Home ಜಿಲ್ಲೆ ಮಂಗಳೂರು ಪ್ರಕೃತಿ ರಕ್ಷಣೆಯ ಸಾರ ತುಳುವರ ‘ಕೆಡ್ಡಸ’

ಪ್ರಕೃತಿ ರಕ್ಷಣೆಯ ಸಾರ ತುಳುವರ ‘ಕೆಡ್ಡಸ’

ಮೇಘಾ ಪಾಲೆತ್ತಾಡಿ
ಪುತ್ತೂರು; ತುಳುನಾಡಿನಲ್ಲಿನ ಆಚರಣೆಗಳು ಒಂದಕ್ಕೊಂದು ವಿಭಿನ್ನ. ಇಲ್ಲಿನ ಪ್ರತಿಯೊಂದು ಆಚರಣೆಗಳು ಪ್ರಕೃತಿಯೊಂದಿಗೆ ಮಿಳಿತವಾಗಿದೆ. ಬಹುತೇಕ ಕೃಷಿಕರೇ ತುಂಬಿರುವ ತುಳುನಾಡಿನ ಇಂತಹ ಆಚರಣೆಗಳು ಸಂಪ್ರದಾಯ ಮಾತ್ರವಲ್ಲ. ಸಮಾಜಕ್ಕೆ ಉತ್ತಮ ಸಂದೇಶವನ್ನೂ ನೀಡುವಂತಾಗಿದೆ. ಇಂತಹ ಆಚರಣೆಗಳಲ್ಲಿ ಕೆಡ್ಡಸ ಕೂಡಾ ಒಂದಾಗಿದೆ.
ತುಳುನಾಡಿನಲ್ಲಿ ಹೆಣ್ಣಿಗೆ ವಿಶೇಷವಾದ ಸ್ಥಾನಮಾನವಿದೆ. ತಾನು ಉತ್ತು ಬಿತ್ತಿ ಬೆಳೆಯುವ ಭೂಮಿ ಕೂಡಾ ಹೆಣ್ಣೆಂದು ಭಾವಿಸುವ ತುಳುವರು ಈ ಭೂಮಿಯ ಸಮೃದ್ಧತೆಗಾಗಿ ಆಚರಿಸುವ ಕೆಡ್ಡಸ ಅನ್ನುವ ಆಚರಣೆಗೆ ತುಂಬಾ ಮಹತ್ವವಿದೆ. ಭೂಮಿಯ ಋತುಸ್ರಾವವನ್ನು ಸಂಭ್ರಮಿಸುವ ಈ ಆಚರಣೆ ಪ್ರಕೃತಿಯನ್ನು ಆರಾಧಿಸುವ ಚಿಂತನೆಯಾಗಿದೆ.
ಸಾಮಾನ್ಯವಾಗಿ ಮನೆಯ ಹುಡುಗಿ ದೊಡ್ಡವಳಾದಾಗ ಆಕೆಯನ್ನು ಮದುಮಗಳಾಗಿ ಸಿಂಗರಿಸಿ ಅಕ್ಕಪಕ್ಕದ ನೆರಹೊರೆಯವರು ಸಂಬಂಧಿಕರನ್ನು ಕರೆಸಿ ಪುಟ್ಟ ಮಗಳಿಗೆ ಸೀರೆ ಉಡಿಸಿ ಸಂಭ್ರಮಿಸುವುದು ತುಳುವರ ಅನಾದಿ ಕಾಲದಿಂದ ನಡೆದುಬಂದ ಪರಂಪರೆ. ದೊಡ್ಡವಳಾದ ಮಗಳಿಗೆ ಎಳನೀರು, ಸಿಹಿತಿಂಡಿ ನೀಡಿ ಆಕೆಯನ್ನು ಸದೃಢಗೊಳಿಸುವ ಜತೆಗೆ ಅರಶಿನ, ಕುಂಕುಮ, ತಲೆಗೆ ತೆಂಗಿನ ಎಣ್ಣೆ, ಸ್ವಾನದ ನೀರಿಗೆ ಹಲಸಿನ ಎಲೆ, ಮಾವಿನ ಎಲೆಗಳನ್ನು ಹಾಕಿ ಸ್ನಾನ ಮಾಡಿಸುವ ಆಚರಣೆ ಮನೆ ಮಂದಿಗೆ ಕುಷಿ ಕೊಡುತ್ತದೆ. ಹೊಸ ಬಟ್ಟೆ ಉಟ್ಟು ಮಗಳು ಬದಲಾದ ರೀತಿಯಲ್ಲಿ ಕಂಡಾಗ ಮನೆಯವರಿಗೆ ಅತ್ಯಂತ ಸಂತಸ ನೀಡುವ ವ್ಯವಸ್ಥೆಯೊಂದು ನಿರ್ಮಾಣವಾಗುತ್ತದೆ. ಇದೇ ಮಾದರಿಯಲ್ಲಿ ಭೂ ತಾಯಿಯೂ ದೊಡ್ಡವಳಾಗುತ್ತಾಳೆ ಎಂಬ ಕಲ್ಪನೆಯೊಂದಿಗೆ ಪ್ರಕೃತಿಯನ್ನು ನೋಡುವ ತುಳನಾಡಿನ ಜನತೆ ಈ ವಿಶೇಷ ಆಚರಣೆಯನ್ನು ಆಚರಿಸುತ್ತಲೇ ಬಂದಿದ್ದಾರೆ.
ಜಗತ್ತಿನಲ್ಲಾಗುವ ಬದಲಾವಣೆ ರಾತ್ರಿ ಹಗಲು, ಋತುಮಾನ, ಮಳೆ ಚಳಿ ಬಿಸಿಲು ಹುಣ್ಣಿಮೆ, ಅಮಾವಾಸ್ಯೆ ಇದೆಲ್ಲವೂ ನಮ್ಮ ಬಾಹ್ಯ ಅರಿವಿಗೆ ಬರುವ ವಿಚಾರಗಳು. ಆದರೆ ಉತ್ತರಾಯಣ ಸಂಕ್ರಮಣ ಯೋಚನೆಗೆ ಮಾತ್ರ ನಿಲುವಂತಹ ಸಂಗತಿಗಳು. ಭೂ ತಾಯಿಯ ಈ ಋತುಸ್ರಾವದ ದಿನಗಳಲ್ಲಿ ಪ್ರಕೃತಿಯಲ್ಲೂ ಸಾಕಷ್ಟು ಬದಲಾವಣೆಗಳಾಗುತ್ತವೆ. ಇಂತಹ ದಿನಗಳನ್ನು ತುಳುವರು ಮೂರುದಿನಗಳ ಕಾಲ ಆಚರಿಸುತ್ತಾರೆ. ಫೆಬ್ರವರಿ ತಿಂಗಳಲ್ಲಿ ಮಕರ ಮಾಸದ ಇಪ್ಪತ್ತೇಳನೇ ದಿನ ಸಂಜೆಯಿಂದ ಕುಂಭಸಂಕ್ರಮಣದ ತನಕ ಮೊದಲ ಕೆಡ್ಡಸ, ನಡು ಕೆಡ್ಡಸ ಹಾಗೂ ಕಡೆ ಕೆಡ್ಡಸ ಎಂದು ಆಚರಿಸಲಾಗುತ್ತದೆ.
ಮನೆಯ ಮಂದಿನ ತುಳಸಿ ಕಟ್ಟೆಯ ಎದುರು ಭಾಗದಲ್ಲಿ ಗೋಮಯದಿಂದ ಶುದ್ಧಗೊಳಿಸಿ ಮಾವಿನ ಎಲೆ, ಹಲಸಿನ ಎಲೆ, ಎಣ್ಣೆ, ಅರಶಿನ, ಸೀಗೆ ಇಟ್ಟು ಭೂ ತಾಯಿಯನ್ನು ಸ್ನಾನಕ್ಕೆ ಕಳಿಸುವ ಈ ಕಾರ್ಯಕ್ಕೆ ತುಳುವರು ಭೂಮಿಗ್ ಎಣ್ಣೆ ಮೈಪುನೆ ಎಂದು ಹೆಸರಿಟ್ಟು ಭೂ ತಾಯಿ ದೊಡ್ಡವಳಾಗಿದ್ದಾಳೆ ಎಂದು ಭಾವಿಸುವ ಹಾಗೂ ಪೂಜಿಸುವ ಕಾರ್ಯ ಮಾಡುತ್ತಾರೆ. ಇದಕ್ಕೆ ಪೂರಕವಾಗಿ ಮಾವು ಹಲಸು ಗೇರು ಮರಗಳು ಫಲಬಿಟ್ಟು ಭೂ ತಾಯಿಯ ಈ ಋತುಸ್ರಾವವನ್ನು ಸಾಕ್ಷೀಕರಿಸುವ ಕೆಲಸವೂ ಪ್ರಕೃತಿಯಿಂದಾಗುತ್ತದೆ.
ಭೂಮಿಗೆ ನೋವು ನಿಷಿದ್ಧ
ಭೂಮಿ ತಾಯಿಯನ್ನೇ ನಂಬಿ ಬದುಕುವ ತುಳುವರು ಕೆಡ್ಡಸದ ಸಮಯದಲ್ಲಿ ಭೂಮಿಗೆ ನೋವು ಉಂಟು ಮಾಡುವುದಿಲ್ಲ. ಸಾಮಾನ್ಯವಾಗಿ ಪಂಚಭೂತಗಳನ್ನು ಆರಾಧಿಸುವ ತುಳುವರು ಭೂಮಿಯನ್ನು ಅಗೆಯುವ, ಯುಳುವ, ಮರಗಳನ್ನು ಕಡಿಯುವ ಯಾವ ಕಾರ್ಯಗಳಿಗೂ ಮುಂದಾಗುವುದಿಲ್ಲ. ಋತುಮತಿಯಾಗುವ ಭೂತಾಯಿಯನ್ನು ನೋವಿಗೀಡು ಮಾಡಬಾರದು ಎಂಬ ನಂಬಿಕೆ ಇದರ ಮೂಲವಾಗಿದೆ. ಕೆಡ್ಡಸ ಎಂದರೆ ಕನ್ನಡದಲ್ಲಿ ನೆಲ ಅಗೆಯುವುದು ನಿಷೇಧ ಎಂಬ ಅರ್ಥ ಕೊಡುತ್ತದೆ. ಆ ತಿಳುವಳಿಕೆಯನ್ನು ಅರಿತುಕೊಂಡ ಹಿರಿಯರು ಆಚರಣೆಯ ಮೂಲಕ ಪ್ರಕೃತಿಯನ್ನು ಕಾಪಾಡುವ ಚಿಂತನೆಯಲ್ಲಿ ಇದೂ ಒಂದಾಗಿದೆ. ಪ್ರಕೃತಿಯ ಮೇಲಿನ ಶೋಷಣೆಯನ್ನು ತಡೆಹಿಡಿಯುವ ಹಿರಿಯರ ಮುಂದಾಲೋಚನೆಯ ಪ್ರಯತ್ನ ಆಚರಣೆಯ ರೂಪದಲ್ಲಿ ಇಂದಿಗೂ ಆಚರಿಸ್ಪಡುತ್ತಿದೆ.