
ಕುಂದಾಪುರ: ಎರಡು ಟಿಪ್ಪರ್ ಲಾರಿಗಳ ನಡುವೆ ಸಂಭವಿಸಿದ ಅಪಘಾತದ ಪರಿಣಾಮ ನಿಯಂತ್ರಣ ತಪ್ಪಿದ ಟಿಪ್ಪರ್ ಸ್ಕೂಟರ್ಗೆ ಡಿಕ್ಕಿ ಹೊಡೆದು ಇಬ್ಬರು ಕಾಲೇಜು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಅ.೩೦ರಂದು ಬೆಳಿಗ್ಗೆ ೮.೪೫ರ ಸುಮಾರಿಗೆ ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದ ಬಳಿ ರಾಜ್ಯ ಹೆದ್ದಾರಿ ೫೨ರಲ್ಲಿ ನಡೆದಿದೆ.
ಗಾಯಗೊಂಡ ವಿದ್ಯಾರ್ಥಿಗಳನ್ನು ಟಿ.ಕೆ. ಮೊಹಮ್ಮದ್ ಶಯಾನ್ ಹಾಗೂ ಮೊಹಮ್ಮದ್ ರಯಾನ್ ಎಂದು ಗುರುತಿಸಲಾಗಿದೆ. ಇವರನ್ನು ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಂದಾಪುರ ಕಡೆಯಿಂದ ಎರಡು ಟಿಪ್ಪರ್ ಲಾರಿಗಳು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಿಸುತ್ತಿದ್ದವು ಎನ್ನಲಾಗಿದೆ. ಈ ವೇಳೆ ಎದುರಿನಿಂದ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಸನ್ನು ಕಂಡು ಮುಂದೆ ಸಾಗುತ್ತಿದ್ದ ಏಐ-೫೮-ಘಿ-೮೩೪೭ ನೋಂದಣಿ ಸಂಖ್ಯೆಯ ಟಿಪ್ಪರ್ ಚಾಲಕ ವೇಗ ಕಡಿಮೆ ಮಾಡಿದ್ದಾನೆ. ಆಗ ಹಿಂದಿನಿಂದ ಬರುತ್ತಿದ್ದ ಏಂ-೧೯-ಂಃ-೩೦೧೫ ನೋಂದಣಿ ಸಂಖ್ಯೆಯ ಟಿಪ್ಪರ್ ಲಾರಿ ಅತಿವೇಗವಾಗಿ ಬಂದು ಮುಂದಿನ ಲಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ ರಸ್ತೆಯ ಬಲಭಾಗಕ್ಕೆ ಚಲಿಸಿದ ಟಿಪ್ಪರ್, ಕಂಡ್ಲೂರಿನಿಂದ ಬಸ್ರೂರು ಕಡೆಗೆ ಕಾಲೇಜಿಗೆ ತೆರಳುತ್ತಿದ್ದ ಏಂ-೨೦-ಊಅ-೮೦೭೫ ನೋಂದಣಿ ಸಂಖ್ಯೆಯ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ ಎಂದು ದೂರಲಾಗಿದೆ.
ಅಪಘಾತಕ್ಕೆ ಕಾರಣವಾದ ಟಿಪ್ಪರ್ನಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಕೋಜೆ ಮಣ್ಣನ್ನು ತುಂಬಿಸಿಕೊಂಡು ಸಾಗಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ೬೧/೨೦೨೬ರ ಅಡಿಯಲ್ಲಿ ಬಿಎನ್ಎಸ್ನ ಕಲಂ ೧೧೦, ೩೦೩(೨), ೨೩೮ ಜೊತೆಗೆ ೩(೫), ಎಂಎಂಆರ್ಡಿ ಕಾಯ್ದೆಯ ಕಲಂ ೪(೧)(ಎ), ೨೧(೪) ಹಾಗೂ ಮೋಟಾರು ವಾಹನ ಕಾಯ್ದೆಯ ಕಲಂ ೧೩೪(ಎ) ಮತ್ತು (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಟಿಪ್ಪರ್ ಚಾಲಕರಾದ ನಾಗರಾಜ್, ರತ್ವೀಜ್ ಹಾಗೂ ಕೋಜೆ ಮಣ್ಣು ತೆಗೆದ ಸ್ಥಳದ ಮಾಲಕ ಅಜಿತ್ ಶೆಟ್ಟಿ ಅವರನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ.
ಪೇತ್ರಿಯಲ್ಲೂ ಅಕ್ರಮ ಕೋಜೆ ಮಣ್ಣು ಸಾಗಾಟ ಪತ್ತೆ
ಕೆಲವು ದಿನಗಳ ಹಿಂದೆಯಷ್ಟೇ ಬ್ರಹ್ಮಾವರ ತಾಲೂಕಿನ ಪೇತ್ರಿ ಎಂಬಲ್ಲಿ ಅಕ್ರಮವಾಗಿ ಕೋಜೆ ಮಣ್ಣು ತೆಗೆದು ಸಾಗಾಟ ಮಾಡುತ್ತಿದ್ದ ಬಗ್ಗೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದರು. ಇದೀಗ ಬಳ್ಕೂರಿನಲ್ಲೂ ಅಕ್ರಮ ಮಣ್ಣು ಸಾಗಾಟದ ವೇಳೆ ಅಪಘಾತ ಸಂಭವಿಸಿರುವುದು ಗಮನ ಸೆಳೆದಿದೆ.
























