ್ತು ಕರ್ನಾಟಕದ ಅಂಕೋಲ ನಡುವಿನ ರಾಷ್ಟ್ರೀಯ ಹೆದ್ದಾರಿ 63 ಕ್ಕೆ ಬಳ್ಳಾರಿ ನಗರದ ಬಳಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿರ್ಮಿಸಿರುವ ಬೈ ಪಾಸ್ ರಸ್ತೆಯನ್ನು ಇಂದು ಲೋಕಸಭಾ ಸದಸ್ಯ ಇ.ತುಕರಾಂ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಿದರು.
ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದಬಳ್ಳಾರಿ ತಾಲೂಕಿನ. ವೇಣಿವೀರಾಪುರದಿಂದ ಗೋಡೆಹಾಳ್ ಕ್ರಾಸ್ ವರೆಗೆ ನಿರ್ಮಿಸಿರುವ 28.5 ಕಿ.ಮೀ ಉದ್ದದ ರಸ್ತೆ ಇದಾಗಿದೆ
ದಿನನಿತ್ಯ ಈ ರಸ್ತೆಯ ಮೂಲಕ ಸರಾಸರಿ ಎರೆಡು ಸಾವಿರಕ್ಕೂ. ಹೆಚ್ಚು ವಾಹನಗಳು ಸಂಚರಿಸುತ್ತಿವೆ. ಈ ಬೈ ಪಾಸ್ ರಸ್ತೆ ಮುಕ್ತವಾಗಿರುವುದರಿಂದ ಬಳ್ಳಾರಿ ನಗರದಲ್ಲಿ ಸಂಚರಿಸುತ್ತಿದ್ದ ವಾಹನಗಳ ದಟ್ಟಣೆ ಕಡಿಮೆ ಆಗಲಿದೆ.
ಈ ವೇಳೆ ಮಾತನಾಡಿದ ತುಕರಾಂ ಅವರು 2016 ನೇ ವರ್ಷದಲ್ಲಿ ಈ ರಸ್ತೆ ಕಾಮಗಾರಿ ಆರಂಭಗೊಂಡಿತ್ತು. ಹಲವು ಕಾರಣಗಳಿಂದ ನೆನೆಗುದಿಗೆ ಬಿದ್ದಿತ್ತು. ಇನ್ನು ಒಂದಿಷ್ಟು ತೋರಣಗಲ್ಲು ಬೈ ಪಾಸ್ , ಗಾದಿಗನೂರು, ಕುರೆಕುಪ್ಪ ಬಳಿ ಪ್ಲೈ ಓವರ್. ಕಾಮಗಾರಿಗಳು ಬಾಕಿ ಇದ್ದು ಇವು ಆದಷ್ಟು ಬೇಗ ಮುಗಿಯಲಿದೆಂದು ಹೇಳಿದರು.
ಇನ್ನು ಬಳ್ಳಾರಿಯ ಸುಧಾ ಕ್ರಾಸ್ ನಿಂದ ಬೈಪಾಸ್ ವರೆಗೆ ಚತುಷ್ಪತ ರಸ್ತೆ, ಮೋತಿ ರೈಲ್ವೇ ಬ್ರಿಡ್ಜ್ ಅಗಲೀಕರಣ, ಅನಂತಪುರಂ ರಸ್ತೆಯಿಂದ ಸಿರುಗಪ್ಪ ರಸ್ತೆಗೆ ಬೈಪಾಸ್ ರಸ್ತೆ ಸಹ ನಿರ್ಮಾಣ ಆಗಲಿದೆಂದು ತಿಳಿಸಿದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗುತ್ತ ಎಂಬ ಪ್ರಶ್ನೆಗರೆ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ ತುಕರಾಂ ಅವರು ಕಾಂಗ್ರೆಸ್ ಆಡಳಿತವೇ ಇರಲಿದೆ. ಮುಂದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನಮಗಮೊಳಗಿನ ಆಂತರಿಕ ವಿಷಯಗಳಿಗೆ ಹೈ ಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆಂದರು.
ಈ ವೇಳೆ ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಮೇಯರ್ ಪಿ.ಗಾದೆಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎಸ್.ಎಲ್.ಸ್ವಾಮಿ, ಮಾಜಿ ಮೇಯರ್ ಮುಲ್ಲಂಗಿ ನಂದೀಶ್, ಪಾಲಿಕೆ ಸದಸ್ಯರಾದ ವಿ.ಕುಬೇರ, ಆಸಿಫ್ ಮೊದಲಾದವರು ಇದ್ದರು.






















