
ಪುತ್ತೂರು; ಜನಸಾಮಾನ್ಯರಿಗೆ ಮಾಹಿತಿ ಹಾಗೂ ವಿದ್ಯಾಭ್ಯಾಸದ ಕೊರತೆಯ ಕಾರಣ ಸರ್ಕಾರಿ ಸೌಲಭ್ಯಗಳು ವಂಚಿತಗೊಳ್ಳುತ್ತಿವೆ. ಇದರ ಪರಿಣಾಮ ರಾಜ್ಯದ ಆರ್ಥಿಕ ಉತ್ತೇಜನಕ್ಕೆ ಹೊಡೆತಬೀಳುತ್ತಿದೆ. ಗ್ರಾಮೀಣ ಭಾಗದಲ್ಲಿ ಜನತೆಯ ಜತೆಗೆ ಕೆಲಸ ಮಾಡುವ ತಳಮಟ್ಟದ ಸರ್ಕಾರಿ ಆಶಾ-ಅಂಗನವಾಡಿ ಕಾರ್ಯಕರ್ತೆಯರು ಜನರಿಗೆ ‘ಮಾಹಿತಿಕೇಂದ್ರ’ಗಳಾಗಿ ಕೆಲಸ ಮಾಡಿದಾಗ ಮಹಿಳಾಭಿವೃದ್ಧಿ ಜತೆಗೆ ರಾಜ್ಯಾಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಶಾಸಕ ಅಶೋಕ್ ರೈ ಅಭಿಪ್ರಾಯಪಟ್ಟರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ಯಾರಂಟಿ ಅನುಷ್ಟಾನ ಸಮಿತಿ ಸ್ತ್ರೀಶಕ್ತಿ ಯೋಜನೆಯ ಜಂಟಿ ಆಶ್ರಯದಲ್ಲಿ ಪುತ್ತೂರಿನ ಪುರಭವನದಲ್ಲಿ ಭಾನುವಾರ ನಡೆದ ವಿಶ್ವಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ನೀಡಿರುವ ಪಂಚ ಗ್ಯಾರಂಟಿಗಳಿಂದ ಬಡಜನತೆಯ ಬದುಕಿನಲ್ಲಿ ಸ್ವಲ್ಪಮಟ್ಟಿನ ಚೇತರಿಕೆ ಉಂಟಾಗಿದೆ. ಈಗಲೂ ವಿದ್ಯುತ್ ಇಲ್ಲದ, ಪಡಿತರ ಕಾರ್ಡು ಹೊಂದಿರದ, ಮನೆಯೇ ಇಲ್ಲದ ಬಡವರ್ಗ ನಮ್ಮಲ್ಲಿದೆ. ಅದರ ಪರಿಹಾರವೂ ಅವರಿಗೆ ಗೊತ್ತಿಲ್ಲ. ಕಳೆದ ೯ ವರ್ಷಗಳಿಂದ ಎಂಡೋಸಲ್ಫಾನ್ ಪೀಡಿತ ಹೆಣ್ಣುಮಗುವಿಗೆ ಕನಿಷ್ಟ ತಿಂಗಳಿಗೆ ಸಿಗುವ ಪರಿಹಾರಹಣವನ್ನೂ ಕೊಡಿಸಲೂ ನಮ್ಮಿಂದಾಗುವುದಿಲ್ಲ. ಕಾರಣ ಅವರಿಗೆ ಸಿಗುವ ಹಣದ ಬಗ್ಗೆ ಮಾಹಿತಿ ಇಲ್ಲ. ಇಂತಹ ಜನತೆಯ ಪರವಾಗಿ ಅವರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಆಶಾ-ಅಂಗನವಾಡಿ ಹಾಗೂ ಸ್ತ್ರೀಶಕ್ತಿ ಸಂಘದ ಸದಸ್ಯರು ಕೆಲಸ ಮಾಡಬೇಕು. ಅಂತವರಿಗೆ ಮಾಹಿತಿ ನೀಡಿ ಸರ್ಕಾರ ಸೌಲಭ್ಯ ಪಡೆದುಕೊಳ್ಳುವಂತೆ ಮಾಡುವುದೇ ನಿಜವಾದ ಸಮಾಜಸೇವೆಯಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಅವರು ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ಬದುಕಿಗೆ ಬುನಾದಿ ಹಾಕುವ ದೊಡ್ಡ ಪಾತ್ರ ನಿರ್ವಹಿಸುತ್ತಿದ್ದಾರೆ. ಗ್ರಾಪಂಗಳಲ್ಲಿ ಶೇ೫೦ ಮಹಿಳೆಯರು ಇಂದು ಆಡಳಿತದಲ್ಲಿ ಪಾಲುಪಡೆದುಕೊಳ್ಳುತ್ತಿದ್ದಾರೆ. ವಿಧಾನಸಭೆಯಲ್ಲೂ ಇಂತಹ ಸ್ಥಿತಿ ನಿರ್ಮಾಣವಾಗುವಂತಹ ಅವಕಾಶಗಳನ್ನು ನೀವು ಸೃಷ್ಟಿ ಮಾಡಬೇಕಾಗಿದೆ ಎಂದರು. ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಅವರು ಮಾತನಾಡಿ, ಪಂಚ ಗ್ಯಾರಂಟಿಗಳು ಮಹಿಳಾಪರ ಯೋಜನೆಗಳಾಗಿವೆ. ವಸತಿಯೋಜನೆ, ಪಡಿತರ ಚೀಟಿ ಸಹಿತ ಮಹಿಳಾ ಸಬಲೀಕರಣಕ್ಕೆ ಪೂರಕವಾಗಿದೆ. ಸಾಕಷ್ಟು ಮಂದಿ ಗ್ಯಾರಂಟಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿದ್ದ ವಕೀಲೆ ರಾಜೇಶ್ವರಿ ಅವರು ಉಪನ್ಯಾಸ ನೀಡಿದರು. ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿಯ ಜಿಲ್ಲಾಧ್ಯಕ್ಷೆ ಶಕುಂತಳಾ ಹಾಗೂ ತಾಲೂಕು ಅಧ್ಯಕ್ಷೆ ಕಮಲಾ, ಸಹಾಯಕ ಸಿಡಿಪಿಒ ಮಂಗಳಾ ಕಾಳೆ ಉಪಸ್ಥಿತರಿದ್ದರು. ಸಿಡಿಪಿಒ ಹರೀಶ್ ಸ್ವಾಗತಿಸಿದರು. ಮೇಲ್ವಿಚಾರಕಿ ಸುಜಾತ ಕಾರ್ಯಕ್ರಮ ನಿರೂಪಿಸಿದರು.
ಶಾಸಕತ್ವ ಕಟ್ಟಿಟ್ಟ ಬುತ್ತಿ ಅಲ್ಲ..!
ಶಾಸಕತ್ವ ಎಂಬುವುದು ಅಶೋಕ್ ರೈಗೆ ಕಟ್ಟಿಟ್ಟ ಬುತ್ತಿ ಅಲ್ಲ. ಜನಾಶೀರ್ವಾದ ಮಾಡಿದರೆ ಮತ್ತೊಂದು ಬಾರಿ ಶಾಸಕನಾಗುತ್ತೇನೆ. ಇಲ್ಲವಾದರೆ ನನ್ನ ಉದ್ಯಮಕ್ಕೆ ವಾಪಾಸುಹೋಗುತ್ತೇನೆ. ಆದರೆ ಈಗಿರುವ ಅವಕಾಶವನ್ನು ಜನತೆಯ ಸೇವೆಗಾಗಿ ಮೀಸಲಿಡುವುದು ನನ್ನ ಉದ್ದೇಶ. ನನ್ನ ಸ್ವಂತ ಹಣದಲ್ಲಿ ಜಾಗ ಖರೀದಿಸಿ ೧೮೭ ಸೈಟ್ ನಿರ್ಮಿಸಲಾಗಿದೆ. ಇದು ವಿಧವೆಯರಿಗೆ ಮೀಸಲು. ಪ್ರತೀ ಗ್ರಾಪಂಗಳಲ್ಲಿಯೂ ನಿವೇಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಾಡಿಗೆ ಮನೆಯಲ್ಲಿರುವವರು, ಮನೆಯೇ ಇಲ್ಲದವರಿಗೆ ಮಾಹಿತಿ ನೀಡಿ. ಅರ್ಜಿ ಕೊಡಲಿ. ಕನಿಷ್ಟ ಅಂತಹ ಸಮಸ್ಯೆ ಇರುವವರನ್ನು ನನ್ನ ಬಳಿಗಾದರೂ ಕಳಿಸಿ ಸಾಕು- ಅಶೋಕ್ ರೈ ಶಾಸಕರು.

























