
ಪ್ರೇಕ್ಷಕರ ಹೃದಯ ಗೆದ್ದ ‘ಒಬ್ಬಂಟಿಯಾದೆ ನಾ’ ಹಾಡು
ಪ್ರೇಮಕಥೆಗಳ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನಸ್ಸು ಗೆದ್ದ ಸರಣಿ ‘ಲವ್ ಮಾಕ್ಟೇಲ್’ ಈಗ ಮೂರನೇ ಭಾಗದೊಂದಿಗೆ ಮತ್ತೆ ಸಂಚಲನ ಮೂಡಿಸಲು ಸಜ್ಜಾಗಿದೆ. ನಿರ್ದೇಶಕ ಹಾಗೂ ನಟ ಡಾರ್ಲಿಂಗ್ ಕೃಷ್ಣ ತಮ್ಮ ಅಭಿಮಾನಿಗಳಿಗೆ ಪ್ರೇಮಿಗಳ ದಿನದ ಉಡುಗೊರೆಯಾಗಿ ‘ಒಬ್ಬಂಟಿಯಾದೆ ನಾ’ ಎಂಬ ಲಿರಿಕಲ್ ವೀಡಿಯೋ ಹಾಡನ್ನು ಬಿಡುಗಡೆಗೊಳಿಸಿದ್ದು, ಈಗಾಗಲೇ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಮೆಚ್ಚುಗೆ ಗಳಿಸಿದೆ. ಟ್ರೈಲರ್‌ಗಾಗಿ ಕಾಯುತ್ತಿದ್ದ ಪ್ರೇಕ್ಷಕರಿಗೆ ಈ ಭಾವನಾತ್ಮಕ ಗೀತೆ ವಿಶೇಷ ಸಂತೋಷ ತಂದಿದೆ.
“ಮಾತು ಮೌನವಾಗಿದೆ… ಶೋಕ ಭಾವ ಮೂಡಿದೆ” ಎಂಬ ಸಾಲುಗಳಿಂದ ಆರಂಭವಾಗುವ ಈ ಹಾಡಿಗೆ ರಾಘವೇಂದ್ರ ಕಾಮತ್ ಸಾಹಿತ್ಯ ರಚಿಸಿದ್ದು, ಸಂಗೀತ ಸಂಯೋಜನೆ ಮತ್ತು ಗಾಯನವನ್ನು ನಕುಲ್ ಅಭಯಂಕರ್ ಮಾಡಿದ್ದಾರೆ. ಕೇಳುತ್ತಿದ್ದಂತೆಯೇ ಮನಸ್ಸಿಗೆ ತಾಕುವ ಈ ಗೀತೆ ಪ್ರೇಮಿಗಳ ದಿನದ ಹಂಗನ್ನು ಮತ್ತಷ್ಟು ಗಾಢಗೊಳಿಸಿದೆ. ಕೆಲ ಹಾಡುಗಳು ನಿಧಾನವಾಗಿ ಮನಸ್ಸಿಗೆ ಹತ್ತಿರವಾಗುತ್ತವೆ; ಇನ್ನೂ ಕೆಲವು ಹಾಡುಗಳು ಮೊದಲ ಕೇಳಿಕೆಯಲ್ಲೇ ಹೃದಯಕ್ಕೆ ತಟ್ಟುತ್ತವೆ. ‘ಒಬ್ಬಂಟಿಯಾದೆ ನಾ’ ಆ ಎರಡನೇ ವರ್ಗಕ್ಕೆ ಸೇರುವಂತಹ ಭಾವಪೂರ್ಣ ಗೀತೆಯೆಂದು ಕೇಳುಗರ ಅಭಿಪ್ರಾಯ.
ಲವ್ ಮಾಕ್ಟೇಲ್ ಸರಣಿಯ ಮೊದಲ ಭಾಗದಿಂದಲೇ ಹಾಡುಗಳಿಗೆ ವಿಶೇಷ ಮಹತ್ವ ನೀಡುತ್ತಿರುವ ಡಾರ್ಲಿಂಗ್ ಕೃಷ್ಣ, ಎರಡನೇ ಭಾಗದಲ್ಲಿಯೂ ಅದೇ ಮ್ಯಾಜಿಕ್ ಮುಂದುವರಿಸಿದ್ದರು. ಆ ಎರಡೂ ಭಾಗಗಳ ಯಶಸ್ಸಿನಲ್ಲಿ ಸಂಗೀತದ ಪಾತ್ರ ದೊಡ್ಡದಾಗಿತ್ತು. ಇದೀಗ ಮೂರನೇ ಭಾಗದಲ್ಲಿಯೂ ಅದೇ ಪರಂಪರೆ ಮುಂದುವರೆದಿದ್ದು, ಹಾಡುಗಳ ಮೂಲಕವೇ ಸಿನಿಮಾ ಪ್ರೇಕ್ಷಕರ ಹೃದಯಕ್ಕೆ ಇನ್ನಷ್ಟು ಹತ್ತಿರವಾಗಿದೆ.
ಕ್ರಿಸ್‌ಮಿ ಬ್ಯಾನರ್ ಅಡಿಯಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ನಿರ್ಮಿಸಿರುವ ಈ ಚಿತ್ರದಲ್ಲಿ ಇವರಿಬ್ಬರ ಜೊತೆಗೆ ಸಂವೃತ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.
ಹಾಡುಗಳ ಮೂಲಕ ಈಗಾಗಲೇ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿರುವ ‘ಲವ್ ಮಾಕ್ಟೇಲ್ 3’ ಇದೇ ಏಪ್ರಿಲ್ 10ರಂದು ರಾಜ್ಯಾದ್ಯಂತ ತೆರೆಗಾಣಲಿದ್ದು, ಈ ಬಾರಿ ಕೂಡ ಪ್ರೇಮ, ಸಂಬಂಧಗಳ ಭಾವನಾತ್ಮಕ ಪಯಣವನ್ನು ಮತ್ತಷ್ಟು ಗಾಢವಾಗಿ ತಲುಪಿಸಲಿದೆ ಎಂಬ ನಿರೀಕ್ಷೆ ಮೂಡಿಸಿದೆ.



























