
ಸಂಜೆವಾಣಿ ವಾರ್ತೆ
ಕೆ.ಆರ್.ನಗರ,ಫೆ.18:- ಜೆಡಿಎಸ್ ಪಕ್ಷವನ್ನು ಬಲಿಷ್ಟವಾಗಿ ಸಂಘಟನೆ ಮಾಡುವ ಮೂಲಕ 2028 ಕ್ಕೆ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷದ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಫೆಬ್ರವರಿ 18 ರಿಂದ ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಪಕ್ಷ ಬಲವರ್ಧನೆ ಮಾಡಲಿದ್ದಾರೆ ಎಂದು ಪುರಸಭೆ ಸದಸ್ಯ ಕೆ.ಉಮೇಶ್ ಹೇಳಿದರು.
ಪಟ್ಟಣದಲ್ಲಿ ಇದೇ ಫೆಬ್ರವರಿ 22 ಭಾನುವಾರ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯ ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಮೈಸೂರು ಜಿಲ್ಲೆಯಲ್ಲಿ ಜನರೊಂದಿಗೆ ಜನತಾದಳ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೇ ನೀಡಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದಿಂದ ಪಟ್ಟಣದಲ್ಲಿ ಪಾದಯಾತ್ರೆ ಮೂಲಕ ಕರಪತ್ರ ಹಂಚಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ಮೊದಲ ಹಂತದ ಪ್ರವಾಸದಲ್ಲಿ 58 ದಿನಗಳ ಕಾಲ ರಾಜ್ಯದ 9 ಸಾವಿರ ಕಿ.ಮೀ ದೂರ ಪ್ರವಾಸ ಕೈಗೊಂಡು 90 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿರುವ ರಾಜ್ಯದ ಜೆಡಿಎಸ್ ಯುವ ನಾಯಕ ನಿಖಿಲ್ಕುಮಾರಸ್ವಾಮಿ ಅವರು ಪ್ರವಾಸದ ವೇಳೆ ಪ್ರತಿ ಕಾರ್ಯಕರ್ತರನ್ನು ಭೇಟಿ ಮಾಡಿ. ಪಕ್ಷಕ್ಕಾಗಿ ದುಡಿಯುವ ತಳಮಟ್ಟದ ಕಾರ್ಯಕರ್ತರನ್ನು ಗುರುತಿಸುವ ಕೆಲಸ ಮಾಡಿದ್ದು ರಾಜ್ಯದ ಜೆಡಿಎಸ್ ಪಕ್ಷ ಸಂಘಟನೆಯಲ್ಲಿ ಸಂಚಲನ ಮೂಡಿಸಿದೆ ಎಂದರು.
ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವೈಫಲ್ಯಗಳನ್ನು ತೆರೆದಿಡುವ ಕೆಲಸ ಮಾಡಲಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ್ದು ನಾನು ಕೂಡ ದ್ವನಿಗೂಡಿಸಿ ಕೆ.ಆರ್ .ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಶಾಶ್ವತ ಕೆಲಸ ಏನೂ ಮಾಡಿದ್ದಾರೆ ಎಂಬುದನ್ನು ಕ್ಷೇತ್ರದ ಜನತೆಗೆ ಹೇಳ ಬೇಕೆಂಬುದನ್ನು ಒತ್ತಾಯ ಮಾಡುತ್ತೇನೆ ಎಂದು ತಿಳಿಸಿದರು.
ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಅನುದಾನವಿಲ್ಲದೆ, ತಾಲ್ಲೂಕಿನಲ್ಲಿ ಅಭಿವೃದ್ಧಿ ಕುರಿತು ಕ್ಷೇತ್ರದ ಮತದಾರರು ಪ್ರಶ್ನಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಸರ್ಕಾರದ ಆಡಳಿತ ಮೂರು ವರ್ಷ ಕಳೆದರೂ ಇನ್ನೂ ನಾನು ಸಿ.ಎಂ. ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಹೊರೆತು ಜನ ಸಾಮಾನ್ಯರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲದ ಸರ್ಕಾರವಾಗಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಕನಿಷ್ಠ 50 ಲಕ್ಷ ಜನ ಸದಸ್ಯರಾಗಬೇಕು ಎಂಬ ಗುರಿ ಇಟ್ಟುಕೊಂಡು ಮತ್ತೆ ಈ ಪಕ್ಷವನ್ನು ತಳ ಮಟ್ಟದಿಂದ ಪುಟಿದೇಳುವಂತೆ ಮಾಡಬೇಕು ಎಂಬ ಆಶಾ ಭಾವನೆಗಳೊಂದಿಗೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಪಕ್ಷ ಸಂಘಟನೆ ಜತೆಗೆ ಜೆಡಿಎಸ್ ಕಾರ್ಯಕರ್ತರ ಧ್ವನಿಯಾಗಿ ಪಕ್ಷ ಬಲಿಷ್ಠಗೊಳಿಸಿ ಯುವಕರನ್ನು ರಾಜಕೀಯ ಕ್ಷೇತ್ರಕ್ಕೆ ಕರೆತರುವ ಪ್ರಯತ್ನ ನಡೆದಿದೆ ಎಂದರು.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಿಮ್ಮನ್ನು ನೀವು ಗುರುತಿಸಿಕೊಳ್ಳುವ ಕೆಲಸ ಆಗ ಬೇಕಾಗಿದೆ.ಹಾಗಾಗಿ ನಿಮ್ಮ ಕೇರಿಗಳಲ್ಲಿ ಪಕ್ಷ ಕಟ್ಟುವ ಮೂಲಕ ಮನೆಯಿಂದ ಗ್ರಾಮ, ಹೋಬಳಿ ಮತ್ತು ತಾಲ್ಲೂಕಿನ ಹಂತದವರೆಗೆ ಪಕ್ಷ ಗಟ್ಟಿಗೊಳಿಸಿ. ಕ್ಷೇತ್ರದ ಅಧ್ಯಕ್ಷರು, ಮುಖಂಡರು ನಿಮ್ಮನ್ನು ಗುರುತಿಸಿ ಜವಾಬ್ದಾರಿ ನೀಡಲಿದ್ದಾರೆ ಎಂದು ತಿಳಿಸಿದರು.
ತಾ.ಜಾದಳ ಅಧ್ಯಕ್ಷ ಹಂಪಾಪುರ ಕುಮಾರ್, ಯುವ ಜೆಡಿಸ್ ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷ ಕಗ್ಗರೆ ಕುಚೇಲ, ತಾ.ಯುವ ಜೆಡಿಎಸ್ ಅಧ್ಯಕ್ಷ ಡಿ.ವಿ.ಗುಡಿ ಯೋಗೇಶ್, ನಗರ ಜಾದಳ ಅಧ್ಯಕ್ಷ ಸಂತೋಷ್ ಗೌಡ, ನಗರ ಜೆಡಿಎಸ್ ಮಹಿಳಾ ಘಟಕದ ಕಾರ್ಯದರ್ಶಿ ಭಾಗ್ಯಲಕ್ಷ್ಮಿ, ಪುರಸಭೆ ಮಾಜಿ ಅಧ್ಯಕ್ಷ ಡಿ.ಕಾಂತರಾಜ್, ಗೀತಾಮಹೇಶ್, ಮಾಜಿ ಸದಸ್ಯರಾದ ಕಗ್ಗರೆ ಗಿರೀಶ್, ಸುಬ್ರಮಣ್ಯ, ರಾಜಾ ಶ್ರೀಕಾಂತ್, ತಾ.ಜಾದಳ ವಕ್ತಾರ ಕೆ.ಎಲ್.ರಮೇಶ್, ತಾ.ಜಾದಳ ಹಿಂದುಳಿದ ವರ್ಗಗಳ ಅಧ್ಯಕ್ಷ ಕೃಷ್ಣಶೆಟ್ಟಿ, ಜೆಡಿಎಸ್ ಮುಖಂಡರಾದ ಹೆಬ್ಬಾಳು ಶಿವಣ್ಣ, ಮನುಗೌಡ, ಗುರು ಪ್ರಸಾದ್, ಅವಿನಾಶ್, ಶಿವಲಿಂಗೇಗೌಡ, ಮಲ್ಲಪ್ಪ, ವಿಜಯ್ ಸೇರಿದಂತೆ ಮೊಲದಲಾದವರು ಇದ್ದರು.

























