ಪ್ರತಿ ತಾಲೂಕುಗಳಲ್ಲೂ ಗ್ರಾಮೋತ್ಸವ ನಡೆಯಬೇಕು: ರಾಮಲಿಂಗಾ ರೆಡ್ಡಿ

ಬೈಂದೂರು: ನಾಡಿನ ಪ್ರಸಿದ್ಧ ಯಾತ್ರಾ ಮತ್ತು ಪುಣ್ಯ ಕ್ಷೇತ್ರಗಳಾದ ಕೊಲ್ಲೂರು ಹಾಗೂ ಕುಕ್ಕೆ ಕ್ಷೇತ್ರಗಳನ್ನು ಪ್ರವಾಸೋದ್ಯಮ ಮತ್ತು ಧಾರ್ಮಿಕವಾಗಿ ಸಮಗ್ರ ಅಭಿವೃದ್ದಿಗಾಗಿ ಮಾಸ್ಟರ್ ಪ್ಲಾನ್ ರೂಪಿಸಲಾಗುತ್ತಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಶನಿವಾರ ಇಲ್ಲಿನ ಬೈಂದೂರುನಲ್ಲಿ ೩ ದಿನಗಳ ಕಾಲ ನಡೆಯಲಿರುವ ಬೈಂದೂರು ಉತ್ಸವ -೨೦೨೬ರ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.ಬೈಂದೂರು ಉತ್ಸವದ ಪರಿಕಲ್ಪನೆ ಮಾದರಿಯಾಗಿದೆ. ಇಂತಹ ಉತ್ಸವಗಳನ್ನು ರಾಜ್ಯದ ಪ್ರತಿ ತಾಲೂಕುಗಳಲ್ಲಿ ೨-೩ ವರ್ಷಗಳಿಗೊಮ್ಮೆ ಆಯೋಜಿಸಿದಾಗ ಜನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆ, ಸವಲತ್ತುಗಳ ಅರಿವು ಆಗುವ ಜೊತೆಗೆ ಅದರ ಲಾಭ ಕೂಡ ದೊರೆಯುತ್ತದೆ ಎಂದು ಹೇಳಿದರು,
ಉತ್ಸವವನ್ನುಉದ್ಘಾಟಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು,
ಈ ಗ್ರಾಮೋತ್ಸವದಿಂದ ಗ್ರಾಮಾಭಿವೃದ್ದಿಯ ಕಲ್ಪನೆ ಸಾಕಾರವಾಗಿದೆ. ಧರ್ಮಸ್ಥಳ ಕ್ಷೇತ್ರವು ಗ್ರಾಮಾಭಿವೃದ್ದಿಗೆ ಬೆಂಗಾವಲಾಗಿ ನಿಂತಿದ್ದು ೧೩೧ ಕೋಟಿ ರು. ಸಾಲವನ್ನು ಬ್ಯಾಂಕ್ ಗಳ ಮೂಲಕ ನೀಡಿದೆ. ಗ್ರಾಮಾಭಿವೃದ್ದಿ ಯೋಜನೆಯಡಿ ೫.೦೫ ಲಕ್ಷ ರು.ಗಳನ್ನು ಲಾಭಾಂಶವಾಗಿ ಯೋಜನೆಯ ಫಲನಾಭವಿಗಳಿಗೆ ನೀಡಲಾಗಿದೆ. ಸುಮಾರು ೨೦೦ಕ್ಕೂ ಹೆಚ್ಚು ಮದ್ಯ ವ್ಯಸನಿಗಳು ಮದ್ಯಪಾನದಿಂದ ಮುಕ್ತರಾಗಿ ಒಳ್ಳೆಯ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.
ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಮಾತನಾಡಿ, ನಂಜುಡಪ್ಪ ವರದಿಯ ಪ್ರಕಾರ ಬೈಂದೂರು ಅತ್ಯಂತ ಹಿಂದುಳಿದ ತಾಲೂಕಾಗಿತ್ತು. ಬೈಂದೂರು ಉತ್ಸವದಂತಹ ಕಾರ್ಯಕ್ರಮಗಳು ತಾಲೂಕಿನ ಅಭಿವೃದ್ದಿಗೆ ಕಾರಣವಾಗಿವೆ. ಬೈಂದೂರಿನಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ರೈಲು, ರಸ್ತೆ, ಜಲ ಸಾರಿಗೆ ಸೇರಿದಂತೆ ಇಲ್ಲಿನ ಮೂಲ ಸೌಕರ್ಯಗಳನ್ನು ಅಭಿವೃದ್ದಿಗೊಳಿಸಿ ತಾಲೂಕಿನ ಪ್ರವಾಸೋದ್ಯಮಕ್ಕೆ ಬಲ ತುಂಬಿ ಪ್ರವಾಸಿಗರನ್ನು ಸೆಳೆಯಲು ಬೈಂದೂರು ಉತ್ಸವದಂತಹ ಕಾರ್ಯಕ್ರಮಗಳು ಸಹಕಾರಿ ಎಂದರು. ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮದ ಅಭಿವೃದ್ದಿಯಿಂದ ಕ್ಷೇತ್ರದ ಅಭಿವೃದ್ದಿ ಎನ್ನುವ ಧ್ಯೇಯದೊಂದಿಗೆ ತಾಲೂಕಿನ ೪೩ ಗ್ರಾಮಗಳಲ್ಲೂ ಗ್ರಾಮೋತ್ಸವಗಳನ್ನು ಆಯೋಜಿಸಿ ಸರಕಾರದ ಎಲ್ಲ ಇಲಾಖೆಗಳು ಜನರ ಮನೆ ಬಾಗಿಲಿಗೆ ತಲುಪುವಂತೆ ಮಾಡಲಾಗಿದ್ದು, ಅಭೂತಪೂರ್ವ ಜನಸ್ಪಂದನೆ ದೊರೆಕಿದೆ. ಜಿಲ್ಲೆಯ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮುತುವರ್ಜಿ, ಜಿಲ್ಲಾಡಳಿತ, ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಸಂಜೀವಿನಿ ಒಕ್ಕೂಟಗಳ ಬೆಂಬಲದಿಂದ ಯಶಸ್ವಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಕುಂದಾಪುರ ಶಾಸಕ ಕಿರಣ ಕುಮಾರ್ ಕೊಡ್ಗಿ, ಮಾಜಿ ಶಾಸಕ ಗೋಪಾಲ ಪೂಜಾರಿ, ಕೊಲ್ಲೂರು ದೇವಳದ ಪ್ರಧಾನ ಅರ್ಚಕರಾದ ಕೆ.ರಾಮಚಂದ್ರ ಅಡಿಗ, ಕೆ.ಎನ್ ಶ್ರೀಧರ ಅಡಿಗ, ಕೆ.ಎನ್. ಸುಬ್ರಹ್ಮಣ್ಯ ಅಡಿಗ, ಬಿಜೆಪಿ ಮಂಡಲಾಧ್ಯಕ್ಷೆ ಅನಿತಾ ಆರ್.ಕೆ., ಬಿ.ಸಿ. ಟ್ರಸ್ಟ್ ಧರ್ಮಸ್ಥಳದ ಅನೀಲ್ ಕುಮಾರ್., ಉದ್ಯಮಿ ವೆಂಕಟೇಶ ಕಿಣಿ ಬೈಂದೂರು ಮತ್ತಿತರರು ಉಪಸ್ಥಿತರಿದ್ದರು.