
ಬಂಟ್ವಾಳ: ಬೆಳಗಿನ ಜಾವ ೫ ಗಂಟೆಗೆ ಇಡೀ ಬಿ.ಸಿ.ರೋಡ್ ಪಟ್ಟಣ ಇನ್ನೂ ನಿದ್ರೆಯಿಂದ ಎಚ್ಚರಗೊಳ್ಳುವಷ್ಟರಲ್ಲಿ, ವ್ಯಕ್ತಿಯೊಬ್ಬರು ತಮ್ಮ ಐಷಾರಾಮಿ ಫಾರ್ಚೂನರ್ ಕಾರಿನಲ್ಲಿ ಬಂದು ಇಳಿಯುತ್ತಾರೆ. ಕಾರಿನಿಂದ ಇಳಿದ ತಕ್ಷಣವೇ ಹಿಂದಿನ ಬಾಗಿಲು ತೆರೆದು ಪೊರಕೆ ತೆಗೆದುಕೊಂಡು ರಸ್ತೆ ಸ್ವಚ್ಛಗೊಳಿಸುವ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾರೆ.
ಇದು ಬಂಟ್ವಾಳ ಪುರಸಭೆಯ ಪೌರಕಾರ್ಮಿಕ ಸೇಸಪ್ಪ ಅವರ ದಿನನಿತ್ಯದ ಕಾಯಕದ ಚಿತ್ರಣ.
ಪ್ರತಿದಿನ ಬೆಳಿಗ್ಗೆ ೫ರಿಂದ ಮಧ್ಯಾಹ್ನ ೧೨ ಗಂಟೆಯವರೆಗೆ ಬಿ.ಸಿ.ರೋಡ್‌ನ ವಿವಿಧ ಭಾಗಗಳಲ್ಲಿ ರಸ್ತೆ ಗುಡಿಸುವ ಕಾರ್ಯ ನಿರ್ವಹಿಸುವ ಸೇಸಪ್ಪ, ತ್ಯಾಜ್ಯ ವಿಲೇವಾರಿ ವಾಹನದ ಚಾಲಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಇತ್ತೀಚೆಗೆ ಅವರು ತಮ್ಮ ಸ್ವಂತ ಫಾರ್ಚೂನರ್ ಕಾರಿನಲ್ಲೇ ಕೆಲಸಕ್ಕೆ ಹಾಜರಾಗುತ್ತಿರುವುದು ಸಾರ್ವಜನಿಕರ ಗಮನ ಸೆಳೆದಿದೆ.
೧೯೯೬ರಲ್ಲಿ ಕೇವಲ ೫೦ ರೂ. ದಿನಗೂಲಿಗೆ ಪೌರಕಾರ್ಮಿಕರಾಗಿ ಸೇರಿದ್ದ ಸೇಸಪ್ಪ, ಬಳಿಕ ಖಾಯಂ ನೌಕರರಾದರು. ಕೇವಲ ೩ನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿರುವ ಇವರು, ಜೀವನದಲ್ಲಿ ಯಶಸ್ಸು ಗಳಿಸಲು ಶಿಕ್ಷಣಕ್ಕಿಂತ ನಿರಂತರ ಪರಿಶ್ರಮ ಮತ್ತು ದೃಢಸಂಕಲ್ಪವೇ ಮುಖ್ಯ ಎಂಬುದನ್ನು ನಿರೂಪಿಸಿದ್ದಾರೆ.
ಕಾರುಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಸೇಸಪ್ಪ, ಮೊದಲು ಸಣ್ಣ ಕಾರೊಂದನ್ನು ಖರೀದಿಸಿದ್ದರು. ನಂತರ ಆಲ್ಟೋ, ಓಮಿನಿ, ಸ್ವಿಫ್ಟ್ ಹಾಗೂ ಸ್ಕಾರ್ಪಿಯೋ ಕಾರುಗಳನ್ನು ಬಳಸಿದ್ದರು. ಇದೀಗ ದೈವನರ್ತಕನಾಗಿ ಸೇವೆ ಸಲ್ಲಿಸುತ್ತಿರುವ ತಮ್ಮ ಪುತ್ರನ ಇಷ್ಟದಂತೆ ೧೦ ದಿನಗಳ ಹಿಂದಷ್ಟೇ ಫಾರ್ಚೂನರ್ ಕಾರನ್ನು ಖರೀದಿಸಿದ್ದು, ಪ್ರಸ್ತುತ ಅದೇ ಕಾರಿನಲ್ಲಿ ಕೆಲಸಕ್ಕೆ ಬರುವ ಮೂಲಕ ಸ್ಥಳೀಯವಾಗಿ ವೈರಲ್ ಆಗಿದ್ದಾರೆ.
ಇಂದು ಆರ್ಥಿಕವಾಗಿ ಸಶಕ್ತರಾಗಿದ್ದರೂ ಸೇಸಪ್ಪ ಅವರ ಆರಂಭದ ದಿನಗಳ ಬದುಕು ಸುಲಭವಾಗಿರಲಿಲ್ಲ. ತಂದೆಯ ಅಂತ್ಯಸಂಸ್ಕಾರಕ್ಕೆ ಹಣವಿಲ್ಲದೆ, ಸಹಾಯಕ್ಕೆ ಯಾರೂ ಬಾರದಿದ್ದಾಗ ತಾವೇ ನೇತ್ರಾವತಿ ನದಿ ತೀರದಲ್ಲಿ ಮೃತದೇಹದ ಸಂಸ್ಕಾರ ನೆರವೇರಿಸಿದ್ದ ಕಹಿ ನೆನಪನ್ನು ಅವರು ಮೆಲಕುಹಾಕುತ್ತಾರೆ. ಪ್ರಸ್ತುತ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಅವರು ಸುಖಿ ಜೀವನ ನಡೆಸುತ್ತಿದ್ದಾರೆ.


































