
ಪುತ್ತೂರು; ಕಳೆದ ೨೧ ವರ್ಷಗಳಿಂದ ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಹೆಜ್ಜೆಗುರುತನ್ನು ಸಾಧಿಸಿದ ದ್ವಾರಕಾ ಕಾರ್ಪೋರೇಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಪ್ರತೀ ವರ್ಷದಂತೆ ಈ ಬಾರಿಯೂ ಫೆ.೧ರಂದು ಪುತ್ತೂರಿನ ಮುಕ್ರಂಪಾಡಿ ಗೋಕುಲ ಬಡಾವಣೆಯಲ್ಲಿ ದ್ವಾರಕೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ದ್ವಾರಕ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಅರ್ತ್ಯಡ್ಕ ಗೋಪಾಲಕೃಷ್ಣ ಭಟ್ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ನಿಮ್ಮ ಮನೆಯ ಕನಸು ನಮ್ಮಲ್ಲಿ ನನಸು ಎಂಬ ಧ್ಯೇಯ ವಾಕ್ಯದಡಿಯಲ್ಲಿ ಕಾರ್ಯಾಚರಿಸುತ್ತಿರುವ ದ್ವಾರಕಾ ಸಂಸ್ಥೆ ಈಗಾಗಲೇ ೧೦ಕ್ಕಿಂತಲೂ ಹೆಚ್ಚು ಬಡಾವಣೆಗಳನ್ನು ನಿರ್ಮಿಸಿದೆ. ಗುಣಮಟ್ಟಕ್ಕೆ ಐಎಸ್‌ಒ ಪ್ರಮಾಣಪತ್ರವನ್ನೂ ಪಡೆದಿದೆ. ಹಿರಿಯ ನಾಗರಿಕರಿಗಾಗಿಯೇ ಉಪ್ಪಿನಂಗಡಿ ಸಮೀಪದ ಕೆಮ್ಮಾರ ಎಂಬಲ್ಲಿ ಉಜ್ಜೀವನ ಎಂಬ ಬಡಾವಣೆಯ ನಿರ್ಮಾಣ ನಡೆಯುತ್ತಿದೆ. ನಿರ್ಮಾಣದೊಂದಿಗೆ ಸಾಮಾಜಿಕ ಕ್ಷೇತ್ರದ ಸೇವೆಯ ದೃಷ್ಟಿಯಿಂದ ಯೋಗ, ಯಕ್ಷಗಾನ, ಸಂಗೀತ, ವೇದಪಾಠದ ಶಿಬಿರಗಳನ್ನು ಆಯೋಜಿಸುತ್ತಿದೆ. ಪಟ್ಟೆಯ ಶ್ರೀಕೃಷ್ಣ ವಿದ್ಯಾಸಂಸ್ಥೆಯ ಕನ್ನಡ ವಿಭಾಗವನ್ನು ದ್ವಾರಕಾ ಪ್ರತಿಷ್ಟಾನ ವಹಿಸಿಕೊಂಡು ನಡೆಸುತ್ತಿದೆ ಎಂದು ಅವರು ತಿಳಿಸಿದರು.
ದ್ವಾರಕಾ ಪ್ರತಿಷ್ಟಾನದ ಗೌರವಾಧ್ಯಕ್ಷ ಹರಿಕೃಷ್ಣ ಭಟ್ ಅರ್ತ್ಯಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ದ್ವಾರಕೋತ್ಸವ ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ವಕೀಲ ಮಹೇಶ್ ಕಜೆ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಲಾಗಿ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ, ನಿವೃತ್ತ ಪ್ರಾಂಶುಪಾಲ ಬಿ.ವಿ. ಸೂರ್ಯನಾರಾಯಣ ಭಾಗವಹಿಸಲಿದ್ದಾರೆ. ವೇದ ವಿದ್ವಾನ್ ಗಣೇಶ್ ಭಟ್ ಪರಕ್ಕಜೆ, ಡಾ.ಹರಿಕೃಷ್ಣ ಪಾಣಾಜೆ, ವಿದ್ವಾನ್ ದೀಪಕ್ ಕುಮಾರ್ ಹಾಗೂ ಉದ್ಯಮಿ ಮುರಳೀಕೃಷ್ಣ ಕಾಸರಗೋಡು ಅವರನ್ನು ಸನ್ಮಾನಿಸಲಾಗುವುದು. ನಿವೃತ್ತ ಪ್ರಾಂಶುಪಾಲ ಗಣರಾಜ ಕುಂಬ್ಳೆ ಗ್ರಂಥ ಅನಾವರಣ ಮಾಡಲಿದ್ದಾರೆ. ಕೃತಿಕಾರ ನವೀನ ಕೃಷ್ಣ ಎಸ್ ಉಪ್ಪಿನಂಗಡಿ ಭಾಗಿಯಾಗಲಿದ್ದಾರೆ.
ಕಾರ್ಯಕ್ರಮದಲ್ಲಿ ಸ್ವಾಲಂಬನೆಗಾಗಿ ಹೂಡಿಕೆ ವಿಚಾರ ಮಂಡನೆ ನಡೆಯಲಿದೆ. ವಿವೇಕಾನಂದ ಕಾಲೇಜಿನ ಡಾ.ವಿಜಯ ಸರಸ್ವತಿ, ಸಂಪನ್ಮೂಲ ವ್ಯಕ್ತಿ ಕುಂಬ್ಳೆ ನರಸಿಂಹ ಪ್ರಭು ಭಾಗವಹಿಸಲಿದ್ದಾರೆ. ಲಯವಾದ್ಯ ರಂಜಿನಿ, ಕಲಾರಾಧನೆ, ಗಾನ ರಸಧಾರೆ, ಶಂಭೋ ಸ್ವಯಂಭೊ ಭರತನಾಟ್ಯ ಹಾಗೂ ಭೂಮಿಪುತ್ರ ಯಕ್ಷಗಾನ ಕಾರ್ಯಕ್ರಮವನ್ನೂ ಅಳವಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಗೋಷ್ಟಿಯಲ್ಲಿ ದ್ವಾರಕಾ ಸಮೂಹಸಂಸ್ಥೆಯ ಕಾರ್ಯದರ್ಶಿ ಗಣರಾಜ ಕುಂಬ್ಳೆ, ಕಾರ್ಯವಾಹನ ನಿರ್ದೇಶಕ ಅಮೃತಕೃಷ್ಣ ಎನ್, ಕಾರ್ಯಕ್ರಮ ಮುಖ್ಯಸ್ಥ ದುರ್ಗಾ ಗಣೇಶ್ ಉಪಸ್ಥಿತರಿದ್ದರು.




























