Home ಜಿಲ್ಲೆ ಬಡವರ ರಕ್ತ ಹೀರುವ ಕಾಂಗ್ರೆಸ್ ಸರ್ಕಾರ: ನೇಮರಾಜ ನಾಯ್ಕ

ಬಡವರ ರಕ್ತ ಹೀರುವ ಕಾಂಗ್ರೆಸ್ ಸರ್ಕಾರ: ನೇಮರಾಜ ನಾಯ್ಕ

(ಸಂಜೆವಾಣಿ ವಾರ್ತೆ)

ಬಳ್ಳಾರಿ, ಫೆ.21: ರಾಜ್ಯ ಕಾಂಗ್ರೆಸ್ ಸರ್ಕಾರ ಬುರುಡೆ ಬಿಡುವ, ಬಡವರ ರಕ್ತ ಹೀರುವ ಸರ್ಕಾರವಿದು, 6 ತಿಂಗಳ ಗೃಹಲಕ್ಷ್ಮಿ ಹಣ, 15 ಸಾವಿರ ಕೋಟಿ ಕೊಳ್ಳೆ ಹೊಡೆದ ಸರ್ಕಾರವಿದು, ಕೈ ನಾಯಕರು ಮತ ಕೇಳಲು ಮನೆ ಬಾಗಿಲಿಗೆ ಬಂದಾಗ ಇದನ್ನು ಪ್ರಶ್ನಿಸಿ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ನೇಮರಾಜ ನಾಯ್ಕ ಹೇಳಿದ್ದಾರೆ.

ನಗರದ ಜೆಡಿಎಸ್ ಜಿಲ್ಲಾ ಕಚೇರಿ ಆವರಣದಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಾಗಿ 3ನೇ ಬಾರಿ ನೇಮಕಗೊಂಡ ಮೀನಳ್ಳಿ ತಾಯಣ್ಣ ಅವರಿಗೆ ಅಭಿನಂದನೆ, ಪದಗ್ರಹಣ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಹೆಣಗಾಡುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ, ಬೆಲೆಗಳನ್ನು ಹೆಚ್ಚಳ ಮಾಡುವ ಮೂಲಕ ಬಡವರ ನೆಮ್ಮದಿ ಜೀವನವನ್ನು ಕಸಿದುಕೊಂಡಿದೆಂದರು.

ನಮ್ಮ ಸಂಘಟನೆ ಬಲವಾಗಬೇಕು, ಪ್ರತಿಯೊಬ್ಬರೂ ಪಕ್ಷವನ್ನು ತಳಮಟ್ಟದಿಂದ ಗಟ್ಟಿಗೊಳಿಸಲು ಶ್ರಮಿಸಬೇಕು, ಕುಮಾರಣ್ಣ, ದೇವೇಗೌಡ, ನಿಖಿಲ್ ಕುಮಾರಸ್ವಾಮಿ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರವಾಸ ಮಾಡುತ್ತಿದ್ದು, ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕುಮಾರಣ್ಣ ಅವಧಿಯಲ್ಲಿ ಜಾರಿಗೊಳಿಸಿದ ಜನಪರ ಕಾರ್ಯಕ್ರಮಗಳನ್ನು ಮನೆ ಮನಗೆ ತಲುಪಿಸಬೇಕು ಎಂದರು.

ಜೆಡಿಎಸ್ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ರೈತರ ಬಗ್ಗೆ ವಿಶೇಷ ಕಾಳಜಿ ಇರುವ ಪಕ್ಷ ನಮ್ಮದು. ಕುಮಾರಣ್ಣ ಅವರು ಅವಧಿಯಲ್ಲಿ ರೈತರ 25 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಕಾರ್ಯಕರ್ತರೇ ಪಕ್ಷದ ಜೀವಾಳ, ಪ್ರತಿಯೊಬ್ಬ ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕು. 2028ಕ್ಕೆ ಮತ್ತೆ ಕುಮಾರಣ್ಣ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಮಾತನಾಡಿ, ಪಕ್ಷದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವೆ, ನನ್ನ ಕೊನೆ ಉಸಿರು ಇರೋವವರೆಗೂ ಇದೇ ಪಕ್ಷದಲ್ಲಿರುವೆ, ಯುಗಾದಿ ಹಬ್ಬದ ಬಳಿಕ ಗ್ರಾಮೀಣ ಮಟ್ಟದಿಂದ ಪಕ್ಷವನ್ನು ಮತ್ತಷ್ಟು ತಳಮಟ್ಟದಿಂದ ಸಂಘಟಿಸಲು ಒತ್ತು ನೀಡುವೆ ಎಂದರು.

ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ರೆಡ್ಡಿ, ವಿಜಯನಗರ ಜಿಲ್ಲಾಧ್ಯಕ್ಷ ಮೃತ್ಯುಂಜಯ ಬಾದಾಮಿ, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ್, ಕೊಟ್ರೇಶ್ ಹೊಸಪೇಟೆ, ಸೋಮಪ್ಪ ಕುರೆಕೊಪ್ಪ, ಜಂಬುನಾಥ್ ಯಾದವ್, ಮೀನಳ್ಳಿ ರಮೇಶ್, ಕಿರಣ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಜಮಿಲ ಮೊದಲಾದವರು ಇದ್ದರು. ಯಲ್ಲಗೌಡ ಸ್ವಾಗತಿಸಿದರು..