
ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಜ.14: 2028ಕ್ಕೆ ಕುಮಾರಣ್ಣ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಅಭಿವೃದ್ದಿ ಪರ್ವಕ್ಕೆ ನಾಂದಿ ಹಾಡಲಿದ್ದಾರೆ ಎಂದು ಹಗರಿಬೊಮ್ಮನಹಳ್ಳಿ ಶಾಸಕ ಕೆ ನೇಮಿರಾಜ್ ನಾಯ್ಕ ಅಭಿಪ್ರಾಯಪಟ್ಟರು.
ಅವರು ಪಟ್ಟಣದಲ್ಲಿ 2022-23 ನೇ ಸಾಲಿನ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಹಂತ- 4 ರಲ್ಲಿ 210.50 ಲಕ್ಷರೂ.ಗಳ ನೂತನ ಪಟ್ಟಣ ಪಂಚಾಯಿತಿ ಕಟ್ಟಡ ಹಾಗೂ ಮರಿಯಮ್ಮನಹಳ್ಳಿ ತಾಂಡದ ಗ್ರಂಥಾಲಯ ನಿರ್ಮಾಣದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕ್ಷೇತ್ರವನ್ನು ನೀರಾವರಿ ಪ್ರದೇಶವನ್ನಾಗಿ ಮಾಡುವ ಮೂಲಕ ಕೃಷಿಗೆ ಹೆಚ್ಚು ಒತ್ತು ಕೊಡಲು ರಾಜ್ಯ ಸರಕಾರ 17 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 50:50 ಅಥವಾ 60:40 ಯಾವುದೇ ಅನುಪಾತದಲ್ಲಿ ಅನುದಾನ ಕೊಟ್ಟರೂ ಉಳಿದ ಅನುದಾನವನ್ನು ಕೇಂದ್ರ ಸರಕಾರದಿಂದ ತರುತ್ತೇವೆ. ಆದರೆ ರಾಜ್ಯ ಸರಕಾರ ಆಲಸ್ಯ ತೋರುತ್ತಿದೆ ಎಂದು ಆರೋಪಿಸಿದರು.
ನನ್ನ ಕ್ಷೇತ್ರದ 17 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ರಾಜ್ಯ ಸರಕಾರ ಅನುದಾನ ನೀಡುವಲ್ಲಿ ಮೀನ ಮೇಷ ಎಣಿಸುತ್ತಿದ್ದು ಕ್ಷೇತ್ರದ ನೀರಾವರಿ ವ್ಯವಸ್ಥೆಗೆ ತೊಡಕಾಗುತ್ತಿದೆ. 17 ಕೆರೆಗಳಲ್ಲಿ ಒಂದೊಂದು ಕೆರೆಗೆ 4 ಉಪಕೆರೆಗಳಿವೆ ಇದರಿಂದ ಕನಿಷ್ಠ 68 ಕೆರೆಗಳಿಗೆ ನೀರು ತುಂಬಿಸಿದಂತಾಗಲಿದ್ದು ಕೃಷಿಗೆ ಹೆಚ್ಚು ಒತ್ತು ಕೊಟ್ಟಂತಾಗುತ್ತದೆ. ಇದಕ್ಕೆ ಸರಕಾರ ಬೇಗ ಸ್ಪಂದಿಸ ಬೇಕಾಗಿದೆ ಎಂದರು.
ಅತಿ ಜರೂರಾಗಿ ಡಣಾಯಕನ ಕೆರೆಯಿಂದ ಗರಗ, ಡಣಾಪುರದಿಂದ ವೆಂಕಟಾಪುರ ರಸ್ತೆ ಸೇರಿದಂತೆ ಪೂರ್ಣ ಹದಗೆಟ್ಟ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಮೊದಲ ಪ್ರಾಧಾನ್ಯತೆಯನ್ನು ಕೊಡಲಾಗುವುದು. ಈಗಾಗಲೇ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಅಮೃತ -2 ಯೋಜನೆಯಡಿಯಲ್ಲಿ ಮನೆ ಮನೆಗೆ ನಳ ಹಾಕುವ ಕೆಲಸ ಹಾಗೂ ವಿದ್ಯುತ್ ಪೂರೈಕೆ ಕೆಲಸ ಭರದಿಂದ ಸಾಗುತ್ತಿದ್ದು ಶೀಘ್ರವಾಗಿ ಪೂರ್ಣಗೊಳಿಸಲು ಒತ್ತಾಯಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪ.ಪಂ.ಅಧ್ಯಕ್ಷ ಹುಸೇನ್ ಬಾಷ, ಮುಖ್ಯಾಧಿಕಾರಿ ಗರಡಿ ಕಳಕ ಮಲ್ಲೇಶ, ಪ.ಪಂ.ಸದಸ್ಯರಾದ ಮರಡಿ ಸುರೇಶ, ಬಿಎಂಎಸ್ ರಾಜೀವ್, ಮಹಮದ್, ಜೆಡಿಎಸ್ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ, ಮುಖಂಡರಾದ ಪಾಂಡುರಂಗ ಶೆಟ್ಟಿ, ಬಿ ಸುರೇಶ, ರೋಗಾಣಿ ಮಂಜುನಾಥ, ನಂದೀಶ, ಕಡ್ತರ್ ರಾಜಾಭಕ್ಷಿ, ಬಾಪುರಿ ಅಂಜಿನಿ ಹಾಗೂ ಇತರರು ಇದ್ದರು.






















