ಬೀದಿಗೆ ನಾಯಿಗೆ ಹೆದರಿ ಗೋಡೆಗೆ ಸ್ಕೂಟರ್ ಡಿಕ್ಕಿ: ಸವಾರ ಸಾವು

ಬೆಳಗಾವಿ,ಜ.೧೭-ಬೀದಿ ನಾಯಿಗೆ ಹೆದರಿ ಸ್ಕೂಟರ್ ಸವಾರರೊಬ್ಬರು ಗೋಡೆಗೆ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ವಿಚಿತ್ರ ಘಟನೆ ಅಥಣಿ ಪಟ್ಟಣದ ಕುಂಬಾರ ಗಲ್ಲಿಯಲ್ಲಿ ನಡೆದಿದೆ.
ಕುಂಬಾರ ಗಲ್ಲಿಯ ವಿಶ್ವನಾಥ ಶಿರೋಳ ಮೃತಪಟ್ಟವರು,ಪ್ರಕರಣ ದಾಖಲಿಸಿದ ಪೊಲೀಸರು ಬೈಕ್ ಅಪಘಾತ ಎಂದು ಭಾವಿಸಿ ಸುಮ್ಮನಾಗಿದ್ದರು.


ಆದರೆ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ನೋಡಿದಾಗ ಸಾವಿನ ರಹಸ್ಯ ಬಯಲಾಗಿದೆ. ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಬೀದಿ ನಾಯಿಯೊಂದು ವಿಶ್ವನಾಥರನ್ನು ಅಟ್ಟಾಡಿಸಿಕೊಂಡು ಬಂದಿತ್ತು.
ಅದರಿಂದ ತಪ್ಪಿಸಿಕೊಳ್ಳಲು ವಿಶ್ವನಾಥ್ ವೇಗವಾಗಿ ಬೈಕ್ ಓಡಿಸಿದ್ದಾರೆ. ಈ ವೇಳೆ ಮನೆಯ ಗೋಡೆಗೆ ಸ್ಕೂಟಿ ಡಿಕ್ಕಿ ಹೊಡೆದು ಸ್ಥಳದಲ್ಲೇ ವಿಶ್ವನಾಥ್ ಸಾವನಪ್ಪಿದ್ದಾರೆ.


ಪತ್ನಿಯ ಕೊಂದ ಪತಿ:
ಪದೇಪದೆ ತವರು ಮನೆಗೆ ಹೋಗುತ್ತಾಳೆ ಎಂಬ ಕ್ಷುಲ್ಲಕ ಕಾರಣಕ್ಕೆ ಪತ್ನಿ ಮೇಲೆ ಪತಿ ಹಲ್ಲೆ ಎಸಗಿ ಕೊಲೆ ಮಾಡಿರುವ ಘಟನೆ ಹಾನಗಲ್ ತಾಲೂಕಿನ ಮುಡೂರು ಗ್ರಾಮದಲ್ಲಿ ನಿನ್ನೆ ನಡೆದಿದೆ.


ಸಾಲೇಹಾ ಚಮನಸಾಬ ಗಣಜೂರ ಮೃತ ದುರ್ದೈವಿ ಎಂದು ತಿಳಿದುಬಂದಿದ್ದು, ಮುಡೂರು ಗ್ರಾಮದ ಗೌಸ್ ಬಿ ಮಕಬುಲ್ ಅಹ್ಮದ್ ಹಿರೇಹಳ್ಳಿ (೪೪) ಕೊಲೆ ಆರೋಪಿಯಾಗಿದ್ದಾನೆ.


ಘಟನೆ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ಪತ್ತೆಗಾಗಿ ಹಾನಗಲ್ ಪೊಲೀಸ್ ಠಾಣೆಯ ವಿಶೇಷ ತಂಡ ಕಾರ್ಯಾಚರಣೆ ಮುಂದುವರಿಸಿದೆ.