
ಪುತ್ತೂರು: ಸಮಾಜದ ಪಥವನ್ನು ಬದಲಾಯಿಸುವ ಸಾಮಾರ್ಥ್ಯದ ಶಕ್ತಿ ಇದ್ದ ಬನ್ನಂಜೆ ಅವರು ಮಾನಸಿಕವಾಗಿ ಬೈರಾಗಿಯಂತೆ ಬದುಕಿದವರು. ಅಂತರಂಗದಲ್ಲಿ ಜ್ಞಾನಭಂಡಾರ ಕಣಿಜವಾಗಿದ್ದ ಅವರು ಹೊರನೋಟಕ್ಕೆ ಎಡ ಚಿಂತಕರಂತೆ ಕಂಡವರು. ಹಾಗಾಗಿ ಅವರ ಬದುಕಿಗೆ ಚೌಕಟ್ಟು ಸಾಧ್ಯವಿಲ್ಲ ಎಂದು ಯುವ ಬ್ರಿಗೇಡ್ ಸಂಸ್ಥಾಪಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು.
ಭಾನುವಾರ ಬೆಂಗಳೂರಿನ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಹಾಗೂ ಪುತ್ತೂರಿನ ಬಹುವಚನಂ ಆಶ್ರಯದಲ್ಲಿ ತೆಂಕಿಲ ಸ್ವಾಮಿ ಕಲಾಮಂದಿರದಲ್ಲಿ ನಡೆದ ಬಹುಶ್ರುತ ವಿದ್ವಾಂಸ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಬನ್ನಂಜೆ ಗೋವಿಂದಾಚಾರ್ಯ ಅವರ ನೆನಪಿನ ‘ವಿಶ್ವ ಬನ್ನಂಜೆ ೯೦ ರ ಪುತ್ತೂರು ನಮನ’ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಬನ್ನಂಜೆ ಅವರ ಬದುಕೇ ಹೊಸ ಪಾಂಡಿತ್ಯವನ್ನು ನಮಗೆ ಕಟ್ಟಿಕೊಡುತ್ತದೆ. ವೈಚಾರಿಕವಾಗಿ ವೈಭವದಂತೆ ಕಂಡು ಬರುವ ಅವರು ಸಂಸಾರಗಳ ನಡುವೆ ಸನ್ಯಾಸಿ. ಸಾಮಾಜಿಕ ಪರಿವರ್ತನೆಯ ದೃಷ್ಟಿಯಿಂದ ಅವರೊಬ್ಬ ಋಷಿ ಪರಂಪರೆಗೆ ಸೇರ್ಪಡೆಗೊಳ್ಳುವ ವ್ಯಕ್ತಿತ್ವದವರು. ಅತ್ಯಂತ ಗಹನವಾದ ವಿಚಾರಗಳನ್ನೂ ಸರಳವಾಗಿ ಹೇಳಬಲ್ಲ ಅವರು ಅಪಸವ್ಯಗಳಿಗೆ ಕಾರಣವಾಗುವ ದಾರಿಯನ್ನೂ ಬದಲಾಯಿಸಬಲ್ಲ ಸಮರ್ಥ ವ್ಯಕ್ತಿಯಾಗಿದ್ದರು. ಡಾ. ಅಂಬೇಡ್ಕರ್, ಗಾಂಧೀಜಿ, ಸಾವರ್ಕರ್, ದಯಾನಂದ ಸರಸ್ವತಿ, ವಿವೇಕಾನಂದ, ಓಶೋ ಅವರಂತೆ ಸಮೂಹದ ನಡುವೆ ತಪ್ಪುಗಳನ್ನು ನೇರವಾಗಿ ಹೇಳಿ ಪರಿವರ್ತನೆ ತರುವ ಶಕ್ತಿ ಬನ್ನಂಜೆ ಅವರಿಗಿತ್ತು. ಶ್ರದ್ಧೆಯ ಪ್ರಶ್ನೆಗಳಿಗೆ ಶ್ರದ್ಧೆಯಿಂದಲೇ ಉತ್ತರ ಎಂಬ ಪ್ರತಿಪಾದನೆ ಬನ್ನಂಜೆಯವರ ವೈಶಿಷ್ಟ್ಯ. ಶುದ್ದ ಚಿಂತಕರಾಗಿದ್ದ ಅವರು ಎಲ್ಲಾ ಕ್ಷೇತ್ರಗಳಲ್ಲಿಯೂ ಪಾಂಡಿತ್ಯ ಸಂಪಾದಿಸಿದ್ದರು. ಸಾಂಸ್ಕೃತಿಕ ಪರಿವರ್ತನೆಯ ನ್ನು ಮಾಡ ಬಲ್ಲ ಗಟ್ಟಿಗರಾಗಿದ್ದರು ಎಂದು ಅವರು ಹೇಳಿದರು.
ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಬೆಂಗಳೂರು ಇದರ ಕಾರ್ಯಾಧ್ಯಕ್ಷ ಡಾ. ಮಲ್ಲೇಪುರಂ ಜಿ.ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಛಂದೋ ವಿರಾಟ ಪ್ರತಿಭೆ ಹೊಂದಿದ್ದ ಬನ್ನಂಜೆ ಅವರು ವ್ಯಾಪಕ ವಿಚಾರಧಾರೆ, ಅಗಾಧವಾದ ಸಾರಸ್ವತ ಸಂಪತ್ತು ಹೊಂದಿದ್ದವರು. ಉಪನಿಷತ್ ಗಳ ಮೇಲೆ ಸ್ವತಂತ್ರವಾದ ವ್ಯಾಖ್ಯಾನಗಳನ್ನು ಸಂಸ್ಕೃತದಲ್ಲಿ ಬರೆದ ಭಾರತೀಯ. ಯಾರೂ ಮುಟ್ಟದ ಏರುಜಾಗವನ್ನು ಮುಟ್ಟಿದ ಅವರು ತಮ್ಮ ವಿಚಾರಗಳನ್ನು ತೂಕವಾಗಿ ಗಟ್ಟಿಯಾಗಿ ಆತ್ಮವಿಶ್ವಾಸದಿಂದ ಪ್ರತಿಪಾದನೆ ಮಾಡಿದವರು. ಅವರ ಪಾಂಡಿತ್ಯ ಹಾಗೂ ಕೃತಿಗಳು ಎಂದಿಗೂ ಸಮಾಜದ ಮುಂದೆ ಸದಾ ಇರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಎಲ್. ಸಮೂಹ ಸಂಸ್ಥೆಗಳ ಅಧ್ಯಕ್ಷ ಬಲರಾಮ ಆಚಾರ್ಯ ವಹಿಸಿದ್ದರು. ವೇದಿಕೆಯಲ್ಲಿ ವಿಶ್ವ ಬನ್ನಂಜೆ ೯೦ರ ನಮನ ಪುತ್ತೂರು ಕಾರ್ಯಕ್ರಮ ಸಮಿತಿ ಕಾರ್ಯಾಧ್ಯಕ್ಷ ಮಾಧವ ಸ್ವಾಮಿ ಉಪಸ್ಥಿತರಿದ್ದರು.
ಗೋಷ್ಠಿಗಳು
ಸಭಾಕಾರ್ಯಕ್ರಮದ ಬಳಿಕ ನಡೆದ ಗೋಷ್ಟಿಗಳಲ್ಲಿ ಖ್ಯಾತ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ‘ಬನ್ನಂಜೆ ಸ್ಮರಣೆ’, ಪ್ರಾಧ್ಯಾಪಕ ವಿದ್ವಾನ್ ಕೃಷ್ಣರಾಜ ಕುತ್ಪಾಡಿ ‘ಗುರು ಬನ್ನಂಜೆ’, ಭಾರತಿ ಕಲ್ಲೂರಾಯ ಅವರು ‘ವಿಶ್ವತೋಮುಖ ಬನ್ನಂಜೆ’ ಎಂಬ ವಿಚಾರ ಮಂಡಿಸಿದರು. ಕವಿತಾ ಉಡುಪ ಮತ್ತು ಸುಮಾ ಶಾಸ್ತ್ರಿ ಬನ್ನಂಜೆ ಹಾಡುಗಬ್ಬ ಪ್ರಸ್ತುತ ಪಡಿಸಿದರು. ಖ್ಯಾತ ಸಿನಿಮಾ ನಿರ್ದೇಶಕ ಸುಚೇಂದ್ರ ಪ್ರಸಾದ್ ಮತ್ತು ತಂಡ ಡಾ.ವೀಣಾ ಬನ್ನಂಜೆ ವಿರಚಿತ ‘ನನ್ನ ಪಿತಾಮಹ’ ನಾಟಕವನ್ನು ಪ್ರದರ್ಶಿಸಿದರು. ಪುತ್ತೂರು ಬಹುವಚನಂನ ಡಾ. ಶ್ರೀಶ ಕುಮಾರ್ ಸ್ವಾಗತಿಸಿದರು. ರಂಗಕರ್ಮಿ ಐ.ಕೆ.ಬೊಳುವಾರು ಕಾರ್ಯಕ್ರಮ ನಿರ್ವಹಿಸಿದರು.

































