
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.22: ಪೊಲೀಸ್ ಇಲಾಖೆ ಶಿಸ್ತಿಗೆ ಹೆಸರುವಾಸಿ. ಇಂತಹ ಶಿಸ್ತು ರೂಢಿಸಿಕೊಳ್ಳಬೇಕಾದರೆ ಕ್ರೀಡೆಯಲ್ಲಿ ಭಾಗವಹಿಸುವುದು ಅಗತ್ಯ. ಜೊತೆಗೆ ಗುಂಪು ಕ್ರೀಡೆಗಳಿಂದ ನಾಯಕತ್ವದ ಮಹತ್ವವೂ ಅರಿವಿಗೆ ಬರಲಿದೆ ಎಂದು ಡಿಐಜಿ ವರ್ತಿಕಾ ಕಟೀಯಾರ ಹೇಳಿದರು.
ಅವರು ನಿನ್ನೆ ಸಂಜೆ ನಗರದ ಡಿಎಆರ್ ಮೈದಾನದಲ್ಲಿ ಮೂರು ದಿನಗಳ ಕಾಲನಡೆದ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಂಮಾರಂಭದಲ್ಲಿ ವಿಜೇತರಿಗೆ ಟ್ರೋಪಿಗಳನ್ನು ವಿತರಿಸಿ ಮಾತಮಾಡುತ್ತಿದ್ದರು. ಬಾರಿಯ ವಾರ್ಷಿಕ ಕ್ರೀಡಾಕೂಟವನ್ನು ಬಹಳ ಶಿಸ್ತು ಬದ್ಧತೆಯಿಂದ ನಡೆಸಿದ್ದೀರಿ. ಎಲ್ಲರು ಒಟ್ಟುಗೂಡಿ ಕ್ರೀಡೆಯಲ್ಲಿ ಭಾಗವಹಿಸಿ, ತಮ್ಮ ಪ್ರತಿಭೆ ಜತೆಗೆ ಎಲ್ಲರೊಟ್ಟಿಗೆ ಒಡಗೂಡಿ ಬೆರೆತಿದ್ದಿರಿ. ಗೆದ್ದವರಿಗೆಲ್ಲ ಅಭಿನಂದನೆ. ಸೋತವರು ನಿರಾಶರಾಗಬಾರದು. ಸೋಲು ಗೆಲುವಿನ ಮೆಟ್ಟಿಲು ಎನ್ನುವುದನ್ನು ಅರಿಯಬೇಕು. ಜೀವನವನ್ನು ಕ್ರೀಡೆಯಂತೆ ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳಬೇಕು. ಶಿಸ್ತು, ಸಂಯಮ, ಮೌಲ್ಯಯುತ ಜೀವನ ಅತ್ಯಂತ ಮುಖ್ಯ ಎಂದು ಹೇಳಿದರು.
ಈ ಮೂರು ದಿನಗಳ ಕಾಲ ಎಸ್ಪಿಯಿಂದ ಪಿಸಿವರೆಗೂ ಭಾಗವಹಿಸಿದ ಎಲ್ಲಾ ಆರಕ್ಷಕರಿಗೆ ನಾನು ಅಭಿನಂದನೆಯನ್ನು ತಿಳಿಸುತ್ತೇನೆ. ಆರಕ್ಷಕರು ತಮ್ಮ ಕೆಲಸದ ಸಮಯದಲ್ಲಿ ಎರಡು ಮೂರು ದಿನಗಳ ಕಾಲ ನಿರಂತರವಾಗಿ ಕೆಲಸ ನಿರ್ವಹಿಸಬೇಕಾಗುತ್ತದೆ. ಈ ಸಮಯದಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಿರಬೇಕು. ಇಲ್ಲಿ ಪೊಲೀಸ್ ಕುಟುಂಬ ವರ್ಗ ಹಾಗೂ ಮಕ್ಕಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಕ್ಕೆ ನನಗೆ ಸಂತೋಷ ಉಂಟು ಮಾಡಿದೆ ಎಂದರು.
ಎಸ್ಪಿ. ಡಾ. ಶೋಭಾರಾಣಿ ವಿ.ಜೆ ಮಾತನಾಡಿ, ಈ ಮೂರು ದಿನಗಳಲ್ಲಿ ನಡೆದ ಕ್ರೀಡಾಕೂಟದಲ್ಲಿ ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಹಳ ಉತ್ಸಾಹದಿಂದ ಭಾಗವಹಿಸಿದ್ದೀರಿ ಹೀಗೆ ಮುಂದಿನ ದಿನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಆರು ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು. ಪೋಲಿಸ್ ಸಿಬ್ಬಂದಿಗಳು ಪೋಲಿಸ್ ದ್ವಜವನ್ನು ಹಸ್ತಾಂತರಿಸಿದರು. ಎಸ್ಪಿ ವೀನ್ ಕುಮಾರ್ ಉಉಪಸ್ಥಿತರಿದ್ದರು.
























