ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಅ.31: ಪೌರಾಣಿಕ ರಾಮಾಯಣ-ಮಹಾಭಾರತದಂತಹ ನಾಟಕಗಳು ನಮ್ಮ ಸಂಸ್ಕೃತಿ ಪರಂಪರೆಯ ಪ್ರತಿಬಿಂಬವಾಗಿವೆ ಎಂದು ಶಾಸಕ ಹೆಚ್.ಟಿ.ಮಂಜು ಹೇಳಿದರು.
ಪಟ್ಟಣದ ಶ್ರೀರಂಗ ಚಿತ್ರಮಂದಿರದ ಆವರಣದಲ್ಲಿ ಡಾ.ರಾಜಕುಮಾರ್‍ಕಲಾ ಸಂಘವು ಆಯೋಜಿಸಿರುವ 21 ದಿನಗಳ ಪೌರಾಣಿಕ ನಾಟಕೋತ್ಸವದಲ್ಲಿ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಪೌರಾಣಿಕ ನಾಟಕಗಳು ನ್ಯಾಯ, ನೀತಿ, ಧರ್ಮ, ಸತ್ಯದ ಸಂದೇಶ ಸಮಾಜಕ್ಕೆ ನೀಡುವ ಜೊತೆಗೆ ಒಬ್ಬ ಮನುಷ್ಯ ಹೇಗೆ ಜೀವನ ನಡೆಸಬೇಕು ಎಂಬ ಸಂದೇಶವನ್ನು ನಾಟಕಗಳಲ್ಲಿ ತಿಳಿಸಿಕೊಡುತ್ತವೆ ಎಂದರು.
ಪೌರಾಣಿಕ ನಾಟಕಗಳು ನಮ್ಮ ನಿಜ ಜೀವನದ ಪ್ರತಿ ಬಿಂಬವಾಗಿದೆ. ನಮ್ಮ ಸುತ್ತಮುತ್ತಲಿನ ಕುತಂತ್ರಿಗಳ ಬಗ್ಗೆ ಎಚ್ಚರವಾಗಿರುವಂತೆ ಜಾಗೃತಿ ಮೂಡಿಸುವ ಪಾತ್ರಗಳು ನಾಟಕದಲ್ಲಿ ನಮ್ಮ ಕಣ್ಣು ಮುಂದೆ ಬರುತ್ತವೆ ಎಂದರು.
ಡಾ.ರಾಜಕುಮಾರ್‍ಕಲಾ ಸಂಘದ ನೇತೃತ್ವ ವಹಿಸಿರುವ ಎಲ್.ಐ.ಸಿ.ಕುಮಾರ್, ಜೈ ಭುವನೇಶ್ವರಿ ರಂಗಕಲಾ ಸಂಘದ ಅಧ್ಯಕ್ಷ ಡಾ. ಕೆ.ಎನ್.ತಮ್ಮಯ್ಯ ಹಾಗೂವಿಶ್ರಾಂತ ಶಿಕ್ಷಕ ಶಂಕರೇಗೌಡರು, ಕಲಾವಿದರನ್ನು ಒಗ್ಗೂಡಿಸಿ ರಾಜ್ಯದ ವಿವಿಧ ಭಾಗಗಳಿಂದ ಪೌರಾಣಿಕ ನಾಟಕ ತಂಡಗಳನ್ನು
ಆಹ್ವಾನಿಸಿ 21 ದಿನಗಳ ಕಾಲ ಸತತವಾಗಿ ನಾಟಕಗಳ ಪ್ರದರ್ಶನ ನಡೆಸುವ ಮೂಲಕ ರಂಗಭೂಮಿ ಚಟುವಟಿಕೆ ಜೀವಂತವಾಗಿರಿಸಿರುವುದು ಸಂತೋಷ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಟಿಎಪಿಸಿಎಂಎಸ್ ಸಂಸ್ಥೆ ನೂತನ ಅಧ್ಯಕ್ಷ ತೆರ್ನೇನಹಳ್ಳಿ ಟಿ.ಬಲದೇವ್, ಸಮಾಜ ಸೇವಕ ಆರ್‍ಟಿಒ ಮಲ್ಲಿಕಾರ್ಜುನ್, ಗ್ರಾಪಂ ಸದಸ್ಯ ಶೀಳನೆರೆ ಸಿದ್ದೇಶ್, ಮಾದೇಗೌಡ ಆಸ್ಪತ್ರೆ ವ್ಯವಸ್ಥಾಪಕ ಬೋರೇಗೌಡ, ಶೀಳನೆರೆ ಗ್ರಾಪಂ ಉಪಾಧ್ಯಕ್ಷ ಎಸ್.ಕೆ. ಪ್ರಕಾಶ್, ಎಸ್.ಎಲ್.ಮೋಹನ್, ಪುರಸಭೆ ಮಾಜಿ ಅಧ್ಯಕ್ಷ ಚಂದ್ರೇಗೌಡ, ಕಲಾವಿದರಾದ ಹರಿಹರಪುರ ಮಹದೇವೇಗೌಡ, ಕೆ.ಕೆ.ಕೃಷ್ಣ, ಕಾಳಪ್ಪ, ಎಚ್.ಕೆ.ಸಿದ್ದರಾಜು, ಅಗ್ರಹಾರಬಾಚಹಳ್ಳಿ ಶಬ್ಬಿರ್ ಅಹಮದ್, ಮಡುವಿನಕೋಡಿ ಚಂದ್ರಶೇಖರ್,ಗ್ರಾ.ಪಂ. ಸದಸ್ಯ ಆರ್.ಶ್ರೀನಿವಾಸ್ ಸೇರಿದಂತೆ ಹಲವರಿದ್ದರು.


























