ಫಿಲೋಮಿನಾ ಕಾಲೇಜಿನಲ್ಲಿ ಅತ್ಯಾಧುನಿಕ ‘ಟೆಕ್‌ಹಬ್ ಲೋಕಾರ್ಪಣೆ

ಪುತ್ತೂರು: ಡಿಜಿಟಲ್ ಸಾಕ್ಷರತೆ ಕೌಶಲ್ಯದ ಕೊರತೆಯಿಂದ ಬಹಳಷ್ಟು ವಿದ್ಯಾರ್ಥಿಗಳು ಉದ್ಯೋಗವಕಾಶದಿಂದ ವಂಚಿತರಾಗುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದಲ್ಲಿ ಮಹತ್ತರ ಬದಲಾವಣೆ ತರುವ ನಿಟ್ಟಿನಲ್ಲಿ ಫಿಲೋಮಿನಾ ಕಾಲೇಜಿನಲ್ಲಿ ಟೆಕ್‌ಹಬ್ ಸ್ಥಾಪನೆ ಮಾಡಲಾಗಿದೆ. ಇದಕ್ಕೆ ಯೂನಿಯನ್ ಬ್ಯಾಂಕ್ ಕೈಜೋಡಿಸುವ ಮೂಲಕ ವಿದ್ಯಾರ್ಥಿಗಳ ಬದುಕನ್ನು ಸಬಲೀಕರಣಗೊಳಿಸುವ ಅರ್ಥಪೂರ್ಣ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಸಂತಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಆಂಟನಿ ಪ್ರಕಾಶ್ ಮೊಂತೆರೊ ಹೇಳಿದರು.
ಅವರು ಫಿಲೋಮಿನಾ ಕಾಲೇಜಿನಲ್ಲಿ ಲೋಕಾರ್ಪಣೆಗೊಂಡ ಟೆಕ್‌ಹಬ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಯೂನಿಯನ್ ಬ್ಯಾಂಕ್ ಮಂಗಳೂರು ವಲಯದ ಡೆಪ್ಟಿ ಜನರಲ್ ಮ್ಯಾನೇಜರ್ ಸುನಿಲ್ ವಿ ಪಾಟೀಲ್ ಅವರು ಮಾತನಾಡಿ, ತಂತ್ರಜ್ಞಾನದ ಮೇಲೆ ನಾವು ಇಂದು ಮಾಡಿದ ಹೂಡಿಕೆಯು ಅತ್ಯಂತ ಸಮರ್ಪಕವಾದುದು. ಈ ಮೂಲಕ ನಾವು ಗ್ರಾಮೀಣ ವಿದ್ಯಾರ್ಥಿಗಳ ಡಿಜಿಟಲ್ ಸಬಲೀಕರಣಕ್ಕೆ ನಾಂದಿ ಹಾಡಿದ್ದೇವೆ. ಇದು ಕೇವಲ ಪ್ರಾರಂಭವಷ್ಡೇ, ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಉತ್ತಮ ಕಾರ್ಯಗಳಿಗೆ ಸಂತ ಫಿಲೋಮಿನಾ ಕಾಲೇಜಿನ ಜೊತೆಗೆ ಸಹಯೋಗ ಹೊಂದಲು ಉತ್ಸುಕರಾಗಿದ್ದೇವೆ. ಈ ಯೋಜನೆಯ ಮುಖಾಂತರ ವಿದ್ಯಾರ್ಥಿಗಳು ಆಧುನಿಕ ಕೌಶಲ್ಯಗಳನ್ನು ಅಳವಡಿಸಿಕೊಂಡು ಯಶಸ್ವಿಯಾಗಲಿ ಎಂದು ಹೇಳಿದರು,
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಯುನಿಯನ್ ಬ್ಯಾಂಕ್ ವಿಶ್ರಾಂತ ಡೆಪ್ಯುಟಿ ಜನರಲ್ ಮ್ಯಾನೇಜರ್ ರವೀಶ್ ನಾಯಕ್ ಅವರು ಮಾತನಾಡಿ, ಸಂತ ಫಿಲೋಮಿನಾ ಕಾಲೇಜು ಹಾಗೂ ಅಂದಿನ ಕಾರ್ಪೊರೇ಼ನ್ ಬ್ಯಾಂಕ್ ಗಳ ಒಡನಾಟವು ಸುಮಾರು ಐದು ದಶಕಗಳಿಗೂ ಹೆಚ್ಚಿನದಾಗಿದೆ. ವಿದ್ಯಾರ್ಥಿಗಳಿಗೆ ಮೌಲ್ಯಯುತ ಸಮಗ್ರ ಶಿಕ್ಷಣವನ್ನು ನೀಡುತ್ತಿರುವ ಸಂತ ಫಿಲೋಮಿನಾ ಕಾಲೇಜು ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ಜೊತೆಯಾಗಿ ಸೇರಿ ಸ್ಥಾಪಿಸಿದ ಈ ಟೆಕ್ ಹಬ್ ಮುಖಾಂತರ ವಿದ್ಯಾರ್ಥಿಗಳು ಅತ್ಯಾಧುನಿಕ ಐಟಿ ಕೌಶಲ್ಯಗಳಲ್ಲಿ ಪರಿಣಿತರಾಗಲಿ ಎಂದರು. ಯುನಿಯನ್ ಬ್ಯಾಂಕ್ ಸಂತ ಫಿಲೋಮಿನಾ ಕಾಲೇಜು ಶಾಖೆಯ ಪ್ರಬಂಧಕರಾದ ಅನುರಾಧ ಹೆಚ್ ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತನ್ವಿ ರೈ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಪರೀಕ್ಷಾಂಗ ಕುಲಸಚಿವರು ಹಾಗೂ ಕಂಪ್ಯೂಟ್ ಅಪ್ಲಿಕೇಶನ್ ವಿಭಾಗದ ಮುಖ್ಯಸ್ಥ ಡಾ| ವಿನಯಚಂದ್ರ ಸ್ವಾಗತಿಸಿ ಟೆಕ್ ಹಬ್ ಸ್ಥಾಪನೆಯ ಧ್ಯೇಯ, ಉದ್ದೇಶ ಹಾಗೂ ಟೆಕ್ ಹಬ್ ಮುಖಾಂತರ ಆಯೋಜಿಸಲ್ಪಡುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ರೂ.೫.೮೫ ಮೌಲ್ಯದ ೧೦ ಉತ್ತಮ ಗುಣಮಟ್ಟದ ಕಂಪ್ಯೂಟರ್‌ಗಳನ್ನು ಒಳಗೊಂಡ ಸುಸಜ್ಜಿತ ಪ್ರಯೋಗಾಲಯವೇ ಕಾಲೇಜಿನ ಟೆಕ್ ಹಬ್ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಅವರು ವಿನಂತಿಸಿದರು. ಕಂಪ್ಯೂಟ್ ಅಪ್ಲಿಕೇಶನ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅಕ್ಷತಾ ಬಿ ವಂದಿಸಿದರು. ಡಾ| ಗೀತಾ ಪೂರ್ಣಿಮಾ ಕೆ ಕಾರ್ಯಕ್ರಮ ನಿರೂಪಿಸಿದರು. ಯುನಿಯನ್ ಬ್ಯಾಂಕ್ ನ ಸೀನಿಯರ್ ಮ್ಯಾನೇಜರ್‌ಗಳಾದ ಚೇತನ್ ಅರೋರಾ, ಗ್ರೇಸಿ ಲೋಬೋ, ಬೊಳುವಾರು ಶಾಖೆಯ ಪ್ರಬಂಧಕರಾದ ವೈಆರ್ ಕುಮಾರ್, ಹಾಗೂ ಸಂತ ಫಿಲೋಮಿನಾ ಕಾಲೇಜು ಶಾಖೆಯ ಆಫೀಸರ್ ಉಮಾದೇವಿ ಎಂ, ಕಾಲೇಜಿನ ಪ್ರಾಧ್ಯಾಪಕ ವೃಂದ ಮತ್ತು ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಯುನಿಯನ್ ಬ್ಯಾಂಕ್ ನ ಪ್ರಾಯೋಜಕತ್ವದಲ್ಲಿ ಕಾಲೇಜಿನಲ್ಲಿ ಟೆಕ್ ಹಬ್ ಸ್ಥಾಪಿಸಿರುವುದಕ್ಕೆ ಸಂಚಾಲಕರಾದ ಅತಿ ವಂ| ಲಾರೆನ್ಸ್ ಮಸ್ಕರೇನಸ್ ಅವರು ಸಂತಸ ವ್ಯಕ್ತಪಡಿಸಿದರು.