Home ಜಿಲ್ಲೆ ಬಳ್ಳಾರಿಯಲ್ಲಿ ಪೊಲೀಸ್ ದಾಳಿ 4 ಸಾವಿರ ಚೀಲ ಯೂರಿಯಾ ಅಕ್ರಮ ಸಂಗ್ರಹ ಪತ್ತೆ

ಬಳ್ಳಾರಿಯಲ್ಲಿ ಪೊಲೀಸ್ ದಾಳಿ 4 ಸಾವಿರ ಚೀಲ ಯೂರಿಯಾ ಅಕ್ರಮ ಸಂಗ್ರಹ ಪತ್ತೆ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಫೆ.07: ಜಿಲ್ಲೆಯಲ್ಲಿ ಈಗ ಒಂದಲ್ಲ ಒಂದು ಅಕ್ರಮ ಸಂಗ್ರಹದ ಪ್ರಕರಣಗಳು ಬೆಳಕಿಗೆ ಬರತೊಡಗಿವೆ.   ಅಕ್ರಮ ಅದಿರು ಸ್ಟಾಕ್ ಮಾಡಿದ್ದಾಯ್ತು. , ಮರಳು, ಗ್ರ್ಯಾವೆಲ್ ಸ್ಟಾಕ್ ಮಾಡಿದ್ದಾಯ್ತ, ಪಡಿತರ ಅಕ್ಕಿಯೂ ಸಹ. ಈಗ 50 ಕಿಲೋ ತೂಕದ ರಸಾಯನಿಕ ಗೊಬ್ಬರದ 4 ಸಾವಿರದ 65  ಚೀಲ  ಯೂರಿಯಾವನ್ನು    ಅಕ್ರಮವಾಗಿ ಸಂಗ್ರಹ  ಮಾಡಿರುವುದು  ಪತ್ತೆಯಾಗಿದೆ.

ಕಳೆದ ವರ್ಷ ಮುಂಗಾರಿನಲ್ಲಿ ರೈತರು ತಮ್ಮ ಬೆಳೆಗಳಿಗಾಗಿ ಯೂರಿಯಾ, ಯೂರಿಯಾ ಎಂದು ಬಡಿದುಕೊಂಡು. ಮಾರುಕಟ್ಟೆಯಲ್ಲಿ ಅಗತ್ಯತೆಗೆ ತಕ್ಕಂತೆ ದೊರೆಯದಾದಾಗ ಅಕ್ರಮ ಕೂಟ 265 ರೂ ಗಳ ಯೂರಿಯಾವನ್ನು 500 ರೂಗಳಂತೆ ಮಾರಾಟ ಮಾಡಿತು. ಇದರಿಂದ ರೈತರು ಸಂಕಷ್ಟಕ್ಕೆ ಈಡಾದರೆ, ಅಕ್ರಮ ಕೂಟ ಲಾಭ ಮಾಡಿಕೊಂಡಿತು.

ಇದರ ಸವಿ ಕಂಡ ಅಕ್ರಮ ಕೂಟ, ಸದ್ಯ ಮಾರುಕಟ್ಟೆಯಲ್ಲಿ ಈ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಇಲ್ಲ. ಆದರೆ ಮುಂದಿನ ವರ್ಷದ ಮುಂಗಾರಿಗೆ ಈಗಲೇ ಅಕ್ರಮವಾಗಿ ಯೂರಿಯಾ ಸಂಗ್ರಹ ಮಾಡುವ ದಂಧೆ ಆರಂಭಗೊಂಡಿದೆ. ರೈತರಿಗೆ ಸೇರಬೇಕಾದ ಯೂರಿಯಾ ಕಾಳ ಸಂತೆಯಲ್ಲಿ ಮಾರಾಟಕ್ಕೆ ಸಜ್ಜಾಗುತ್ತಿತ್ತು.

ಬಳ್ಳಾರಿ ನಗರದ  ಹೊರವಲಯದ ಮುಂಡ್ರಿಗಿ ಇಂಡಸ್ಟ್ರಿಯಲ್ ಎರಿಯಾದಲ್ಲಿ ಭಾರಿ ಪ್ರಮಾಣದಲ್ಲಿ  ಯೂರಿಯಾ ರಸಗೊಬ್ಬರ ಸಂಗ್ರಹ ಮಾಡಿದ್ದು ನಿನ್ನೆ  ಸಂಜೆ ಬೆಳಕಿಗೆ ಬಂದಿದೆ. ಎಪಿಎಂಸಿ ಠಾಣೆಯ ಇನ್ಸ್ ಪೆಕ್ಟರ್ ಮಹಮ್ಮದ್ ರಫಿ ಮತ್ತವರ ಸಿಬ್ಬಂದಿ ದಾಳಿ ಮಾಡಿದೆ. ನಂತರ ಇಲ್ಲಿಗೆ ಕೃಷಿ ಅಧಿಕಾರಿಗಳು ಸಹ ಬಂದಿದ್ದಾರೆ.

ಸ್ಟಾಕ್ ಮಾಡಿದ್ದಾರು:

ರೈಲ್ವೇ ವ್ಯಾಗಿನ್ ಗಳಿಗೆ ಬಂದ ಸ್ಟಾಕ್ ನ್ನು ನೇರವಾಗಿ ಇಲ್ಲಿಗೆ  ವಿವಿಧ ಕಂಪನಿಗಳ ಯೂರಿಯಾ ಗೊಬ್ಬರವನ್ನು  ತಂದು   ಅಕ್ರಮವಾಗಿ ಸ್ಟಾಕ್ ಮಾಡಿದ್ದರು. ಬಳ್ಳಾರಿಯ ಹುಸೇನ್ ನಗರ್ ಎಡ್ವಿನ್, ಸಾಕೀರ್ ಮತ್ತು ರಮೇಶ ಎಂಬುವವರು.ರಮೇಶ ರಸಗೊಬ್ಬರದ ಡೀಲರ್ ಆಗಿದ್ದಾನಂತೆ. ಉಳಿದವರು ಈ ದಂದೆಯ ಪಾಲುದಾರರು.

ಸಧ್ಯ ಪೊಲೀಸರು ಗೋಡೌನನ್ನು ಬಾಡಿಗೆಗೆ ಪಡೆದಿದ್ದ ಎಡ್ವಿನ್ ಎನ್ನುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.  ಎಪಿಎಂಸಿ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.