ಬಳ್ಳಾರಿಯಲ್ಲಿ ಜ.17ರಂದು ಬಿಜೆಪಿ ಪ್ರತಿಭಟನೆ

ಬೆಂಗಳೂರು, ಜ. 13- ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಇದೇ ತಿಂಗಳ 17 ರಂದು ಬಳ್ಳಾರಿಯಲ್ಲಿ ಬಿಜೆಪಿ ಬೃಹತ್ ಹೋರಾಟ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.


ಬೆಂಗಳೂರಿನಲ್ಲಿಂದು ಬಿಜೆಪಿ ಕಚೇರಿಯಲ್ಲಿ ಸಂಸದರಾದ ಜಗದೀಶ್‍ಶೆಟ್ಟರ್ ಹಾಗೂ ಗೋವಿಂದಕಾರಜೋಳ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಗುಂಡಾವರ್ತನೆ ತೋರಿದ್ದಾರೆ. ಭೀತಿಯ ವಾತಾವರಣ ಸೃಷ್ಟಿಸಲಾಗಿದೆ. ಯಲ್ಲಾಪುರದಲ್ಲಿ ದಲಿತ ಹೆಣ್ಣು ಮಗಳ ಬರ್ಬರ ಹತ್ಯೆಯಾಗಿದೆ. ಯಾವ ಸಚಿವರು ಭೇಟಿ ನೀಡಿಲ್ಲ. ನಾವು ಅಲ್ಲಿಗೆ ಭೇಟಿ ನೀಡಿದ್ದೇವು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ದೂರಿದರು.


ಬಳ್ಳಾರಿಯಲ್ಲಿ ಮೃತಪಟ್ಟ ರಾಜಶೇಖರ್ ಕುಟುಂಬಕ್ಕೆ ಸಚಿವ ಜಮೀರ್ ಅಹಮದ್ ಖಾನ್ 25 ಲಕ್ಷ ರೂ.ಕೊಟ್ಟರು. ಯಲ್ಲಾಪುರದಲ್ಲಿ ದಲಿತ ಕುಟುಂಬಕ್ಕೆ ಪರಿಹಾರ ಕೊಡದಷ್ಟು ದಾರಿದ್ರ ಸರ್ಕಾರಕ್ಕೆ ಬಂದಿದೆಯೇ ಎಂದು ಪ್ರಶ್ನಿಸಿದ ಅವರು, ಈ ಕುಟುಂಬಕ್ಕೆ 50 ಲಕ್ಷ ರೂ.ಪರಿಹಾರ ನೀಡುವಂತೆ ಆಗ್ರಹಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಗೃಹ ಸಚಿವರು ಯಾವುದಕ್ಕೂ ಚಕಾರ ಎತ್ತುತ್ತಿಲ್ಲ. ಚಕಾರದ ವೈಫಲ್ಯ, ಕಾನೂನು ಸುವ್ಯವಸ್ಥೆ ಹದಗೆಟ್ಟ ವಿಚಾರ ಇಟ್ಟುಕೊಂಡು ಬಳ್ಳಾರಿಯಲ್ಲಿ ಈ ತಿಂಗಳ 17 ರಂದು ಬೃಹತ್ ಹೋರಾಟ ಹಮ್ಮಿಕೊಂಡಿದ್ದೇವೆ ಎಂದರು. ಬಳ್ಳಾರಿ ಗಲಭೆಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಪಾದಯಾತ್ರೆ ನಡೆಸುವ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ನಮಗೂ ಪಾದಯಾತ್ರೆ ಮಾಡುವ ಅಪೇಕ್ಷೆ ಇದೆ ಎಂದರು.


ಬಿಜೆಯ ಜನಾರ್ದನರೆಡ್ಡಿ ಹಾಗೂ ಶ್ರೀರಾಮುಲು ರವರು ಪಾದಯಾತ್ರೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನು ಹೈಕಮಾಂಡ್ ಗಮನಕ್ಕೆ ತಂದು ಪಾದಯಾತ್ರೆ ನಡೆಸುವ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ ಎಂದರು. ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದೆ. ರಾಜ್ಯವನ್ನು ಕುಡುಕರ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಅಬಕಾರಿ ಆದಾಯ ಸಂಗ್ರಹ ಗುರಿಯನ್ನು ಹೆಚ್ಚಿಸಲಾಗಿದೆ. ಇಸ್ಪೀಟ್, ಮಟ್ಕಾ ಹಾವಳಿಯೂ ಮಿತಿ ಮೀರಿದೆ. ಭ್ರಷ್ಟಾಚಾರವೂ ಹೆಚ್ಚಾಗಿದೆ. ಸರ್ಕಾರದ ಆಡಳಿತ ವೈಖರಿ ಸರಿ ಇಲ್ಲ. ಜನಪರ ಯೋಜನೆ ಇಲ್ಲ. ಅಭಿವೃದ್ಧಿಯೂ ಇಲ್ಲ. ಇವೆಲ್ಲ ವಿಚಾರಗಳನ್ನು ಇಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಹಂತ ಹಂತವಾಗಿ ಹೋರಾಟ ಮಾಡುತ್ತೇವೆ. ಬಳ್ಳಾರಿ ನಂತರ ಬಾಗಲಕೋಟೆಯಲ್ಲಿ ರೈತಪರ ವಿಚಾರಗಳನ್ನಿಟ್ಟುಕೊಂಡು ಹೋರಾಟ ನಡೆಸುತ್ತೇವೆ. ದಿನಾಂಕ ಇನ್ನು ಅಂತಿಮಗೊಂಡಿಲ್ಲ ಎಂದರು.
ಕಳೆದ 5 ರಿಂದ ವಿವಿಧ ಜಿಲ್ಲೆಗಳ ಸಂಘಟನಾತ್ಮಕ ಸರಣಿ ಸಭೆಗಳನ್ನು ನಡೆಸಿ ಆ ಜಿಲ್ಲೆಗಳ ರಾಜಕೀಯ ಸ್ಥಿತಿಗತಿ, ಸ್ಥಳೀಯ ಸಂಸ್ಥೆಗಳ ಚುನಾವಣಾ ತಯಾರಿ, ಪಕ್ಷ ಸಂಘಟನೆ ಬಗ್ಗೆ ಚರ್ಚೆನಡೆಸಿದ್ದೇವೆ. ಕೋರ್ ಕಮಿಟಿ ಸಭೆಯಲ್ಲೂ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುವ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ ಎಂದು ವಿಜಯೇಂದ್ರ ಹೇಳಿದರು.


ಬೆಂಗಳೂರಿನ ಕೋಗಿಲು ಲೇಔಟ್‍ನಲ್ಲಿ ಅಕ್ರಮ ವಲಸಿಗರಿಗೆ ಯಾವುದೇ ಕಾರಣಕ್ಕೂ ಮನೆ ನೀಡಬಾರದು .
ತುಮಕೂರಿನ ಒಳಾಂಗಣ ಕ್ರೀಡಾಂಗಣಕ್ಕೆ ಮಹಾತ್ಮಗಾಂಧಿ ಹೆಸರು ಬದಲು ಸಚಿವ ಡಾ. ಜಿ.ಪರಮೇಶ್ವರ್ ಹೆಸರಿಟ್ಟಿರುವ ಬಗ್ಗೆ ರಾಹುಲ್‍ಗಾಂಧಿ, ಸಿದ್ಧರಾಮಯ್ಯ ಉತ್ತರಿಸಲಿ. ಮಹಾತ್ಮಗಾಂಧಿ ವಿಚಾರದಲ್ಲಿ ಕಾಂಗ್ರೆಸ್ ಮೊಸಳೆ ಕಣ್ಣೀರು ಹಾಕುತ್ತಿದೆ ಎಂದು ದೂರಿದರು.


ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಇಂದು ರಾಹುಲ್‍ಗಾಂಧಿ ಅವರನ್ನು ಭೇಟಿ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಹುಲ್‍ಗಾಂಧಿ ಅವರಿಂದ ನಾವೇನೂ ನಿರೀಕ್ಷೆ ಮಾಡಿಲ್ಲ ನಾವು ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡುತ್ತೇವೆ ರಾಹುಲ್‍ನಲ್ಲ ಎಂದರು. ಬಿಜೆಪಿಯ ವಿಧಾನಪರಿಷತ್ ಸದಸ್ಯ ಎ.ಎಸ್.ನವೀನ್ ಅವರು ಇತ್ತೀಚಿಗೆ ಜೈಲಿನಲ್ಲಿಂದ ಬಿಡುಗಡೆಯಾದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅವರನ್ನು ಭೇಟಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ನವೀನ್ ಅವರು ವೀರೇಂದ್ರ ಪಪ್ಪಿ ಅವರನ್ನು ಭೇಟಿ ಮಾಡಿದ್ದು ಸರಿಯಲ್ಲ ಈ ಬಗ್ಗೆ ನಾನು ಅವರಿಂದ ವಿವರಣೆ ಪಡೆಯುತ್ತೇನೆ ಎಂದು ಹೇಳಿದರು.