ಪೈಲಟ್ ಇಲ್ಲದೆ 10 ನಿಮಿಷ ಹಾರಾಟ ನಡೆಸಿದ ವಿಮಾನ

ನವದೆಹಲಿ,ಮೇ.18-ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೊಂದು ಮುಂದುವರೆದಿದೆ ಎಂದರೆ ಚಾಲಕರಹಿತ ಕಾರುಗಳು ಮತ್ತು ಪೈಲಟ್‍ರಹಿತ ಮೆಟ್ರೋಗಳು ಅಸ್ತಿತ್ವಕ್ಕೆ ಬಂದಿವೆ. ಆದರೆ ಪೈಲಟ್ ಇಲ್ಲದೆ ವಿಮಾನವೂ ಹಾರಬಲ್ಲದು ಎಂದು ಯೋಚಿಸಲು ಸಾಧ್ಯವೇ? ಪೈಲಟ್ ಇಲ್ಲದೆ ವಿಮಾನ ಹಾರಿಸಲು ಇನ್ನೂ ಯಾವುದೇ ತಂತ್ರಜ್ಞಾನ ಅಸ್ತಿತ್ವಕ್ಕೆ ಬಂದಿಲ್ಲ, ಆದರೆ 199 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದ ವಿಮಾನವು ಪೈಲಟ್ ಇಲ್ಲದೆ ಸುಮಾರು 10 ನಿಮಿಷಗಳ ಕಾಲ ಹಾರಿದ ಘಟನೆ ಬೆಳಕಿಗೆ ಬಂದಿದೆ.


ಕಳೆದ ವರ್ಷ ಸ್ಪೇನ್‍ಗೆ ಹೋಗುತ್ತಿದ್ದ ಲುಫ್ಥಾನ್ಸ ವಿಮಾನವು ಸಹ ಪೈಲಟ್ ಕಾಕ್‍ಪಿಟ್‍ನಲ್ಲಿ ಒಬ್ಬಂಟಿಯಾಗಿದ್ದಾಗ ಪ್ರಜ್ಞೆ ತಪ್ಪಿದ ನಂತರ 10 ನಿಮಿಷಗಳ ಕಾಲ ಪೈಲಟ್ ಇಲ್ಲದೆ ಹಾರಾಟ ನಡೆಸಿದೆ ಎಂದು ವರದಿ ಆಗಿದೆ.


ಕಳೆದ ವರ್ಷ ಫೆಬ್ರವರಿ 17 ರಂದು ಫ್ರಾಂಕ್‍ಫರ್ಟ್‍ನಿಂದ ಸ್ಪೇನ್‍ನ ಸೆವಿಲ್ಲಾಗೆ ಹಾರಾಟ ನಡೆಸುತ್ತಿದ್ದಾಗ ಏರ್‍ಬಸ್ ಎ321 ರ ಸಹ-ಪೈಲಟ್ ವಿಮಾನದ ಕ್ಯಾಪ್ಟನ್ ಶೌಚಾಲಯದಲ್ಲಿದ್ದಾಗ ಪ್ರಜ್ಞೆ ತಪ್ಪಿದರು ಎಂದು ಸ್ಪ್ಯಾನಿಷ್ ಅಪಘಾತ ತನಿಖಾ ಪ್ರಾಧಿಕಾರ ಸಿಐಎಐಎಸಿ ವರದಿಯನ್ನು ಉಲ್ಲೇಖಿಸಿ ಡಿಪಿಎ ವರದಿ ಮಾಡಿದೆ.


ವರದಿಯ ಪ್ರಕಾರ, ವಿಮಾನದಲ್ಲಿ 199 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು, ವಿಮಾನವು ಪೈಲಟ್ ಇಲ್ಲದೆ ಸುಮಾರು 10 ನಿಮಿಷಗಳ ಕಾಲ ಹಾರಾಟ ನಡೆಸಿದೆ. ಕ್ಯಾಪ್ಟನ್ ಶೌಚಾಲಯದಿಂದ ಹೊರಬಂದಾಗ, ಕ್ಯಾಬಿನ್ ಬಾಗಿಲು ತೆರೆಯಲು ತಟ್ಟಿದ್ದಾನೆ. ಆದರೆ ಬಾಗಿಲು ತೆರೆಯಲಿಲ್ಲ. ಅದರ ನಂತರ ಕ್ಯಾಪ್ಟನ್ ತುರ್ತು ಗುಂಡಿಯನ್ನು ಒತ್ತಿ ಸಹಾಯ ಕೇಳಿದ್ದಾರೆ, ಆದರೆ ಅಷ್ಟರಲ್ಲಿ ಸಹ ಪೈಲಟ್ ಪ್ರಜ್ಞೆ ಮರಳಿ ಬಂದು ಕಾಕ್‍ಪಿಟ್ ಬಾಗಿಲು ತೆರೆದಿದ್ದಾರೆ. ಇದು ಪೂರ್ಣ 10 ನಿಮಿಷಗಳ ಕಾಲ ಮುಂದುವರೆಯಿತು. ಇದಾದ ನಂತರ ವಿಮಾನವನ್ನು ಮ್ಯಾಡ್ರಿಡ್‍ನಲ್ಲಿ ಇಳಿಸಲಾಗಿದೆ.
ಸಹ ಪೈಲಟ್ ಪ್ರಜ್ಞೆ ತಪ್ಪಿದ ನಂತರ, ಸಕ್ರಿಯ ಆಟೋಪೈಲಟ್‍ನಿಂದಾಗಿ ವಿಮಾನವು ಸ್ಥಿರವಾಗಿ ಹಾರಲು ಸಾಧ್ಯವಾಗಿದೆ. ಈ ಸಮಯದಲ್ಲಿ, ಧ್ವನಿ ರೆಕಾರ್ಡರ್ ಕಾಕ್‍ಪಿಟ್‍ನಲ್ಲಿ ವಿಚಿತ್ರ ಶಬ್ದಗಳನ್ನು ದಾಖಲಿಸಿದೆ, ಅದು ಗಂಭೀರ ಆರೋಗ್ಯ ತುರ್ತುಸ್ಥಿತಿಗೆ ಅನುಗುಣವಾಗಿದೆ ಎಂದು ಡಿಪಿಎ ವರದಿ ಮಾಡಿದೆ.