ಫ್ಲೈಓವರ್ ನಿರ್ಮಾಣಕ್ಕೆ ವಿರೋಧ ಸರಿಯಲ್ಲ

ಸಂಜೆವಾಣಿ ನ್ಯೂಸ್
ಮೈಸೂರು.ನ10:-
ನಗರದಲ್ಲಿ ಹೆಚ್ಚಾಗುತ್ತಿರುವ ವಾಹನಗಳ ದಟ್ಟಣೆ ತಡೆಯುವ ಉದ್ದೇಶದಿಂದ ಜೆಎಲ್‍ಬಿ ರಸ್ತೆ ಹಾಗೂ ವಿನೋಬಾ ರಸ್ತೆಯಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿರೋಧ ವ್ಯಕ್ತಪಡಿಸಿರುವುದು ಸರಿಯಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಹೇಳಿದರು.


ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯಿಂದ ಪರಂಪರೆಗೆ ಧಕ್ಕೆ ಆಗುವುದಿಲ್ಲ. ಆದರೂ ಸಂಸದರು ವಿರೋಧ ವ್ಯಕ್ತಪಡಿಸುತ್ತಿರುವುದೇಕೆ ಎಂಬುದಕ್ಕೆ ಸ್ಪಷ್ಟನೆ ಕೊಡಬೇಕು. ನಾವು ಅಂಬಾವಿಲಾಸ ಅರಮನೆ ಕಟ್ಟಡದ ಮೇಲಾಗಲಿ ಅಥವಾ ಸಮೀಪದಲ್ಲಾಗಲಿ ಫ್ಲೈಓವರ್ ನಿರ್ಮಿಸುತ್ತಿದ್ದೇವೆಯೇ? ಯಾವುದೇ ಕಾರಣಕ್ಕೂ ಫ್ಲೈಓವರ್ ಯೋಜನೆಯಿಂದ ಸರ್ಕಾರ ಹಿಂದೆ ಸರಿಯಬಾರದು. ಜನರು ನಮ್ಮೊಂದಿಗಿದ್ದಾರೆ. ಯಾರೋ ಕೆಲವರ ಆಕ್ಷೇಪಗಳಿಗೆ ಮುಖ್ಯಮಂತ್ರಿಯವರು ಮಣೆ ಹಾಕಬಾರದು ಎಂದು ಒತ್ತಾಯಿಸಿದರು.
ವಿನೋಬಾ ರಸ್ತೆಯಲ್ಲಿ ಮೆಟ್ರೋಪೆÇೀಲ್ ಹೋಟೆಲ್ ಬಳಿಯ ಜಂಕ್ಷನ್‍ನಿಂದ ಹಿನಕಲ್‍ವರೆಗೆ (12 ಕಿ.ಮೀ.) ಫ್ಲೈಓವರ್ ನಿರ್ಮಾಣವಾದರೆ ಬಹಳ ಅನುಕೂಲ ಆಗುತ್ತದೆ. ಮೆಟ್ರೋಪೆÇೀಲ್‍ನಿಂದ ಹಿನಕಲ್ ಜಂಕ್ಷನ್‍ವರೆಗೆ ಪ್ರಸ್ತುತ ದಿನಕ್ಕೆ ಸರಾಸರಿ 60ಸಾವಿರ ವಾಹನಗಳು ಸಂಚರಿಸುತ್ತಿವೆ.


ಇದು ಮುಂದಿನ 10 ವರ್ಷಗಳಲ್ಲಿ 1.90 ಲಕ್ಷಕ್ಕೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ, ಪರ್ಯಾಯ ವ್ಯವಸ್ಥೆಗೆ ನಮ್ಮ ಸರ್ಕಾರ ಈಗಿನಿಂದಲೇ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.
ಈ ಮಾರ್ಗದಲ್ಲಿರುವ 12 ಸಿಗ್ನಲ್‍ಗಳನ್ನು ದಾಟಿ ಹಿನಕಲ್ ಜಂಕ್ಷನ್ ತಲುಪಲು 45 ನಿಮಿಷ ಬೇಕಾಗುತ್ತಿದೆ. ಫ್ಲೈಓವರ್ ನಿರ್ಮಾಣವಾದರೆ 5ರಿಂದ 7 ನಿಮಿಷಗಳಲ್ಲಿ ಕ್ರಮಿಸಬಹುದು. ಇದಕ್ಕಾಗಿ 15 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ. 212 ಮರಗಳನ್ನು ಕತ್ತರಿಸಬೇಕಾಗುತ್ತದೆ. ಹಳೆಯವು ಹಾಗೂ ಕೆಲವು ಬಸ್ ತಂಗುದಾಣ ಸೇರಿದಂತೆ 75 ಕಟ್ಟಡಗಳನ್ನು ತೆರವುಗೊಳಿಸಬೇಕಾಗುತ್ತದೆ. ಮೆಟ್ರೋರೈಲು ಸಂಚಾರಕ್ಕೂ ಅಗತ್ಯವಾದ ವ್ಯವಸ್ಥೆಯನ್ನು ಯೋಜನೆಯಲ್ಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ರಸ್ತೆಯಲ್ಲಿ ಕಳೆದ 3 ವರ್ಷಗಳಲ್ಲಿ 74 ಅಪಘಾತ ಸಂಭವಿಸಿದ್ದು, 11 ಮಂದಿ ಸಾವಿಗೀಡಾಗಿದ್ದು, 73 ಮಂದಿ ಗಾಯಗೊಂಡಿದ್ದಾರೆ. ಸಾವು-ನೋವು ತಡೆಯಲು ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳುವುದು ಅಗತ್ಯವಲ್ಲವೇ ಎಂದು ಪ್ರಶ್ನಿಸಿದರು.


ಈ ಕಾಮಗಾರಿಯನ್ನು 12 ತಿಂಗಳಲ್ಲಿ ನಿರ್ಮಾಣಕ್ಕೆ ಯೋಜಿಸಲಾಗಿದೆ. ನಿರ್ಮಾಣವಾದಲ್ಲಿ ವಾಹನ ಸವಾರರಿಂದ ಯಾವುದೇ ಟೋಲ್ ಸಂಗ್ರಹಿಸುವುದಿಲ್ಲ ಎಂದು ಹೇಳಿದರು.
ಗ್ರೇಟರ್ ಮೈಸೂರು ಆಗಲೇಬೇಕು. ನಗರದ ಸುತ್ತಮುತ್ತಲಿನ 60ಕ್ಕೂ ಹೆಚ್ಚು ಬಡಾವಣೆಗಳಿಗೂ ಮೂಲ ಸೌಕರ್ಯ ಕೊಡಬೇಕೋ, ಬೇಡವೋ? ಇದಕ್ಕೂ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.
ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದಾಗ ನಗರದ ಅಭಿವೃದ್ಧಿಗೆ 3,200 ಕೋಟಿ ಅನುದಾನ ಕೊಟ್ಟಿದ್ದರು. 2ನೇ ಬಾರಿಗೆ ಮುಖ್ಯಮಂತ್ರಿಯಾದ ನಂತರ ಇಲ್ಲಿಯವರೆಗೆ 3,500 ಕೋಟಿ ಒದಗಿಸಿದ್ದಾರೆ. ಇದನ್ನು ಸಹಿಸಲಾಗದ ಕೆಲವರು ಅವರನ್ನು ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.


ಮೈಸೂರು ನಗರವೊಂದರಲ್ಲೇ 15 ಆಸ್ಪತ್ರೆ ಕಟ್ಟಿಸಿಕೊಟ್ಟ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಈಗ, ಇಲ್ಲಿನ ಟ್ರಾಫಿಕ್ ವ್ಯವಸ್ಥೆ ಸರಿಪಡಿಸುವ ಉದ್ದೇಶದಿಂದ ಲೋಕೋಪಯೋಗಿ ಇಲಾಖೆ ಮೂಲಕ ನಗರದಲ್ಲಿ ಎರಡು ಫ್ಲೈಓವರ್ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದಾರೆ ಎಂದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ವಕ್ತಾರ ಮಹೇಶ್ ಇದ್ದರು.