ಪ್ರಸಿದ್ಧ ಅಮರನಾಥ ಯಾತ್ರೆಗೆ ಚಾಲನೆ


ಶ್ರೀನಗರ.ಜು.೨:ಇತಿಹಾಸ ಪ್ರಸಿದ್ಧ ಅಮರನಾಥ ಯಾತ್ರೆಗೆ ಇಂದು ಚಾಲನೆ ದೊರೆತಿದೆ. ಭಾರಿ ಬಿಗಿ ಭದ್ರತೆಯೊಂದಿಗೆ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗೌರ್‍ನರ್ ಮನೋಜ್‌ಸಿನ್ಹಾ ವಿಧ್ಯುಕ್ತ ಚಾಲನೆ ನೀಡಿದರು.
ಅಮರನಾಥಯಾತ್ರೆ ನಾಳೆಯಿಂದ ಆರಂಭವಾಗಲಿದ್ದು, ಇಂದು ಜಮ್ಮುವಿನ ಭಗವತಿ ನಗರದಲ್ಲಿ ೫,೮೮೦ ಭಕ್ತರಿದ್ದ ಮೊದಲ ಶಿಬಿರಕ್ಕೆ ಧ್ವಜ ಹಾರಿಸುವ ಮೂಲಕ ಚಾಲನೆ ದೊರೆತಿದೆ.
ನಾಳೆ ಬಾಳ್‌ಟಲ್ ಮತ್ತು ಪಹಲ್ಗಾಮ್ ಮಾರ್ಗದಿಂದ ಅಮರನಾಥ ಯಾತ್ರೆ ಅಧಿಕೃತವಾಗಿ ಪ್ರಾರಂಭವಾಗಲಿದೆ. ಆ. ೭ರವರೆಗೆ ೩೮ ದಿನಗಳ ಕಾಲ ಅಮರನಾಥ ಯಾತ್ರೆ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಕತುವಾದಿಂದ ಲಖನ್ ಪುರದಿಂದ ಪವಿತ್ರ ಗುಹೆಯವರೆಗೆ ೧ ಲಕ್ಷ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಜಮ್ಮು-ಶ್ರೀನಗರ ಹೆದ್ದಾರಿ ಸಾವಿರಾರು ಯಾತ್ರಿಕರಿಗೆ ಪ್ರಮುಖ ಮಾರ್ಗಗಳಲ್ಲಿ ಒಂದಾಗಿದ್ದು, ಮಾರ್ಗದುದ್ದಕ್ಕೂ ಸಿಆರ್‌ಪಿಎಫ್ ಕಣ್ಗಾವಲು ಹಾಕಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆ-೯ ಶ್ವಾನದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಉದಂಪುರ ವಲಯದ ಸೂಕ್ಷ್ಮ ಪ್ರದೇಶಗಳತ್ತ ವಿಶೇಷ ಗಸ್ತು ತಿರುಗುವಿಕೆ ನಡೆಸಲಾಗುತ್ತಿದೆ. ಈಗಾಗಲೇ ಪೊಲೀಸರು ಧಾರ್ಮಿಕ ಸಂಸ್ಥೆಗಳು, ಟ್ಯಾಕ್ಸಿ ಒಕ್ಕೂಟಗಳು, ವ್ಯಾಪಾರಿಗಳು ಮತ್ತು ಮಾರುಕಟ್ಟೆ ಮತ್ತು ಹೋಟೆಲ್ ಅಧಿಕಾರಿಗಳಿಂದ ಸಲಹೆ ಪಡೆದಿದ್ದಾರೆ.
ಅಮರನಾಥ ಯಾತ್ರಿಕರಿಗೆ ವಸತಿ ಹಾಗೂ ಆಹಾರ ಪೂರೈಕೆಯಲ್ಲಿ ಸಮಸ್ಯೆ ಉಂಟಾಗದಂತೆ ಕುಡಿಯುವ ನೀರು, ವಿದ್ಯುತ್ ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದರು.
ಕತುವಾದ ಲಖನ್‌ಪುರದಿಂದ ಲಂಬಾರ್ ಮತ್ತು ರಾಮ್‌ಬನ್‌ನ ಬನಿಹಾಲ್‌ಗೆ ಯಾತ್ರೆಯ ಮಾರ್ಗದಲ್ಲಿರುವ ಜಿಲ್ಲೆಗಳ ವಸತಿ ಕೇಂದ್ರಗಳಲ್ಲಿ ಯಾತ್ರಿಕರಿಗೆ ಬೇಸ್‌ಕ್ಯಾಂಪ್‌ನಲ್ಲಿ ಎಸಿ ಹಾಲ್, ಹ್ಯಾಂಗರ್, ಸಮುದಾಯ ಲಂಗರ್ ಸೇವೆ, ಸ್ವಚ್ಛ ಮೊಬೈಲ್ ಶೌಚಾಲಯಗಳನ್ನು ಒದಗಿಸಲಾಗಿದೆ. ಜು. ೧ ರಿಂದ ಆಫ್‌ಲೈನ್ ನೋಂದಣಿ ಆರಂಭವಾಗಿದೆ.