(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ,ಅ.08: ನಗರದಲ್ಲಿ ಮಹರ್ಷಿ ವಾಲ್ಮೀಕಿ ಶಾಖಾ ಮಠ ಸ್ಥಾಪಿಸಲಾಗುವುದು. ಇದಕ್ಕಾಗಿ ವೈಯಕ್ತಿಕವಾಗಿ ಎರಡು ಎಕರೆ ಭೂಮಿ ನೀಡುತ್ತೇನೆ ಎಂದು ನಗರ ಶಾಸಕ ಭರತ್ ರೆಡ್ಡಿ ಹೇಳಿದ್ದಾರೆ.
ಅವರು ನಿನ್ನೆ ನಗರದ ವಾಲ್ಮೀಕಿ ಭವನದಲ್ಲಿ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.ನಗರದ ವಾಲ್ಮೀಕಿ ವೃತ್ತ(ಎಸ್.ಪಿ ವೃತ್ತ)ದಲ್ಲಿ 1.10 ಕೋಟಿ ರೂ. ವೆಚ್ಚದಲ್ಲಿ ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿ ಪ್ರತಿಷ್ಠಾಪಿಸಲಾಗುವುದು ಹಾಗೂ ವೃತ್ತವನ್ನು ಅಭಿವೃದ್ಧಿಪಡಿಸಲಾಗುವುದು. ಖ್ಯಾತ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ಅವರ ಹಸ್ತ ವಿನ್ಯಾಸದಲ್ಲಿ ಪುತ್ಥಳಿಯು ರಚನೆಯಾಗುತ್ತಿದೆ. ಶುಭದಿನದಂದು ರಾಜ್ಯದ ವಿವಿಧ ಭಾಗಗಳಿಂದ ಸಮುದಾಯದ ಜನರನ್ನು ಒಗ್ಗೂಡಿಸಿ ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದಿದ್ದಾರೆ.
ಡಾ.ಬಾಬು ಜಗಜೀವನ್‌ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಅವರು ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ರಚಿಸಿದಂತಹ ರಾಮಾಯಣ ಕೃತಿಯು ದೇಶದಲ್ಲಿಯೇ ಸರ್ವಶ್ರೇಷ್ಠ ಗ್ರಂಥವಾಗಿದೆ. ಒಟ್ಟು 24,000 ಶ್ಲೋಕಗಳನ್ನು ಕಾಣಬಹುದಾಗಿದೆ ಎಂದರು.
ರಾಜ್ಯ ಸರ್ಕಾರ ಜಾರಿತಂದಿರುವ ಪಂಚ ಗ್ಯಾರಂಟಿ ಯೋಜನೆಗಳಿಂದ ಸಬಲೀಕರಣ ಹೊಂದುತ್ತಿದ್ದೇವೆ. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಸಮುದಾಯ ಅಭಿವೃದ್ಧಿ ಹೊಂದಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಕರೆ ನೀಡಿದರು.
ಮೇಯರ್ ಮುಲ್ಲಂಗಿ ನಂದೀಶ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರ ಮಹಾಕಾವ್ಯವಾದ ರಾಮಾಯಣದ ಮೂಲಕ ಧರ್ಮಕ್ಕೆ ನೀಡಿದ ಅಪ್ರತಿಮ ಕೊಡುಗೆಗಾಗಿ ಅವರನ್ನು ಪೂಜಿಸಲಾಗುತ್ತದೆ. ರಾಮಾಯಣ ಕೃತಿಯಲ್ಲಿನ ಪಾತ್ರಧಾರಿಗಳ ಉತ್ತಮ ಅಂಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಿದೆ ಎಂದರು.
ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಮಾತನಾಡಿ, ಸತ್ಯವು ಸದಾಚಾರ ಮತ್ತು ಧರ್ಮದ ಅಡಿಪಾಯ. ಧರ್ಮ ಎಂದರೆ ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯನ್ನು ಗೌರವಿಸುವುದು ಎಂದು ತೋರ್ಪಡಿಸುತ್ತದೆ. ಸತ್ಯವಂತ ಜೀವನವು ಶಾಂತಿ ಮತ್ತು ದೈವಿಕ ಅನುಗ್ರಹಕ್ಕೆ ಕಾರಣವಾಗುತ್ತದೆ. ಹಾಗಾಗಿ ಮಹರ್ಷಿ ವಾಲ್ಮೀಕಿಯವರ ಜೀವನದ ಆದರ್ಶ ತತ್ವಗಳನ್ನು ಪಾಲಿಸಬೇಕು ಎಂದರು.
ಪ್ರಾಧ್ಯಾಪಕ ಡಾ.ವೀರಭದ್ರಪ್ಪ ತಂಬ್ರಳ್ಳಿ ವಿಶೇಷ ಉಪನ್ಯಾಸ ನೀಡಿದರು, ಕಾರ್ಯಕ್ರಮದಲ್ಲಿ 2024-25 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿಭಾಗದಲ್ಲಿ ಅತ್ಯುತ್ತಮ ಅಂಕಗಳಿಸಿದ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕೃಷಿ, ತೋಟಗಾರಿಕೆ ಕ್ಷೇತ್ರದಲ್ಲಿ ಸಾಧನೆಗೈದ ರೈತರನ್ನು ಸನ್ಮಾನಿಸಲಾಯಿತು. ಕಲೆ, ಸಾಹಿತ್ಯ-ಸಂಗೀತ ಕ್ಷೇತ್ರದಲ್ಲಿನ ಪರಿಣಿತರನ್ನು ಅಭಿನಂದಿಸಲಾಯಿತು
…

























