ಬಳಾರಿ ವಿಎಸ್ ಕೆ ವಿವಿಯ13 ನೇ ಘಟಿಕೋತ್ಸವ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.04: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ  ವಿವಿಯ 13 ನೇ ಘಟಿಕೋತ್ಸವ ಇಂದು ವಿವಿ ಆವರಣದ ಬಯಲು ರಂಗಮಂದಿರದಲ್ಲಿ ನಡೆಯಿತು. ಉದ್ಯಮಿ   ಇರ್ಫಾನ್ ರಜಾಕ್  ಲೇಖಕಿ ವಸುಂದರ ಭೂಪತಿ,   ಗಣಿ ಉದ್ಯಮಿ  ಬಾವಿಹಳ್ಳಿ ನಾಗನಗೌಡರಿಗೆ  ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯ್ತು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ರಾಜರ ಆಡಳಿತದಲ್ಲಿ ಬಳಸುತ್ತಿದ್ದ ಪೇಟಗಳನ್ನು ರಾಜ್ಯಪಾಲರು, ಕುಲಪತಿಗಳಾದಿಯಾಗಿ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದವರು ಘಟಿಕೋತ್ಸವ ಮೆರವಣಿಗೆಯಲ್ಲಿ ವೇದಿಕೆಗೆ ಸಾಗಿಬಂದರು.
ರಾಜ್ಯಪಾಲ ಥಾವರಚಂದ್ ಗೆಪ್ಲೋಟ್ ಅವರು ಘಟಿಕೋತ್ಸವದ ಅಧ್ಯಕ್ಷತೆವಹಿಸಿ ಘಟಿಕೋತ್ಸವದ ಉದ್ಘಾಟನೆ ಘೋಷಣೆ ಮಾಡಿದ ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್ ಮಾತನಾಡಿ, ಭಾರತ ಇಂದಿನ ದಿನದಲ್ಲಿ ವಿಶ್ವ ಮಟ್ಟದಲ್ಲು ಸಶಕ್ತ ದೇಶವಾಗಿ ಹೊರಹೊಮ್ಮುತ್ತಿದೆ.ಚಂದ್ರಯಾನದಿಂದ ಎಐ ವರೆಗೆ ತಂತ್ರಜ್ಞಾನದಲ್ಲಿ ಮುಂದುವರೆದಿದೆ.
ವಿಕಸಿತ, ಆತ್ಮ‌ನಿರ್ಭಾರ ಭಾರತದ ಕನಸು ನನಸು ಮಾಡಲು ನೀವೆಲ್ಲ ಉದ್ಯೋಗ ಹುಡುಕುವ ಬದಲಿಗೆ ಉದ್ಯೋಗ ಸೃಷ್ಟಿಸುವವರಾಗುವ ನಿಟ್ಟಿನಲ್ಲಿ ಪ್ರಯತ್ನಿಸಿದರೆ ಯಶಸ್ಸು ದೊರೆಯುತ್ತದೆ. ವಿವಿಯನ್ನು ಸ್ವಚ್ಚವಾಗಿಡಲು ಸ್ವಚ್ಚತಾ ಅಭಿಯಾನ ಕೈಗೊಳ್ಳಿ ಎಂದ ಅವರು ಸರ್ವೇಪಲ್ಲಿ ರಾಧಕೃಷ್ಣ ಅವರು ಹೇಳಿದಂತೆ ಸಮೃದ್ಧ ದೇಶ ನಿರ್ಮಾಣ ಶಿಕ್ಷಣದಿಂದಲೇ ಸಾಧ್ಯ ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ವಿವಿ ಕುಲಪತಿ ಪ್ರೊ. ಮುನಿರಾಜು ವಿಶ್ವವಿದ್ಯಾಲಯವು 16ನೇ ವರ್ಷಕ್ಕೆ ಪ್ರವೇಶಿಸುತ್ತಿರುವ ಈ ಸಮಯದಲ್ಲಿ ಈ ವರ್ಷ ಹೊಸ ಉದ್ಯೋಗಮುಖಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದೇವೆ ಬಿಸಿಎ (ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ, ಡೇಟಾ ಸೈನ್ಸ್), ಬಿಎಸ್‌ಸಿ (ಅಹಾರ ತಂತ್ರಜ್ಞಾನ), ಬಿಕಾಂ, ಬಿಬಿಎ ಮತ್ತು ಎಂಬಿಎ (ಫಿನ್‌ಟೆಕ್, ಲಾಜಿಸ್ಟಿಕ್ಸ್, ಬಿಸಿನೆಸ್ ಅನಾಲಿಟಿಕ್ಸ್). ಸ್ನಾತಕೋತ್ತರ ಹಂತದಲ್ಲಿ ಫೋರೆನ್ಸಿಕ್ ಸೈನ್ಸ್ ಮತ್ತು ಮೆಡಿಕಲ್‌ ಫಿಸಿಕ್ಸ್‌ನಲ್ಲಿ ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸಿದ್ದೇವೆ.
ವಿವಿಯ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ, ಜಾಗತಿಕ ಶ್ರೇಯಾಂಕಗಳಲ್ಲಿ ಗುರುತಿಸಲ್ಪಟ್ಟಿದ್ದಾರೆ. ಮಲ್ಟಿಡಿಸಿಪ್ಲಿನರಿ ಅಡ್ವಾನ್ಸ್ ರಿಸರ್ಚ್ ಫೆಸಿಲಿಟಿ (CEMARF) ಮೂಲಕ 25 ಕ್ಕೂ ಹೆಚ್ಚು ಪೇಟೆಂಟ್‌ಗಳು, 2000 ಕ್ಕೂ ಹೆಚ್ಚು ಜರ್ನಲ್ ಲೇಖನಗಳು, 250 ಗ್ರಂಥಗಳು ಮತ್ತು 400ಕ್ಕೂ ಹೆಚ್ಚು ಸಮ್ಮೇಳನ ಪ್ರಬಂಧಗಳು ಪ್ರಕಟವಾಗಿವೆ. ನಮ್ಮ ವಿಶ್ವವಿದ್ಯಾಲಯದ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತಮ ಸಂಶೋಧನಾ ಪೇಪರ್ ಪ್ರಶಸ್ತಿಗಳನ್ನು ಪಡೆದಿದ್ದಾರೆಂದರು.
ವಿಶ್ವವಿದ್ಯಾಲಯದ ವಿದ್ಯಾರ್ಥಿ ಆದಿತ್ಯ 2024 “ಖೇಲೋ ಇಂಡಿಯಾ” ಕ್ರೀಡಾಕೂಟದಲ್ಲಿ ಕುಸ್ತಿ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. 2025ರ ಖೇಲೋ ಇಂಡಿಯಾ ಗೇಮ್ ಗೆ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಹೊಸ ಕಟ್ಟಡಗಳು, ವಸತಿ ನಿಲಯ ವಿಸ್ತರಣೆ, ಅಂತರಾಷ್ಟ್ರೀಯ ಕ್ರೀಡಾ ಅಕಾಡೆಮಿ, ಕೇಂದ್ರ ಸೌರ ಅಡುಗೆಮನೆ ಮುಂತಾದ ಯೋಜನೆಗಳನ್ನು ಹಾಕಿಕೊಂಡಿದೆ. ಪ್ರಗತಿಯಲ್ಲಿರುವ ಕಾಮಗಾರಿಗಳಲ್ಲಿ ಹೊಸ ಕಂಪ್ಯೂಟೇಷನಲ್ ಕಟ್ಟಡ, ವ್ಯವಹಾರ ಅಧ್ಯಯನ ಕಟ್ಟಡದ ಮೊದಲ ಮಹಾಡಿ ನಿರ್ಮಾಣ, ಬಯಲು ರಂಗಮಂದಿರದ ನವೀಕರಣ, ರಸ್ತೆ ಸುಧಾರಣೆ ಹಾಗೂ ವಸತಿ ನಿಲಯಗಳ ವಿಸ್ತರಣೆ ಒಳಗೊಂಡಿದೆಂದು ತಿಳಿಸಿದರು.
ವಿಶ್ವವಿದ್ಯಾಲಯವು ಎಲ್ಲಾ ವಿಭಾಗಗಳಲ್ಲಿ ಉದ್ಯೋಗೋಚಿತ ಸರ್ಟಿಫಿಕೆಟ್ ಮತ್ತು ಡಿಪ್ಲೊಮೊ ಕೊರ್ಸಗಳನ್ನು ತೆರೆಯುವ ಮೂಲಕ ಜೀವನೋಪಾಯ ಶಕ್ತಿಕರಣವನ್ನು ಹೆಚ್ಚಿಸುವ ಮಹತ್ವದ ಹೆಜ್ಜೆ ಇಟ್ಟಿದ್ದೇವೆಂದರು.
ಘಟಿಕೋತ್ಸವದ ಭಾಷಣವನ್ನು ನವದೆಹಲಿಯ ಇಂಟರ್ ಯುನಿವರ್ಸಿಟಿ ಎಕ್ಸಲರೇಟರ್ ಸೆಂಟರ್ ನ ನಿರ್ದೇಶಕ ಪ್ರೊ. ಅವಿನಾಶ್ ಚಂದ್ರ ಪಾಂಡೆ ಮಾಡಿದರು.  ಉನ್ನತ ಶಿಕ್ಷಣ ಸಚಿವಡಾ. ಎಮ್ ಸಿ ಸುಧಾಕರ್ ಅವರು ಗೈರು ಹಾಜರಾಗಿದ್ದರು.
ಸ್ನಾತಕ ಮತ್ತು ಸ್ನಾತಕೋತ್ತರ ವಿವಿಧ ವಿಭಾಗಗಳ 42 ವಿದ್ಯಾರ್ಥಿಗಳು 51 ಚಿನ್ನದ ಪದಕ ಪಡೆದರು. 59 ಸಂಶೋಧನಾರ್ಥಿಗಳು ಡಾಕ್ಟರೇಟ್ ಪದವಿ ಪಡೆದರು. ಎಲ್ಲಾ ವಿಭಾಗಗಳ ಸ್ನಾತಕ ಪದವಿಯ 80 ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿಯಿಂದ 75 ಸೇರಿ  155 ವಿದ್ಯಾರ್ಥಿಗಳು ರ‌್ಯಾಂಕ್ ಪ್ರಮಾಣ ಪತ್ರ ಪಡೆದರು.
ವಿಶ್ವವಿದ್ಯಾಲಯದ ಕುಲಸಚಿವ ಸಿ ನಾಗರಾಜು ಕುಲಸಚಿವರು (ಮೌಲ್ಯಮಾಪನ) ಪ್ರೊ. ಎನ್ ಎಂ ಸಾಲಿ ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ ಪರಿಷತ್ ಸದಸ್ಯರುಗಳು ಪಾಲ್ಗೊಂಡಿದ್ದರು.