ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಪ್ರತಿಭೆಯಿದೆ: ರಾಮಕೃಷ್ಣೇಗೌಡ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಅ.25:
ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಒಂದೊಂದು ಸುಪ್ತ ಪ್ರತಿಭೆಯಿದೆ. ವಿದ್ಯಾರ್ಥಿ ದೆಸೆಯಲ್ಲಿಯೇ ಸುಪ್ತ ಪ್ರತಿಭೆಯ ಅನಾವರಣಕ್ಕೆ ಅಗತ್ಯ ವೇದಿಕೆ ಸಿದ್ದಗೊಳ್ಳಬೇಕು. ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸಾಧನೆಗಳ ಮೂಲಕ ತಮ್ಮ ಬದುಕಿನ ಕುರುಹುಗಳನ್ನು ಬಿಟ್ಟು ಹೋಗಬೇಕೆಂದು ಆದಿಚುಂಚನಗಿರಿಯ ಹೇಮಗಿರಿ ಶಾಖಾ ಮಠದ ಗೌರವ ಕಾರ್ಯದರ್ಶಿಗಳಾದ ಡಾ.ಜೆ.ಎನ್.ರಾಮಕೃಷ್ಣೇಗೌಡ ಕರೆ ನೀಡಿದರು.

ಅವರು ಪಟ್ಟಣದ ಕಲ್ಪತರು ಪ್ರಥಮ ದರ್ಜೆ ಕಾಲೇಜಿನ 2025-26ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು, ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ಬಿಎ, ಬಿಕಾಂ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ಆಯೋಜಿಸಿದ್ದ ಸ್ವಾಗತ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕು. ಸಂಸ್ಕಾರದ ತಳಹದಿಯ ಮೇಲೆ ನಮ್ಮ ಶೈಕ್ಷಣಿಕ ಪರಿಸರವನ್ನು ನಿರ್ಮಿಸಬೇಕು. ವ್ಶೆಜ್ಞಾನಿಕ ಚಿಂತನೆಗಳ ತಳಹದಿಯ ಮೇಲೆ ಸುಸಂಸ್ಕೃತ ಮನಸ್ಸುಗಳ ಸೃಷ್ಠಿಯಾಗಬೇಕೆಂದು ಕರೆ ನೀಡಿದ ಡಾ.ಜೆ.ಎನ್.ರಾಮಕೃಷ್ಣೇಗೌಡ ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳು ಕಲಿಕಾ ಶ್ರದ್ದೆಯನ್ನು ಬೆಳೆಸಿಕೊಳ್ಳಬೇಕೆಂದರು. ಕಲಿಕೆ ಎಂದಿಗೂ ಒತ್ತಡವಾಗಬಾರದು. ಶ್ರದ್ದೆ, ಭಕ್ತಿ ಮತ್ತು ಪ್ರೀತಿಯಿಂದ ಅಧ್ಯಯನ ಮಾಡಬೇಕು.

ಕಲಿಕಾ ಹಂತದಲ್ಲಿ ವಿದ್ಯಾರ್ಥಿಗಳು ಯಾವುದೇ ರೀತಿಯ ಬಾಹ್ಯ ಆಸೆ-ಆಮಿಷಗಳಿಗೆ ಒಳಗಾಗಬಾರದು. ವಿದ್ಯಾರ್ಥಿ ಜೀವನ ನಿಮ್ಮ ಬದುಕಿನ ಯಶಸ್ಸಿನ ಸೋಪಾನವಾಗಬೇಕು. ವಿದ್ಯಾರ್ಥಿ ಜೀವನದಲ್ಲಿ ದಾರಿ ತಪ್ಪಿದರೆ ಬದುಕಿನ ಪೂರ್ತಿ ನೀವು ಸಂಕಷ್ಠ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಕಲ್ಪತರು ಪ್ರಥಮ ದರ್ಜೆ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ವಿಠಲಾಪುರ ಜಯರಾಮ್ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಎಂ.ಕೆ. ಹರಿಚರಣ ತಿಲಕ್, ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಪ್ರೌಢಶಾಲಾ ಅಧ್ಯಾಪಕ ಮಂಜುನಾಥ್, ತಾಲೂಕು ವಿತರಕರ ಸಂಘದ ಅಧ್ಯಕ್ಷ ಕೆ.ಎಸ್.ರಾಜೇಶ್, ಕಾಲೇಜಿನ ಪ್ರಾಂಶುಪಾಲೆ ಅಮೃತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.