
ಚಿತ್ರದುರ್ಗ, ಅ.6- ಬಗರ್‍ಹುಕ್ಕುಂ ಭೂಮಿಗಳ ಸಮಸ್ಯೆ ಬಗೆಹರಿಸಿ ಅರ್ಹ ಫಲಾನುಭವಿಗಳಿಗೆ ಭೂಮಿ ಮಂಜೂರಾತಿ ಮಾಡಿಕೊಡಬೇಕು ಎಂದು ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಬಗರ್ ಹುಕುಂ ಸಾಗುವಳಿದಾರರು ಸುಮಾರು ವರ್ಷಗಳಿಂದ ಹುಳುಮೆ ಮಾಡಿಕೊಂಡು ಬರುತ್ತಿದ್ದಾರೆ. ಅವರಿಗೆ ಸಾಗುವಳಿ ಪತ್ತ ನೀಡದೆ ಸರ್ಕಾರ ಸಾಕಷ್ಟು ಸಬೂಬುಗಳನ್ನು ಹೇಳುತ್ತಾ ಬರುತ್ತಿದೆ. ಇದು ಭೂ ರಹಿತ ಕುಟುಂಬಗಳಿಗೆ ತುಂಬ ಅನ್ಯಾಯ ಆಗುತ್ತಿದೆ. ಆದ್ದರಿಂದ ಭೂಮಿ ಮಂಜೂರಾತಿಗೆ ಅಡ್ಡಿಯಾಗಿರುವ ಕಾನೂನು ತಿದ್ದುಪಡಿ ಮಾಡಬೇಕು. ಅರ್ಜಿ ಸಲ್ಲಿಸಿ, ಸಾಗುವಳಿ ಮಾಡುತ್ತಿರುವ ಭೂರಹಿತ ಕುಟುಂಬಗಳಿಗೆ ಭೂಮಿ ಮಂಜೂರಾತಿ ನೀಡಬೇಕು. ಗೊಂದಲದಲ್ಲಿರುವ ಅರಣ್ಯ-ಕಂದಾಯ ಇಲಾಖೆ ಭೂಮಿಗಳ ಜಂಟಿ ಸರ್ವೆ ನಡೆಸಬೇಕು. ಈಗಾಗಲೇ ತಿರಸ್ಕರಿಸಿರುವ ಫಾರಂ ನಂ.50, 53 ಹಾಗೂ 57ರ ಅರ್ಜಿಗಳನ್ನು ಪುನರ್ ಪರಿಶೀಲಿಸಬೇಕು. ಯಾವುದೇ ಕಾರಣಕ್ಕೂ ಅರಣ್ಯ-ಕಂದಾಯ ಭೂಮಿಗಳಿಂದ ಜನರನ್ನು ಒಕ್ಕಲೇಳಿಸಬಾರದು. ಈಗಾಗಲೇ ಸಾಗುವಳಿ ಚೀಟಿ ಪಡೆದುಕೊಂಡಿರುವ ರೈತರಿಗೆ ಅವರ ಹೆಸರಿಗೆ ಪಹಣಿ ನೀಡಬೇಕು. ಸಾಗುವಳಿ ಮಾಡದೇ ಬೀಳು ಬಿಟ್ಟಿರುವ ಭೂಮಿಗಳನ್ನು ಹೊರತುಪಡಿಸಿ ಅರ್ಜಿ ಹಾಕಿ ಸಾಗುವಳಿ ಮಾಡುತ್ತಿರುವ ಸರ್ಕಾರಿ ಭೂಮಿಗಳನ್ನು ಕುರಿಗಾಯಿಗಳಿಗೆ ಕುರಿ ಮೇಯಿಸಲು ಮುಕ್ತ ಅವಕಾಶದ ಪ್ರಸ್ತಾಪವನ್ನು ಕೂಡಲೇ ಕೈಬಿಡಬೇಕು. ನಿವೇಶನ ರಹಿತರಿಗೆ ನಿವೇಶನ, ವಸತಿ ರಹಿತರಿಗೆ ವಸತಿ ನೀಡಬೇಕ ಮತ್ತು ಇದಕ್ಕಾಗಿ ಪ್ರತಿ ಪಂಚಾಯತಿ ವ್ಯಾಪ್ತಿಯಲ್ಲೂ ಯೋಜನೆ ರೂಪಿಸಬೇಕು. ಬಗರ್ ಹುಕ್ಕುಂ ಭೂಮಿಗಳ ವಿಚಾರಕ್ಕೆ ಸರ್ಕಾರ “ಒನ್ ಟೈಮ್ ಸೆಟಲ್‍ಮೆಂಟ್” ಜಾರಿಯ ಮೂಲಕ ಸಮಸ್ಯೆ ಬಗೆಹರಿಸಲು ಕೂಡಲೇ ಕ್ರಮ ಜರುಗಿಸಬೇಕು. ಸರ್ಕಾರ-ಜಿಲ್ಲಾಡಳಿತ ಬಗರ್ ಹುಕ್ಕುಂ ಸಾಗುವಳಿದಾರರಿಗೆ ಭೂಮಿ ಹಕ್ಕು ಮಾನ್ಯ ಮಾಡಲು ಸಾಮಾಜಿಕ ನ್ಯಾಯ ಪಾಲಿಸಬೇಕೆಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಸತ್ಯಪ್ಪ ಮಲ್ಲಾಪುರ ವಹಿಸಿದ್ದು, ಕುಮಾರ್ ಸಮತಳ, ಕರಿಯಣ್ಣ ಈಚಘಟ್ಟ, ಹನುಮಂತಣ್ಣ ಗೋನೂರು, ರಾಜಪ್ಪ, ಶಿವಮೂರ್ತಿ, ಬೋರಮ್ಮ, ಲಕ್ಷ್ನೀದೇವಿ, ಜ್ಯೋತಿ, ಸೇರಿದಂತೆ ಭೂರಹಿತ ಸಾಗುವಳಿದಾರರು ಭಾಗವಹಿಸಿದ್ದರು.





























