
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.29: ಬದುಕು ಎಂದರೆ ಆಯ್ಕೆ ರಹಿತ ಜೀವನ ಆಗಿರಬೇಕು. ಆಗ ಮಾತ್ರ ಶಾಂತಿ ನೆಮ್ಮದಿ ಜೊತೆಗೆ ಸಮಸ್ಯೆಗಳೇ ಇಲ್ಲವಾಗುತ್ತವೆ ಎಂದು ಕೊಟ್ಟೂರು ಸಂಸ್ಥಾನ ಮಠದ ಕೊಟ್ಟೂರು ಬಸವಲಿಂಗ ಸ್ವಾಮಿಗಳು ಹೇಳಿದರು.
ಅವರು ನಗರದ ಕೊಟ್ಟೂರುಸ್ವಾಮಿ ಮಠದ ಸಭಾಂಗಣದಲ್ಲಿ ಸೆ. 24 ರಿಂದ ಗುರು ಕುಮಾರಮಹಾ ಶಿವಯೋಗಿಗಳ 159 ನೇ ಹಾಗು ಡಾ. ಸಂಗನಬಸವ ಮಹಾಸ್ವಾಮಿಗಳ 88 ನೇ ಜಯಂತೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ. ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ನಿನ್ನೆ ಸಂಜೆ ತಮ್ಮ ಆಶಿರ್ವಚನ ಈ ನುಡಿಯಾಡಿದರು.
ನಾವು ಇಂದು ಬಹುತೇಕರು ಆಯ್ಕೆ ಜೀವನ ಬಯಸುವುದರಿಂದ ಸಮಸ್ಯೆಗಳ ಸುಳಿಯಲ್ಲಿ ಸಿಲಿಕಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ನಾನು ಯಾರು, ನನ್ನ ಕೆಲಸ ಏನು ಎಂಬುದನ್ನು ಅರಿಯಬೇಕು ಎಂದರು.
ಒಳ್ಳೆಯದಾಗಲಿ, ಕೆಟ್ಟದ್ದಾಗಲಿ ನಾವು ಕಂಡು ಸುಮ್ಮನೆ ನಕ್ಕು ಮುನ್ನಡೆಯಬೇಕು ಎಂಬ ಬುದ್ದನ ಸಂದೇಶ ನಮ್ಮ ಬದುಕಾದರೆ ಜೀವನ ಉತ್ತಮವಾಗಲಿದೆ. ನಮ್ಮ ನಗುವಿನಿಂದ ಇನ್ನೊಬ್ಬರಿಗೆ ನೋವಾಗದಂತೆ ಮುಗುಳು ನಗೆ ನಮ್ಮುಖದಲ್ಲಿ ಸದಾ ಅಳವಡಿಸಿಕೊಳ್ಳಬೇಕು. ಆಗ ಸಮಾಧಾನಿಗಳಾಗಿ ದಿವ್ಯ ಜೀವನ, ಭವ್ಯ ಜೀವನ ಕಾಣಲು ಸಾಧ್ಯ ಎಂದರು.
ಶೈಕ್ಷಣಿಕ ಕ್ರಾಂತಿಗೆ ಪ್ರೇರಣೆದಾಯಕರಾದವರು ಹಾನಗಲ್ಲು ಗುರುಕುಮಾರೇಶ್ವರರು. ಅವರ ಜೀವನ ದರ್ಶನ ಅರಿತುಕೊಳ್ಳಬೇಕು ಎಂದು ಆಶಿಸಿದರು.
ಕೊಟ್ಟೂರು ಶಾಖಾ ಮಠಗಳ ಶ್ರೀಗಳು ಇದ್ದರು.ನಗರ ಮತ್ತು ಸುತ್ತ ಮುತ್ತಲ ಗ್ರಾಮಗಳ ನೂರಾರು ಭಕ್ತರು ಪಾಲ್ಗೊಂಡಿದ್ದರು.























