ಪ್ರಗತಿಪರ ಸಂಘಟನೆಗಳ ಒಕ್ಕೂಟದ ಖಂಡನೆ

ಸಂಜೆವಾಣಿ ನ್ಯೂಸ್
ಮೈಸೂರು: ಅ.09:-
ಪ್ರಗತಿಪರ ಸಂಘಟನೆಗಳು, ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಮುಂಭಾಗ ಪ್ರತಿಭಟನೆ ನಡೆಸುವ ಮೂಲಕ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್ ಅವರ ನಡೆಯನ್ನು ಖಂಡಿಸಿದರು.


ಗಾಂಧಿಪುತ್ಥಳಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ನಾನಾ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವ್ಯಕ್ತಪಡಿಸಿದರು. ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ಮಾತನಾಡಿ,ದೇಶದಲ್ಲಿ ಪ್ರಜಾಪ್ರಭುತ್ವ,ಜಾತ್ಯತೀತ ವ್ಯವಸ್ಥೆಯನ್ನು ನಾಶ ಮಾಡಿ ಮನುವಾದವನ್ನು ಮರುಸ್ಥಾಪಿಸಲು ಮುಂದಾಗಿರುವುದು ದೊಡ್ಡ ಅಪಾಯಕಾರಿ. ಆರ್‍ಎಸ್‍ಎಸ್‍ಗೆ ನೂರು ವರ್ಷಗಳು ಮುಗಿದಿದೆ ಎನ್ನುವಂತೆ ಶತಮಾನೋತ್ಸವ ಆಚರಣೆ ಮಾಡಲಾಗುತ್ತಿದೆ. ಈ ಸಂಘಟನೆಯು ಯಾವಾಗ ನೋಂದಣಿಯಾಗಿದೆ, ಈ ಸಂಘಟನೆಗೆ ಬರುವ ಹಣದ ಮೂಲ ಯಾವುದು ಎಂಬುದು ಗೊತ್ತಾಗಬೇಕಾಗಿದೆ ಎಂದು ಹೇಳಿದರು.
ದೇಶದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯ ಮೇಲೆ ಶೂ ಎಸೆದು ಅಪಮಾನಿಸುವಂತಹ ಘಟನೆ ನಾಚಿಕೆಗೇಡು. ಮನುವಾದದ ಮನಸ್ಸಿನವರು ಇಂದಿಗೂ ತಮ್ಮ ವಿಷವನ್ನು ಕಾರುತ್ತಿದ್ದಾರೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ ಎಂದು ಕಿಡಿಕಾರಿದರು.


ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾರ್ಧನ್(ಜನ್ನಿ)ಮಾತನಾಡಿ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇಂದಿಗೂ ನ್ಯಾಯಾಂಗದ ಮೇಲೆ ಜನರು ಗೌರವ ಹೊಂದಿದ್ದಾರೆ. ಅಂತಹ ಸ್ಥಾನದಲ್ಲಿ ಕುಳಿತಿರುವ ವ್ಯಕ್ತಿಯ ಮೇಲೆ ಶೂ ಎಸೆದಿದ್ದು ಅತ್ಯಂತ ಖಂಡನೀಯ. ದೇಶದ ಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು. ವಕೀಲ ರಾಕೇಶ್ ಕುಮಾರ್ ಅವರನ್ನು ತಕ್ಷಣವೇ ಬಂಧಿಸಬೇಕು. ಒಬ್ಬ ನ್ಯಾಯಮೂರ್ತಿಗೆ ಈ ರೀತಿಯ ಅಗೌರವ ತೋರಿಸುವ ಮನುವಾದಿ ಮನಸ್ಸಿನವರು ಬೇರೆಯವರ ಬಗ್ಗೆಇನ್ನೆಷ್ಟು ಅಗೌರವ ತೋರಲ್ಲ ಎಂದು ಆರೋಪಿಸಿದರು.
ಲೀಡ್ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಕೆ.ಎನ್.ಶಿವಲಿಂಗಯ್ಯ,ಅಹಿಂದ ಜವರಪ್ಪ, ಸವಿತ ಮಲ್ಲೇಶ್, ಟಿ.ಗುರುರಾಜ್, ಪೆÇ್ರ.ಪಂಡಿತಾರಾಧ್ಯ, ಪೆÇ್ರ.ಕೆ.ಎಂ.ಜಯರಾಮಯ್ಯ, ಲಕ್ಷ್ಮಣ್ ಹೊಸಕೋಟೆ, ಹರಿಹರ ಆನಂದಸ್ವಾಮಿ, ಕೆ.ಆರ್.ಗೋಪಾಲಕೃಷ್ಣ, ಜಯರಾಮ್, ಜಗದೀಶ್ ಸೂರ್ಯ, ಹೊಸಕೋಟೆ ಬಸವರಾಜು, ಉಗ್ರನರಸಿಂಹೇಗೌಡ, ಸುಬ್ರಹ್ಮಣ್ಯ ಮತ್ತಿತರರು ಪಾಲ್ಗೊಂಡಿದ್ದರು.